
ಬೆಂಗಳೂರು : ಹೊಸ ವರ್ಷಾಚರಣೆಯ ವೇಳೆ ಬುಧವಾರ ತಡರಾತ್ರಿ ನಗರದಲ್ಲಿ ಕೆಲವೊಂದು ಅವಾಂತರಗಳು ನಡೆದಿದ್ದು, ಕುಡಿದ ಮತ್ತಿನಲ್ಲಿ ಕೆಲವರು ಹೊಡೆದಾಡಿಕೊಂಡಿದ್ದರೆ ಮತ್ತೆ ಕೆಲವರು ಮದ್ಯದ ಅಮಲಿನಲ್ಲಿ ಅಪಘಾತ ಎಸಗಿ ಅಮಾಯಕರನ್ನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತ ನಗರ ಪೊಲೀಸರು 2026ರ ವರ್ಷಾಚರಣೆಯ ವೇಳೆ ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿದಂತೆ ಮತ್ತಿತರ ಕಡೆ 20 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜಿಸಿ ಬಂದೋಬಸ್ತ್ ಮಾಡಿದ್ದರಿಂದ ರಾಜಧಾನಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ ಕೆಲವರು ಮದ್ಯದಲ್ಲಿ ಅಮಲಿನಲ್ಲಿ ಕೆಲವೊಂದು ಅವಾಂತರ ಸೃಷ್ಟಿಸಿದ್ದಾರೆ.
ಮದ್ಯಸೇವಿಸಿಕೊಂಡು ಮಾಲ್ ಆಫ್ ಏಷ್ಯಾದಿಂದ ಅತಿ ವೇಗವಾಗಿ ಹೊರ ಬಂದ ಕಾರು ಚಾಲಕ ಬ್ಯಾರಿಕೇಡ್‌ಗೆ ಗುದ್ದಿ ಬಳಿಕ ನಾಲ್ವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಗಾಯಗೊಳಿಸಿರುವ ಘಟನೆ ಸಂಜಯ್ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ಅಕ್ಕಮ್ಮ, ಚಂದ್ರಶೇಖರ್, ರಾಜಲಕ್ಷ್ಮಿ, ಪ್ರಜ್ವಲ್ ಎಂಬುವರು ಗಾಯಗೊಂಡಿದ್ದಾರೆ. ಮಾಲ್ ಆಫ್ ಏಷ್ಯಾದ ಗೇಟ್ ನಂ.3ರ ಬಳಿ ಬುಧವಾರ ರಾತ್ರಿ 10.15ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಸಂಬಂಧ ಅಡ್ವಕೇಟ್ ಆಗಿರುವ ಚಾಲಕ ಸುನಿಲ್ ಕುಮಾರ್ ಸಿಂಗ್ (48) ಹಾಗೂ ಮಾಲ್ ಆಫ್ ಏಷ್ಯಾದ ಭದ್ರತಾ ವಿಭಾಗದ ಉಸ್ತುವಾರಿಯ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಸಂಜಯ್ ನಗರ ಸಂಚಾರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಾಹನವನ್ನು ಜಪ್ತಿ ಮಾಡಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ರಾತ್ರಿ 10.15 ರ ಸುಮಾರಿಗೆ ಮಾಲ್ ಆಫ್ ಏಷ್ಯಾ ಆವರಣದಿಂದ ಅತಿವೇಗವಾಗಿ ಬಂದ ಮಹೀಂದ್ರ ಎಕ್ಸ್‌ಯುವಿ-700 ಕಾರು ಮೊದಲು ಪಾದಚಾರಿ ಮಾರ್ಗಕ್ಕೆ ಅಳವಡಿಸಿದ್ದ ಬ್ಯಾರಿಕೇಡ್‌ಗೆ ಏಕಾಏಕಿ ಡಿಕ್ಕಿ ಹೊಡೆದಿದೆ. ಅದಾದ ನಂತರ ಪಾದಚಾರಿ ಮಾರ್ಗದಲ್ಲಿ ತೆರಳುತ್ತಿದ್ದ ನಾಲ್ವರಿಗೂ ಗುದ್ದಿದೆ. ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರು ಚಾಲಕ ಮದ್ಯದ ಅಮಲಿನಲ್ಲಿ ಪಾದಚಾರಿ ಮಾರ್ಗದ ಮೇಲೆ ಕಾರು ಹತ್ತಿಸಿದ್ದಾನೆ. ಚಾಲಕ ಸುನಿಲ್ ಕುಮಾರ್ ಹಾಗೂ ಮಾಲ್‌ಗೆ ಬರುವವರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಮಾಲ್ ಆಫ್ ಏಷ್ಯಾದ ಭದ್ರತಾ ವಿಭಾಗದ ಉಸ್ತುವಾರಿ ವಿರುದ್ಧ ಪ್ರಕರಣ ದಾಖಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿಯರ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನ ತಲೆಗೆ ಗಾಯವಾಗಿರುವ ಘಟನೆ ಎಂ.ಜಿ ರಸ್ತೆಯಲ್ಲಿ ನಡೆದಿದೆ. ಸಂಭ್ರಮ ಮುಗಿಸಿ ತೆರಳುವಾಗ ಯುವತಿಯರನ್ನು ರೇಗಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಮಾಹಿತಿ ಬಂದ ಕೂಡಲೇ ಗಾಯಾಳು ಯುವಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಪೊಲೀಸರು ಗಾಯಾಳು ಸೇರಿ ನಾಲ್ವರನ್ನು ವಶಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಘಟನೆ-3 ಪಬ್‌ನಲ್ಲಿ ಗಲಾಟೆ:
ಚರ್ಚ್‌ಸ್ಟ್ರೀಟ್‌ನಲ್ಲಿ ತಡರಾತ್ರಿ 12 ಗಂಟೆಗೆ ಸಂಭ್ರಮ ಮುಗಿಸಿದ ನಂತರ ಗಲಾಟೆ ನಡೆದಿದೆ. ಚರ್ಚ್‌ಸ್ಟ್ರೀಟ್‌ನ ಪಬ್‌ವೊಂದಕ್ಕೆ ಬಂದಿದ್ದ ಒಂದೇ ಗುಂಪಿನ ಯುವಕ-ಯುವತಿಯರ ಮಧ್ಯೆ ಕಿರಿಕ್ ನಡೆದು ವಾಗ್ವಾದವಾಗಿದೆ. ಹೊಡೆದಾಟಕ್ಕೆ ಮುಂದಾಗಿದ್ದರು. ಕೂಡಲೇ ಸ್ಥಳದಲ್ಲಿದ್ದ ಪೊಲೀರು ಪಬ್‌ನಿಂದ ಎಲ್ಲರನ್ನೂ ಹೊರಗೆ ಕಳಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಘಟನೆ-4 ಮಹಿಳೆಯರ ಜತೆ ಅನುಚಿತ ವರ್ತನೆ:
ಚರ್ಚ್‌ಸ್ಟ್ರೀಟ್‌ನಲ್ಲಿ ಸಂಭ್ರಮಕ್ಕೂ ಮುನ್ನ ಮಹಿಳೆಯರು ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಜತೆ ಕೆಲ ಪುಂಡರು ಅನುಚಿತ ವರ್ತನೆ ತೋರಿದ್ದಾರೆ. ಅನುಚಿತ ವರ್ತನೆ ತೋರಿದ ಮೂವರು ಪುಂಡರನ್ನು ಸಿಸಿಬಿ ಪೊಲೀಸರು ವಶಪಡೆದಿದ್ದಾರೆ.
ಘಟನೆ-5 ಕಾರು ಟಚ್ ಆಗಿದ್ದಕ್ಕೆ ಗಲಾಟೆ:
ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಕಾರ್ಪೊರೇಷನ್ ಸರ್ಕಲ್ ಬಳಿ ನಡೆದಿದೆ. ಕಾರಿನಲ್ಲಿ ಹಿಂದಿನಿಂದ ಬಂದಿದ್ದ ಯುವಕರ ಗುಂಪೊಂದು ಕಾರಿಗೆ ಗುದ್ದಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ದ ಕ್ಯಾಬ್ ಚಾಲಕನ ಮೇಲೆ ಪುಂಡರ ಗುಂಪು ಹಲ್ಲೆ ಮಾಡಿದೆ. ಚಾಲಕನನ್ನು ಹಿಂದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಘಟನೆ-6 ಮತ್ತಿನಲ್ಲಿ ಆವಾಜ್:
ಸಂಭ್ರಮಾಚರಣೆಗೆಂದು ಇಂದಿರಾನಗರದ ಬಳಿ ಬಂದಿದ್ದ ವ್ಯಕ್ತಿಯೊಬ್ಬ ಕುಡಿದು ಪೊಲೀಸರಿಗೆ ಆವಾಜ್ ಹಾಕಿದ್ದಾನೆ. ಮದ್ಯಪಾನ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದವನಿಗೆ ಪೊಲೀಸರು ಕಪಾಳ ಮೋಕ್ಷ ಮಾಡಿ ಬುದ್ದಿ ಹೇಳಿದ್ದಾರೆ.
ಘಟನೆ-7 ಯುವಕರ ಹೊಡೆದಾಟ:
ಮಲ್ಲತ್ತಹಳ್ಳಿಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ವೊಂದರಲ್ಲಿ ಕುಡಿದ ಮತ್ತಿನಲ್ಲಿ ಕೆಲ ಯುವಕರ ನಡುವೆ ಗಲಾಟೆಯಾಗಿದೆ. ಈ ವೇಳೆ ಮಧ್ಯ ಪ್ರವೇಶ ಮಾಡಿದ ಬೌನ್ಸರ್‌ಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಮಾಹಿತಿ ಬಂದ ಕೂಡಲೇ ಜ್ಞಾನಭಾರತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ.
ಯುವಕನಿಗೆ ಬಿಸಿ ಮುಟ್ಟಿಸಿದ ಖಾಕಿ:
ರಾತ್ರಿ 11ರ ಸುಮಾರಿಗೆ ಕಪ್ಪು ಬಣ್ಣದ ಥಾರ್‌ನಲ್ಲಿ ಯುವಕರಿಬ್ಬರು ಬ್ರಿಗೇಡ್ ರಸ್ತೆಯ ಜಂಕ್ಷನ್‌ಗೆ ಬಂದಿದ್ದರು. ಪರಿಶೀಲನೆ ಸಲುವಾಗಿ ಅಲ್ಲಿಗೆ ತೆರಳಿದ ಸೀಮಂತ್ ಕುಮಾರ್ ಸಿಂಗ್, ಕಾರಿನ ಕಿಟಕಿ ಗಾಜು ಇಳಿಸಲು ಸೂಚಿಸಿದ್ದರು. ದಾಖಲೆಗಳನ್ನು ಕೇಳಿದರು. ಆಗ ಕಮಿಷನರ್ ಅವರನ್ನು ಕಂಡು ಗಾಬರಿಯಾದ ಯುವಕ, ದಾಖಲೆ ತೆಗೆಯಲು ತುಸು ತಡಬಡಾಯಿಸಿದ. ಈ ವೇಳೆ ಪೊಲೀಸರು ಗದರಿದ್ದಾರೆ. ಈ ವೇಳೆ ಯುವಕ ಪೆಚ್ಚಾಗಿದ್ದಾನೆ.
ಗೆಳೆಯನ ಮೇಲೆ ಯುವತಿ ಹಲ್ಲೆ:
ಒಪೇರಾ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಗೆಳೆಯನ ಮೇಲೆ ಯುವತಿ ಹಲ್ಲೆ ಮಾಡಿದ್ದಾಳೆ. ನ್ಯೂಇಯರ್ ಆಚರಣೆಗೆ ಆಗಮಿಸಿದ್ದ ಜೋಡಿ ನಡುರೋಡಲ್ಲೇ ಹೈಡ್ರಾಮಾ ಮಾಡಿದೆ. ನಶೆಯಲ್ಲಿದ್ದ ಜೋಡಿಯನ್ನು ಸಮಾಧಾನಪಡಿಸಲು ಪೊಲೀಸರು ಹರಸಹಾಸಪಟ್ಟರು.
ಲಾಠಿ ರುಚಿ ತೋರಿಸಿದ ಖಾಕಿ:
ಬ್ರಿಗೇಡ್ ರಸ್ತೆಯಲ್ಲಿ ಪಟಾಕಿ ಸಿಡಿಸಿದ್ದಕ್ಕೆ ಪೊಲೀಸರು ಕೆಲ ಲಾಠಿ ರುಚಿ ತೋರಿಸಿದ್ದಾರೆ. ನ್ಯೂ ಇಯರ್ ಖುಷಿಯಲ್ಲಿ ಯುವಕರು ನಡುರಸ್ತೆಯಲ್ಲಿ ಪಟಾಕಿ ಸಿಡಿಸಿದ್ದರು. ರಸ್ತೆಯಲ್ಲೇ ಪಟಾಕಿ ಹಚ್ಚಿದಕ್ಕೆ ಕುಡಿದು ಮತ್ತಿನಲ್ಲಿದ್ದ ಯುವಕರ ಗುಂಪಿಗೆ ಪೊಲೀಸರು ಲಘು ಲಾಠಿ ಬೀಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ವಿಡಿಯೋ ವೈರಲ್:
ಕೋರಮಂಗಲದಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ಮೈಮೇಲೆ ಪ್ರಜ್ಞೆ ಇಲ್ಲದೆ ಬಿದ್ದಿದ್ದ ಯುವತಿಯನ್ನು ಮಹಿಳಾ ಪೊಲೀಸ್ ಸಿಬ್ಬಂದಿ ಕರೆದೊಯ್ಯುತ್ತಿದ್ದಾರೆ. ಆಗ ಹಿಂದಿನಿಂದ ಬಂದ ಸ್ನೇಹಿತ ಆಕೆಯ ಬಟ್ಟೆಯನ್ನು ಸರಿ ಪಡಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.