ಅರ್ಜಿ ಸಲ್ಲಿಸಿ ಹಣ ಪಾವತಿಸಿದ ನಮಗೂ ಮನೆ ಕೊಡಿ : ಜಿಬಿಎಗೆ ಆಗ್ರಹ

Kannadaprabha News   | Kannada Prabha
Published : Jan 02, 2026, 04:37 AM IST
GBA

ಸಾರಾಂಶ

ಹಲವು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿ ಮುಂಗಡ ಪಾವತಿಸಿರುವ ನಮಗೂ ಮನೆ ಕೊಡಿ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ‘ಅಮೃತ ಮಹೋತ್ಸವ ಯೋಜನೆ’ಯ ಫಲಾನುಭವಿಗಳು ಗುರುವಾರ ರಾಜೀವ್ ಗಾಂಧಿ ವಸತಿ ನಿಗಮದ (ಆರ್‌ಜಿಎಚ್‌ಸಿಎಲ್‌) ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರು : ಹಲವು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿ ಮುಂಗಡ ಪಾವತಿಸಿರುವ ನಮಗೂ ಮನೆ ಕೊಡಿ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ‘ಅಮೃತ ಮಹೋತ್ಸವ ಯೋಜನೆ’ಯ ಫಲಾನುಭವಿಗಳು ಗುರುವಾರ ರಾಜೀವ್ ಗಾಂಧಿ ವಸತಿ ನಿಗಮದ (ಆರ್‌ಜಿಎಚ್‌ಸಿಎಲ್‌) ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಯಲಹಂಕ ಕೋಗಿಲು ಪ್ರದೇಶದಲ್ಲಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದ ಅಕ್ರಮ ವಾಸಿಗಳ ಮನೆಗಳನ್ನು ತೆರವುಗೊಳಿಸಿ, ತ್ವರಿತವಾಗಿ ಮನೆಗಳ ಹಂಚಿಕೆಗೆ ಪ್ರಕ್ರಿಯೆ ನಡೆಸಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ.

ಬೆಂಗಳೂರು ನಗರದ ವಸತಿ ರಹಿತರಿಗೆ ಸಬ್ಸಿಡಿ ದರದಲ್ಲಿ 550 ಜನರಿಗೆ ಮನೆಗಳನ್ನು ಒದಗಿಸಲು ಜಿಬಿಎನ ಅಮೃತ ಮಹೋತ್ಸವ ಯೋಜನೆಯಡಿ ಯೋಜನೆ ರೂಪಿಸಲಾಗಿತ್ತು. ಅದರಂತೆ, ಮುಖ್ಯಮಂತ್ರಿಯವರ 1 ಲಕ್ಷ ಮನೆ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳಲ್ಲಿ 550 ಫ್ಲ್ಯಾಟ್‌ಗಳ ಹಂಚಿಕೆಗೆ ನಿರ್ಧರಿಸಲಾಗಿತ್ತು. ಆದರೆ, ಅನೇಕ ವರ್ಷಗಳಾದರೂ ಫಲಾನುಭವಿಗಳಾಗಿರುವ ನಮಗೆ ಮನೆಗಳನ್ನು ಹಂಚಿಕೆ ಮಾಡುತ್ತಿಲ್ಲ ಎಂದು ಆರೋಪಿಸಿ ನೂರಾರು ಜನರು ಪ್ರತಿಭಟನೆ ನಡೆಸಿದರು.

ಜಿಬಿಎದಿಂದ ಪಟ್ಟಿ ಬರಬೇಕಿದೆ:

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಆರ್‌ಜಿಎಚ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಶಿನ್ನಾಳ್ಕರ್, 1 ಬಿಎಚ್‌ಕೆ ಫ್ಲ್ಯಾಟ್‌ಗಳು ಹಂಚಿಕೆಗೆ ಸಿದ್ದವಾಗಿವೆ. ಫಲಾನುಭವಿಗಳ ಪಾಲಿನ ಜಿಬಿಎ ಸಬ್ಸಿಡಿ ತಲಾ 5 ಲಕ್ಷ ರು.ಯಂತೆ 27.50 ಕೋಟಿ ರು. ಪಾವತಿಯಾಗಿದೆ. ಆದರೆ, ಫಲಾನುಭವಿಗಳ ಪಟ್ಟಿ ಜಿಬಿಎದಿಂದ ಬರಲು ವಿಳಂಬವಾಗಿರುವ ಕಾರಣ ಹಂಚಿಕೆ ವಿಳಂಬವಾಗಿದೆ ಎಂದು ತಿಳಿಸಿದರು.

ಫಲಾನುಭವಿಗಳ ಆಯ್ಕೆಯಲ್ಲಿ ಲೋಪ

ಅರ್ಜಿ ಸಲ್ಲಿಸಿದವರಲ್ಲಿ ಅರ್ಹರನ್ನು ಜಿಬಿಎ ವತಿಯಿಂದಲೇ ಗುರುತಿಸಿ ಮನೆ ಒದಗಿಸಬೇಕು ಎನ್ನುವುದು ಅಮೃತ ಮಹೋತ್ಸವ ಯೋಜನೆಯ ಮೂಲ ಆಶಯ. ಆದರೆ, ಆರ್‌ಜಿಎಚ್‌ಸಿಎಲ್‌ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವ ಮೂಲಕ ಯೋಜನೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ, ಫಲಾನುಭವಿಗಳ ಆಯ್ಕೆ ವಿಚಾರವಾಗಿ ಜಿಬಿಎ ವತಿಯಿಂದ ಫಲಾನುಭವಿಗಳ ಪಟ್ಟಿ ಪಡೆದು ಫ್ಲ್ಯಾಟ್ ಹಂಚಿಕೆ ಮಾಡಲು ಆರ್‌ಜಿಎಚ್‌ಸಿಎಲ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

PREV
Read more Articles on
click me!

Recommended Stories

ಸಮಾಜ ಶುದ್ಧೀಕರಣಕ್ಕೆ ಅಧ್ಯಾತ್ಮ ಅಗತ್ಯ : ಡಾ.ಸಿ.ಎನ್‌.ಮಂಜುನಾಥ್‌
ಬೆಂಗಳೂರು ನಗರದ 10 ಹೆರಿಗೆ ಆಸ್ಪತ್ರೆಗಳು ಬಂದ್‌ : ಸಾರ್ವಜನಿಕರು ಪರದಾಟ