'20 ಕಾಂಗ್ರೆಸ್‌ ಹಾಲಿ ಶಾಸಕರು ಶೀಘ್ರದಲ್ಲೇ ಬಿಜೆಪಿಗೆ' : ಸ್ಫೋಟಕ ಪಕ್ಷಾಂತರ ಮಾಹಿತಿ?

By Kannadaprabha NewsFirst Published Sep 30, 2021, 1:07 PM IST
Highlights
  • ಪಕ್ಷಾಂತರ ಪರ್ವಕ್ಕೆ ಮುಂದಾದ ಕಾಂಗ್ರೆಸ್‌ನ 20 ಶಾಸಕರು ಶೀಘ್ರದಲ್ಲಿ ಬಿಜೆಪಿ ಸೇರ್ಪಡೆ
  • ಬಿಜೆಪಿಯ ಯಾವ ಶಾಸಕರು ಅಥವಾ ಮಾಜಿ ಶಾಸಕರು ಪಕ್ಷ ಬಿಡುವ ಮಾತೇ ಇಲ್ಲ 

ತುಮಕೂರು (ಸೆ.30):  ಪಕ್ಷಾಂತರ ಪರ್ವಕ್ಕೆ ಮುಂದಾದ ಕಾಂಗ್ರೆಸ್‌ನ (Congress) 20 ಶಾಸಕರು ಶೀಘ್ರದಲ್ಲಿ ಬಿಜೆಪಿ (BJP) ಸೇರ್ಪಡೆಗೊಳ್ಳಲಿದ್ದಾರೆ. ಆದರೆ ಬಿಜೆಪಿಯ ಯಾವ ಶಾಸಕರು ಅಥವಾ ಮಾಜಿ ಶಾಸಕರು ಪಕ್ಷ ಬಿಡುವ ಮಾತೇ ಇಲ್ಲ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ (Masala Jayaram) ಸ್ಪಷ್ಟಪಡಿಸಿದರು. 

ತಾಲೂಕಿನ ಸಿ.ಎಸ್.ಪುರ ಹೋಬಳಿ ಕೆಂಚನಹಳ್ಳಿ ಕೆರೆಯು ಇಪ್ಪತು ವರ್ಷದ ಬಳಿಕ ಹೇಮೆಯಿಂದ ತುಂಬಿದ ಹಿನ್ನೆಲೆ ಗಂಗಾಪೂಜೆ ನೆರವೇರಿಸಿ ಬಾಗಿನ ಸಮರ್ಪಿಸಿ ಮಾತನಾಡಿದ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಶಾಸಕ ಸುರೇಶ್‌ಗೌಡ (Suresh Gowda) ತಮ್ಮ ಗ್ರಾಮಾಂತರ ಕ್ಷೇತ್ರದಲ್ಲಿ ಸಂಘಟನೆಗೆ ಸಮಯ ಸಿಗದ ಹಿನ್ನೆಲೆ ಜವಾಬ್ದಾರಿಯಿಂದ ವಿಮುಕ್ತಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡುವ ಮಾತಿಲ್ಲ. ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಶುದ್ದ ಸುಳ್ಳು ಎಂದರು. 

ರಾಜೀನಾಮೆ ಬಳಿಕ ಕಟೀಲ್ ವಿರುದ್ಧ ಅಸಮಾಧಾನ, ಬಿಎಸ್‌ವೈ ಭೇಟಿಯಾದ ಸುರೇಶ್ ಗೌಡ

ಸಂಸದರ ಚುನಾವಣೆ, ಶಿರಾ ಉಪಚುನಾವಣೆ (BY Election) ಮತ್ತು ಎಂಎಲ್‌ಸಿ ಚುನಾವಣೆಯನ್ನು ಸಮರ್ಥವಾಗಿ ನಿಬಾಯಿಸಿದ ಸುರೇಶ್‌ಗೌಡ ಅವರ ಸಾರಥ್ಯ ಜಿಲ್ಲೆಗೆ ಅವಶ್ಯವಿದೆ. ಈ ಬಗ್ಗೆ ರಾಜ್ಯಾಧ್ಯಕ್ಷರ ಬಳಿ ಚರ್ಚಿಸುತ್ತೇವೆ. ಕಾಂಗ್ರೆಸ್‌ನತ್ತ ಹೋಗುತ್ತಾರೆ ಎಂದು ಮಾಧ್ಯಮದಲ್ಲಿ ಮಾತ್ರ ಬರುತ್ತಿದೆ. ಎಲ್ಲಿಯೂ ಈ ಬಗ್ಗೆ ಹೇಳಿಕೆ ನೀಡಿಲ್ಲ ಎಂದ ಅವರು ಸಿ.ಎಸ್.ಪುರ ಭಾಗದಲ್ಲಿ 40 ಕೋಟಿ ರೂಗಳ ಕೆಲಸಗಳು ಶೀಘ್ರದಲ್ಲಿ ಚಾಲನೆಗೊಳ್ಳಲಿದೆ. ಈ ಜತೆಗೆ ಸಿಸಿ ರಸ್ತೆಗಳು ಬಹುತೇಕ ಗ್ರಾಮದಲ್ಲಿ ನಿರ್ಮಿಸಲಾಗಿದೆ. ಇಂದು ಸಹ ಒಂದು ಕೋಟಿ ರೂಗಳ ರಸ್ತೆ ಮತ್ತು ಚರಂಡಿ ಕೆಲಸಕ್ಕೆ ಪೂಜೆ ಮಾಡಲಾಗಿದೆ ಎಂದರು. 

ಹೇಮೆ ಹರಿದು ರೈತರಲ್ಲಿ ಉತ್ಸಾಹ ತುಂಬಿದೆ: ಹೇಮಾವತಿ (Hemavathi River) ನೀರು ತುರುವೇಕೆರೆ ಕ್ಷೇತ್ರಕ್ಕೆ ಸತತ ಮೂರು ವರ್ಷದಿಂದ ಹರಿದು ರೈತರಲ್ಲಿ ಉತ್ಸಾಹ ತುಂಬಿದೆ. ಸಿ.ಎಸ್.ಪುರ ಹೋಬಳಿಯಲ್ಲಿ ಮಾವಿನಹಳ್ಳಿ, ಇಡಗೂರು, ಚಂಗಾವಿ ಮತ್ತು ಕೆಂಚನಹಳ್ಳಿ ಕೆರೆ ಕೋಡಿ ಹರಿದಿದೆ. ಸಿ.ಎಸ್.ಪುರ ಕೆರೆ ಮತ್ತು ಕಲ್ಲೂರು ಕೆರೆಗೆ ನೀರು ಬರಲಿದೆ. ಈ ಜೊತೆಗೆ ಯರನಹಳ್ಳಿ, ಸೀಗೇಹಳ್ಳಿ, ಚಿಕ್ಕ ಯಡಿಯೂರು ಕೆರೆಗೂ ನೀರು ಹರಿಯುತ್ತಿದೆ. ಸಮರ್ಥವಾಗಿ ನೀರು ಹರಿಸುವಲ್ಲಿ ಸಹಕರಿಸಿದ ಜಿಲ್ಲಾ ಸಚಿವ ಮಾಧುಸ್ವಾಮಿ ಅವರನ್ನು ಸ್ಮರಿಸಬೇಕಿದೆ. 

ಬಿಜೆಪಿ ಸೇರಲು ಕಾಂಗ್ರೆಸ್ಸಿನ ಹತ್ತಾರು ಜನ ಸಿದ್ಧರಿದ್ದಾರೆ: ಕಟೀಲ್ ಸ್ಫೋಟಕ ಹೇಳಿಕೆ

ರೈತರ ನಡುವೆ ಭಿನ್ನಾಭಿಪ್ರಾಯ ಉಂಟು ಮಾಡುತ್ತಿದ್ದ ಕೆಲ ಚಾನಲ್‌ಗಳಿಗೆ ಪ್ರತ್ಯೇಕ ತೂಬು ನಿರ್ಮಿಸಿ ವೈಮನಸ್ಯ ದೂರ ಮಾಡಲಾಗಿದೆ ಎಂದ ಅವರು ಸಿ.ಎಸ್.ಪುರ ಭಾಗದ ಉದ್ಯಮಿ ನಾಗರಾಜು ಅವರು ಇಂದಿಗೂ ಬಿಜೆಪಿಯಲ್ಲಿದ್ದಾರೆ. ಇಲ್ಲಿನ ಜನರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸಲ್ಲದ ವದಂತಿಗೆ ಪ್ರತಿಕ್ರಿಯೆಬೇಡ ಎಂದರು. ಸಿ.ಕೊಡಗೀಹಳ್ಳಿ ಗ್ರಾಮದಿಂದ ಸುಮಾರು ಎರಡು ಕಿಮೀ ದೂರದ ಕೆಂಚನಹಳ್ಳಿ ಕೆರೆಯವರೆಗೆ ಶಾಸಕ ಮಸಾಲ ಜಯರಾಮ್ ಅವರನ್ನು ಎತ್ತಿನಗಾಡಿ ಮೂಲಕ ಮೆರವಣಿಗೆ ಮಾಡಿದ ನೂರಾರು ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದರು. 

ಗ್ರಾಪಂ ಅಧ್ಯಕ್ಷ ಕೆಂಪರಾಜು, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಮದುವೆಮನೆ ಕುಮಾರ್, ಸಿದ್ದೇಗೌಡ, ಬೋರೇಗೌಡ, ಕಲ್ಲೂರು ಸುರೇಶ್, ವಸಂತಕುಮಾರ್, ರಘು, ಸೋಮಣ್ಣ, ರವಿ, ರಮೇಶ್, ಪ್ರಕಾಶ್, ಪಾಂಡಣ್ಣ, ಸದಾಶಿವು ಇದ್ದರು.  

click me!