ಬೆಳಗಾವಿ: ಸಿಹಿಗಿಂತ ಕಹಿಯಲ್ಲೇ ಕಳೆಯಿತು 2022..!

By Kannadaprabha News  |  First Published Jan 1, 2023, 1:57 PM IST

ಮಹಾಮಾರಿ ಕೊರೋನಾ ಸೋಂಕಿನ ಆತಂಕದಲ್ಲಿಯೇ ಆರಂಭಗೊಂಡಿದ್ದ 2022ನೇ ವರ್ಷ ಅದೇ ಸೋಂಕಿನ ಭೀತಿಯಲ್ಲೇ ಕೊನೆಗೊಂಡಿದೆ. ಇಡೀ ವರ್ಷ ಜಿಲ್ಲೆ ಜನತೆಗೆ ಸಿಹಿ, ಕಹಿ ಎರಡೂ ಅನುಭವ ಉಣಬಡಿಸಿದೆ


ಶ್ರೀಶೈಲ ಮಠದ

ಬೆಳಗಾವಿ(ಜ.01):  ಮಹಾಮಾರಿ ಕೊರೋನಾ ಸೋಂಕಿನ ಆತಂಕದಲ್ಲಿಯೇ ಆರಂಭಗೊಂಡಿದ್ದ 2022ನೇ ವರ್ಷ ಅದೇ ಸೋಂಕಿನ ಭೀತಿಯಲ್ಲೇ ಕೊನೆಗೊಂಡಿದೆ. ಇಡೀ ವರ್ಷ ಜಿಲ್ಲೆ ಜನತೆಗೆ ಸಿಹಿ, ಕಹಿ ಎರಡೂ ಅನುಭವ ಉಣಬಡಿಸಿದೆ. ರಾಜಕೀಯ ಏಳುಬೀಳುಗಳ ನಡುವೆಯೇ ಬೆಳಗಾವಿ ಗಡಿ ಗಲಾಟೆ ಮುನ್ನೆಲೆಗೆ ಬಂದಿತು. ಎಂಇಎಸ್‌ನ ಮಹಾಮೇಳಾವ್‌ಕ್ಕೆ ಬ್ರೇಕ್‌, ಮಹಾರಾಷ್ಟ್ರ ನಾಯಕರಿಗೆ ಜಿಲ್ಲಾ ಗಡಿ ಪ್ರವೇಶಕ್ಕೆ ನಿರ್ಬಂಧ, ಕಂಡು ಕಾಣದಂತೆ ಮಾಯವಾದ ಚಾಲಾಕಿ ಚಿರತೆ, ಇಬ್ಬರು ಹಿರಿಯ ರಾಜಕೀಯ ನಾಯಕರ ಅಕಾಲಿಕ ನಿಧನ.. ಹೀಗೆ ಜಿಲ್ಲೆ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ.

Tap to resize

Latest Videos

ವರ್ಷದ ಆರಂಭದಲ್ಲಿ ಕೋವಿಡ್‌ ಲಸಿಕೆ ಅಭಿಯಾನ, ಒಮಿಕ್ರಾನ್‌ ಸೋಂಕು ವ್ಯಾಪಿಸದಂತೆ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿತ್ತು. ಕೋವಿಡ್‌-19 ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಜಾತ್ರೆಗಳು ರದ್ದುಗೊಂಡಿದ್ದವು. ಆದರೆ, ಈ ವರ್ಷ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ, ಚಿಂಚಲಿ ಮಾಯಕ್ಕ ದೇವಸ್ಥಾನ ಸೇರಿದಂತೆ ಜಿಲ್ಲೆಯ ಎಲ್ಲ ಮಠ, ಮಂದಿರಗಳಲ್ಲಿ ಅದ್ಧೂರಿಯಾಗಿಯೇ ಜಾತ್ರೆಗಳು ನೆರವೇರಿದವು.

ABVP STATE CONFERENCE: ಬೆಳಗಾವಿಯಲ್ಲಿ ಜ.6ರಿಂದ ಎಬಿವಿಪಿ ರಾಜ್ಯ ಸಮ್ಮೇಳನ

ಕಿಚ್ಚು ಹೊತ್ತಿಸಿದ್ದ ಹಿಂದು ಪದದ ಹೇಳಿಕೆ

ಮಾನವ ಬಂಧುತ್ವ ವೇದಿಕೆ ಸಂಘಟನೆ ನಿಪ್ಪಾಣಿಯಲ್ಲಿ ನ. 6 ರಂದು ಹಮ್ಮಿಕೊಂಡಿದ್ದ ಮನೆ ಮನೆಗೆ ಬುದ್ದ, ಬಸವ, ಅಂಬೇಡ್ಕರ, ಶಿವಾಜಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹಿಂದು ಪದದ ಕುರಿತು ವಿವಾದಾತ್ಮಕ ಹೇಳಿಕೆ ತೀವ್ರ ವಿವಾದಕ್ಕೆ ಎಡೆಮಾಡಿತ್ತು. ಸ್ವ ಪಕ್ಷದ ನಾಯಕರೇ ಸತೀಶ ಅವರ ಹೇಳಿಕೆ ಖಂಡಿಸಿದ್ದರು. ಗುಜರಾತ್‌ ಚುನಾವಣೆ ಹೊತ್ತಿನಲ್ಲೇ ಸತೀಶ ಅವರ ಈ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್ಸಿಗೂ ಮುಜುಗುರ ತಂದಿತ್ತು. ಸತೀಶ ಅವರ ಹೇಳಿಕೆ ಖಂಡಿಸಿ ಬಿಜೆಪಿ,ಹಿಂದುಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದ್ದರು. ಸತೀಶ ವಿರುದ್ಧ ಹೋರಾಟದ ಕಾವು ರಾಜ್ಯಾದ್ಯಂತ ವ್ಯಾಪಿಸಿತ್ತು. ಕಾಂಗ್ರೆಸ್‌ ನಾಯಕರ ಸೂಚನೆ ಮೇರೆಗೆ ಸತೀಶ ಜಾರಕಿಹೊಳಿ ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆ ವಾಪಸ್‌ ಪಡೆದು, ವಿಷಾದ ವ್ಯಕ್ತಪಡಿಸುವ ಮೂಲಕ ವಿವಾದಕ್ಕೆ ಅಂತ್ಯಹಾಡಲಾಯಿತು. ಸತೀಶ ಜಾರಕಿಹೊಳಿ ಹಿಂದು ವಿರೋಧಿಯಾಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಹಿಂದುಪರ ಸಂಘಟನೆಗಳು ಜಾಗೋ ಹಿಂದುಸ್ತಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸಲಾಯಿತು.

ಬೆಳಗಾವಿ ಗಡಿ ಗಲಾಟೆ

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿತು. ಸುಪ್ರೀಂಕೋರ್ಟನಲ್ಲಿ ಬಾಕಿ ಇರುವ ಗಡಿ ವಿವಾದ ಪ್ರಕರಣ ವಿಚಾರಣೆ ನಡೆದು, ಅಂತಿಮ ತೀರ್ಪು ಪ್ರಕಟವಾಗುತ್ತದೆ ಎನ್ನಲಾಗಿತ್ತು. ಈ ವಿಚಾರಣೆ ಕೋರ್ಟನಲ್ಲಿ ಬರಲೇ ಇಲ್ಲ. ಇದೇ ವೇಳೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್‌ಗಳಿಗೆ ಮಹಾಪುಂಡರು ಕಪ್ಪು ಮಸಿ ಬಳಿದರು, ಬಸ್‌ಗಳ ಮೇಲೆ ಜೈ ಮಹಾರಾಷ್ಟ್ರ ಎಂಬ ಬರಹ ಬರೆದರು. ಕಲ್ಲು ತೂರಲಾಯಿತು. ಇದರಿಂದಾಗಿ ಕರ್ನಾಟಕ- ಮಹಾರಾಷ್ಟ್ರ ಉಭಯರಾಜ್ಯಗಳಲ್ಲಿ ಬಸ್‌ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿತು. ಗಡಿ ವಿವಾದ ತಾರಕಕ್ಕೇರಿತು. ಮಹಾರಾಷ್ಟ್ರದ ಜತ್ತ ತಾಲೂಕಿನ 40ಕ್ಕೂ ಅಧಿಕ ಗ್ರಾಮಗಳ ಕನ್ನಡಿಗರು ತಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ, ಪ್ರತಿಭಟಿಸಿದರು. ಗ್ರಾಪಂಗಳಲ್ಲಿಯೂ ಈ ಕುರಿತು ನಿರ್ಣಯವನ್ನು ಅಂಗೀಕರಿಸಿದರು. ಗಡಿ ವಿವಾದ ತಾರಕ್ಕೇರಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಸಿಎ ಏಕನಾಥ ಸಿಂಧೆ ಅವರೊಂದಿಗೆ ಸಭೆ ನಡೆಸಿ, ಕೋರ್ಟ ತೀರ್ಪುಬರುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದ್ದರು.

ಈ ನಡುವೆಯೇ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಶಂಭುರಾಜ್‌ ದೇಸಾಯಿ ಮತ್ತು ಪಾಟೀಲ ಅವರು ಬೆಳಗಾವಿ ಜಿಲ್ಲೆಯ ಗಡಿಗ್ರಾಮಗಳಿಗೆ ಭೇಟಿ ನೀಡಿ, ಮರಾಠಿಗರ ಸಮಸ್ಯೆ ಆಲಿಸಿ, ಅಧ್ಯಯನ ಕೈಗೊಳ್ಳಲು ಪ್ರವಾಸ ಕಾರ್ಯಕ್ರಮವನ್ನು ನಿಗದಿಗೊಳಿಸಿ, ಬೆಳಗಾವಿಗೆ ಬರುವುದಾಗಿ ಘೋಷಿಸಿದರು. ಮಹಾರಾಷ್ಟ್ರ ನಾಯಕರ ನಡೆ ಕನ್ನಡಿಗರನ್ನು ಕೆರಳಿಸುವಂತೆ ಮಾಡಿತು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರುಬೆಳಗಾವಿ ಚಲೋಗೆ ಕರೆ ನೀಡಿದರು. ಕರವೇ ಕಾರ್ಯಕರ್ತರನ್ನು ಪೊಲೀಸರು ಹಿರೇಬಾಗೇವಾಡಿ ಟೋಲ್‌ ಬಳಿಯೇ ತಡೆಹಿಡಿದರು. ಈ ವೇಳೆ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ರಾಜ್ಯದ ನೋಂದಣಿಯಾದ ಲಾರಿಗಳ ಮೇಲೆ ಕಲ್ಲು ತೂರಿ, ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಗರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶದಂತೆ ನಿರ್ಬಂಧ ಹೇರಿ ದಿಟ್ಟಕ್ರಮ ಕೈಗೊಂಡಿತು.

ಗಡಿ ವಿವಾದ ಕಿಚ್ಚು ಹೊತ್ತಿ ಉರಿಯುತ್ತಿರುವ ನಡುವೆಯೇ ಬೆಳಗಾವಿಯ ಕಾಲೇಜೊಂದರಲ್ಲಿ ಸಂಜೆ ಕಾರ್ಯಕ್ರಮದ ವೇಳೆ ಕನ್ನಡ ವಿದ್ಯಾರ್ಥಿಯೊಬ್ಬ ಕನ್ನಡ ಬಾವುಟವನ್ನು ಕೈಯಲ್ಲಿ ಹಿಡಿದು ಕುಣಿದು ಕುಪ್ಪಳಿಸುತ್ತಿರುವ ವೇಳೆ, ಮರಾಠಿ ವಿದ್ಯಾರ್ಥಿಗಳಿಬ್ಬರು, ಕನ್ನಡ ಧ್ವಜದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಕನ್ನಡ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್‌ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಬುದ್ದಿ ಮಾತು ಹೇಳುವುದನ್ನು ಬಿಟ್ಟು, ಕನ್ನಡ ವಿದ್ಯಾರ್ಥಿಯ ಮೇಲೆಯೇ ದರ್ಪ ತೋರಿದರು. ಪೊಲೀಸರ ಈ ನಡೆ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಯಿತು. ಕನ್ನಡ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಮೂವರನ್ನು ಪೊಲೀಸರುವಶಕ್ಕೆ ತೆಗೆದುಕೊಂಡಿದ್ದರು.

ಮಹಾಮೇಳಾವಕ್ಕೆ ಕಡಿವಾಣ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಆರಂಭದ ಮೊದಲ ದಿನ ಡಿ. 19 ರಂದೇ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಟಿಳಕವಾಡಿ ಲೇಲೇ ಮೈದಾನದಲ್ಲಿ ಮಹಾಮೇಳಾವ್‌ ಸಂಘಟಿಸುವುದಾಗಿ ಘೋಷಿಸಿತ್ತು. ಇದಕ್ಕೆ ಅನುಮತಿ ನೀಡುವಂತೆ ಪೊಲೀಸ್‌ ಆಯುಕ್ತರಿಗೂ ಮನವಿ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರ ಮಹಾಮೇಳಾವ್‌ಕ್ಕೆ ಅನುಮತಿ ನೀಡಲೇ ಇಲ್ಲ. ಇದೇ ಮೊದಲ ಬಾರಿಗೆ ಮೇಳಾವಕ್ಕೆ ಕಡಿವಾಣ ಹಾಕಲಾಯಿತು. ಇದರಿಂದಾಗಿ ಎಂಇಎಸ್‌ ಮುಖಂಡರಿಗೆ ತೀವ್ರ ಮುಖಭಂಗ ಉಂಟಾಯಿತು. ರಾಜ್ಯದಲ್ಲಿ ಮಹಾಮೇಳಾವ್‌ಕ್ಕೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಎಂಇಎಸ್‌ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಪಲಾಯಣ ಮಾಡಿ, ಅಲ್ಲಿಯೇ ಮಹಾ ವಿಕಾಸ ಆಘಾಡಿ ಪಕ್ಷಗಳೊಂದಿಗೆ ಸೇರಿ ಪ್ರತಿಭಟನೆ ನಡೆಸಿತು. ಬೆಳಗಾವಿ ಮರಾಠಿ ಭಾಷಿಕರೇ ಚುನಾವಣೆ ಸಂದರ್ಭದಲ್ಲಿ ತಕ್ಕ ಪಾಠ ಕಲಿಸಿದ್ದರೂ ಎಂಇಎಸ್‌ ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿದೆ.

ಕನ್ನಡಪ್ರಭಕ್ಕೆ ಬೆಳ್ಳಿಹಬ್ಬ ಸಂಭ್ರಮ

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ವ್ಯಾಪ್ತಿಹೊಂದಿರುವ ಕನ್ನಡಿಗರ ಸಾಕ್ಷಿ ಪ್ರಜ್ಞೆಯಂತಿರುವ ಕನ್ನಡಪ್ರಭ ಬೆಳಗಾವಿ ಆವೃತ್ತಿಯ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಈ ವರ್ಷ ಸಾಕ್ಷಿಯಾಯಿತು. ಸೆ. 17 ರಂದು ಬೆಳಗಾವಿ ಜೀರಗೆ ಸಭಾಭವನದಲ್ಲಿ ಬೆಳ್ಳಿಹಬ್ಬದ ಸಂಭ್ರಮ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಡಾ.ತೋಂಟದ ಸಿದ್ದರಾಮಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ, ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರ, ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಸೇರಿದಂತೆ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.

ಕಂಡು ಕಾಣದಂತೆ ಮಾಯವಾದ ಚಿರತೆ

ಆಗಸ್ಟ್‌ 5 ರಂದು ಮಧ್ಯಾಹ್ನ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿದ ಚಿರತೆ ಕ್ಲಬ್‌ ರಸ್ತೆಯ ಗಾಲ್ಫ್‌ ಮೈದಾನದ ಪೊದೆಯೊಳಗೆ ಅವಿತು ಕುಳಿತಿತ್ತು. ತನ್ನ ಮಗನ ಮೇಲೆ ಚಿರತೆ ದಾಳಿ ಮಾಡಿದ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದಳು. ಚಿರತೆ ಪದೇ ಪದೆ ಜನತೆಗೆ ಕಾಣಿಸಿಕೊಂಡಿತ್ತು. ಆದರೆ, ಅದನ್ನು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಾರ್ಮಿಕನ ಮೇಲೆ ದಾಳಿ ನಡೆಸಿರುವುದು ಚಿರತೆಯಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರು. ಪೋಷಕರು ಚಿರತೆ ಹಿಡಿಯುವಂತೆ ಪ್ರತಿಭಟನೆಗಳನ್ನು ಮಾಡಿದ್ದರು. ಪೊಲೀಸ್‌, ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರೂ ಚಿರತೆ ಸುಳಿವು ಮಾತ್ರ ಸಿಗಲೇ ಇಲ್ಲ. ಚಿರತೆ ಪತ್ತೆ ಕಾರ್ಯಾಚರಣೆ ಮುಂದುವರೆದಿತ್ತು. ಒಂದು ದಿನ ಚಿರತೆ ಎಲ್ಲರ ಕಣ್ಣೆದುರಿನಿಂದಲೇ ಕೂದಲೆಳೆ ಅಂತರದಿಂದ ತಪ್ಪಿಸಿಕಂಡು ಗಾಲ್‌್ಫ ಮೈದಾನಕ್ಕೆ ಸೇರಿಕೊಂಡತು. ಚಿರತೆ ಇರುವುದನ್ನು ಖಚಿತಪಡಿಸಿಕೊಂಡ ನಂತರ ಚಿರತೆ ಹಿಡಿಯಲು ಶಿವಮೊಗ್ಗದ ಸಕ್ರೆಬೈಲ್‌ ಆನೆ ಬಿಡಾರದಿಂದ ಎರಡು ಆನೆಯಿಂದ ಗಜಪಡೆ ಕಾರ್ಯಾಚರಣೆ ನಡೆಯಿತು. 30ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಬೇಟೆ ನಾಯಿಗಳಿಂದ ಹುಡುಕಾಟ ನಡೆಯಿತು. ಶಾರ್ಪ ಶೂಟರ್ಸಗಳು, ಜೆಸಿಬಿಗಳ ಕಸರತ್ತು ನಡೆಯಿತು. ಹಂದಿ ಹಿಡಿಯುವರು ಬಂದರು. ಆದರೂ ಕೊನೆಗೂ ಚಾಲಾಕಿ ಚಿರತೆ ಮಾತ್ರ ಸಿಗಲೇ ಇಲ್ಲ. ಚಿರತೆ ಹಾವಳಿಯಿಂದ ಗಾಲ್‌್ಫ ಮೈದಾನದ ಸುತ್ತಮುತ್ತಲಿನ 22 ಶಾಲೆಗಳಿಗೆ ರಜೆಯನ್ನೂ ಘೋಷಿಸಲಾಗಿತ್ತು. ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳದಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದರು. ಇದರಿಂದಗಿ ವಾಯು ವಿಹಾರಕ್ಕೆ ಬರುವ ಸಂಖ್ಯೆತೀರಾ ಇಳಿಮುಖವಾಗಿತ್ತು. ಚಿರತೆ ಹೆಸರಿನಲ್ಲಿ ಪ್ಯಾನ್‌ ಕಾರ್ಡ, ಆಧಾರ ಕಾರ್ಡ, ರೇಷನ್‌ ಕಾರ್ಡ, ಬ್ಯಾಂಕ್‌ ಪಾಸ್‌ ಬುಕ್‌ ಮಾಡಿ ಸಾಮಾಜಿಕ ಜಾಲತಾಣಳಲ್ಲಿ ಸಖತ್‌ ಆಗಿ ಟ್ರೋಲ್‌ ಮಾಡಲಾಯಿತು. ಚಿರತೆ ಪತ್ತೆಗೆ ಕೋಟ್ಯಂತರ ರುಪಾಯಿ ಖರ್ಚು ಮಾಡಿದರೂ ಪ್ರಯೋಜನ ಮಾತ್ರ ಆಗಲೇ ಇಲ್ಲ. ತನ್ನಂದಿ ತಾನೇ ಚಿರತೆ ಗಾಲ್‌್ಫ ಮೈದಾನದಿಂದ ಬೇರೆಡೆ ಹೋಯಿತು. ಚಿರತೆ ಹಾವಳಿಯಿಂದ ಬೆಚ್ಚಿಬಿದ್ದ ಜನತೆ ನೆಮ್ಮದಿ ನಿಟ್ಟುಸಿರುವ ಬಿಡುವಂತಾಯಿತು.

Belagavi Winter Session: ಅಧಿವೇಶನ ಯಾವ ಪುರುಷಾರ್ಥಕ್ಕೆ?: ಸಿದ್ದು ಆಕ್ರೋಶ

ಹಿರಿಯ ರಾಜಕೀಯ ನಾಯಕರ ವಿಧಿವಶ

ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ತುಂಬಲಾರದ ನಷ್ಟಅನುಭವಿಸಿದ ವರ್ಷ 2022. ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರು ಅಕಾಲಿಕವಾಗಿ ನಿಧನರಾದರು. ಉತ್ತರ ಕರ್ನಾಟಕ ಪ್ರಭಾವಿ ಲಿಂಗಾಯತ ಮುಖಂಡ, ಬಿಜೆಪಿ ನಾಯಕ, ಹುಕ್ಕೇರಿ ಶಾಸಕರಾಗಿದ್ದ ಉಮೇಶ ಕತ್ತಿ ಅವರು ಸೆ. 6 ರಂದು ತಮ್ಮ ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಅ. 22 ವಿಧಾನಸಭೆ ಉಪಾಧ್ಯಕ್ಷರಾಗಿದ್ದ ಸವದತ್ತಿ ಶಾಸಕರಾಗಿದ್ದ ಆನಂದ ಮಾಮನಿ ಅವರು ಅನಾರೋಗ್ಯದಿಂದ ನಿಧನರಾದರು.ಈ ಇಬ್ಬರು ನಾಯಕರ ನಿಧನದ ಹಿನ್ನೆಲೆಯಲ್ಲಿ ಹುಕ್ಕೇರಿ ಮತ್ತು ಸವದತ್ತಿ ವಿಧಾನಸಭೆ ಕ್ಷೇತ್ರಗಳು ತೆರವುಗೊಂಡಿವೆ. ಈ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗಿದೆ.

ಬೆಳಗಾವಿ ತಾಲೂಕಿನ ಕಲ್ಯಾಳ ಸೇತುವೆ ಬಳಿ ಜೂನ್‌ 26ರಂದು ಕೆಲಸಕ್ಕೆ ಹೊರಟಿದ್ದ ಕ್ರೂಸರ್‌ ವಾಹನ ಪಲ್ಟಿಯಾಗಿ ಏಳು ಜನ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ರಸ್ತೆ ಅಪಘಾತದಲ್ಲಿ ಕಾರು-ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್‌ ಬಳಿ ಎಎಸ್‌ಐ ಪತ್ನಿ, ಮಗಳು ಸೇರಿ ನಾಲ್ವರು ಮೃತಪಟ್ಟಿದ್ದರು. ಮಹಾರಾಷ್ಟದ ಚಂದಗಡ ತಾಲೂಕಿನ ಕಿತವಾಡ್‌ ಫಾಲ್ಸ್‌ನಲ್ಲಿ ಬಿದ್ದು ಬೆಳಗಾವಿಯ ಮದರಸಾದ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.

click me!