ಜಿಲ್ಲೆಯೀಗ ನಿಜಾಮರ ಆಡಳಿತದಲ್ಲಿ ಶೋಷಣೆಗೆ ಒಳಗಾದ ಕೊಪ್ಪಳವಾಗಿ ಉಳಿದಿಲ್ಲ. ಇಡೀ ರಾಜ್ಯದ ಗಮನ ಸೆಳೆಯುವಷ್ಟುಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಘೋಷಣೆಯಾಗಿರುವ ಯೋಜನೆಗಳ ಅನುಷ್ಠಾನ ಹಾಗೂ ಭವಿಷ್ಯತ್ತಿನ ಬೆಳವಣಿಗೆಗೆ ಪೂರಕವಾಗಿ ಭೂಬ್ಯಾಂಕ್ ಸ್ಥಾಪನೆಯಾಗುವ ದಿಸೆಯಲ್ಲಿ ಇಚ್ಛಾಶಕ್ತಿಯ ಅಗತ್ಯವಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ (ಜ,1) : ಜಿಲ್ಲೆಯೀಗ ನಿಜಾಮರ ಆಡಳಿತದಲ್ಲಿ ಶೋಷಣೆಗೆ ಒಳಗಾದ ಕೊಪ್ಪಳವಾಗಿ ಉಳಿದಿಲ್ಲ. ಇಡೀ ರಾಜ್ಯದ ಗಮನ ಸೆಳೆಯುವಷ್ಟುಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಘೋಷಣೆಯಾಗಿರುವ ಯೋಜನೆಗಳ ಅನುಷ್ಠಾನ ಹಾಗೂ ಭವಿಷ್ಯತ್ತಿನ ಬೆಳವಣಿಗೆಗೆ ಪೂರಕವಾಗಿ ಭೂಬ್ಯಾಂಕ್ ಸ್ಥಾಪನೆಯಾಗುವ ದಿಸೆಯಲ್ಲಿ ಇಚ್ಛಾಶಕ್ತಿಯ ಅಗತ್ಯವಿದೆ. ನೀರಾವರಿ, ಕೈಗಾರಿಕೆ ಹಾಗೂ ಪ್ರವಾಸೋದ್ಯಮಗಳ ಕ್ಷಿಪ್ರ ಬೆಳವಣಿಗೆಯಿಂದಾಗಿ ಜಿಲ್ಲೆ ತನ್ನದೇ ಛಾಪು ಮೂಡಿಸುತ್ತಿದೆ. ಜಿಲ್ಲಾ ಕೇಂದ್ರವೂ ನಿರೀಕ್ಷೆ ಮೀರಿ ಬೆಳೆಯುತ್ತಿದ್ದು, ನಿರೀಕ್ಷಿತ ಪ್ರಮಾಣದ ಸೌಕರ್ಯಗಳ ಕೊರತೆ ಮಾತ್ರ ಎದ್ದು ಕಾಣುತ್ತಲೇ ಇದೆ. ಹೀಗಾಗಿ ಕೊಪ್ಪಳಕ್ಕೊಂದು ವಿಶೇಷ ಆದ್ಯತೆ ಸರ್ಕಾರದಿಂದ ದೊರೆಯಲೇಬೇಕಿದೆ. ಇದಕ್ಕಾಗಿ 2023 ವರ್ಷದ ಪ್ರಾರಂಭದಲ್ಲಿ ದೃಢಸಂಕಲ್ಪ ಮಾಡುವ ಅಗತ್ಯವಿದೆ.
undefined
ಮೊದಲು ಆಗಬೇಕಾಗಿರುವುದು:
ಪ್ರಥಮವಾಗಿ ಆಗಬೇಕಾಗಿರುವುದು ಎಂದರೆ ಭೂ ಬ್ಯಾಂಕ್. ಪ್ರವಾಸೋದ್ಯಮ, ನೀರಾವರಿ ಹಾಗೂ ಕೈಗಾರಿಕೆಗಳ ಬೆಳವಣಿಗೆಯಿಂದಾಗಿ ಬೆಳೆಯುತ್ತಿರುವ ಜಿಲ್ಲೆಗೆ ಹತ್ತಾರು ಯೋಜನೆಗಳು ಬರುತ್ತಿವೆ. ಆದರೆ, ಇದ್ಯಾವುದಕ್ಕೂ ಸರ್ಕಾರದ ಒಡೆತನ ಜಾಗ ಅಥವಾ ಭೂಮಿಯೇ ಇಲ್ಲ. ಸರ್ಕಾರಿ ಕಾಲೇಜುಗಳು, ವಿವಿಗಳು, ವಿಮಾನ ನಿಲ್ದಾಣಗಳು, ಇಎಸ್‌ಐ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಂಥ ಮಹತ್ವಾಕಾಂಕ್ಷಿ ಯೋಜನೆಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ, ಇವುಗಳನ್ನು ಮಾಡುವುದೆಲ್ಲಿ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ. ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು ಸುಮಾರು 1 ಸಾವಿರ ಎಕರೆ ಭೂಮಿಯ ಅಗತ್ಯವಿದೆ.
Koppala: ಹನುಮನ ಜನ್ಮಸ್ಥಳದಲ್ಲಿ ಹನುಮ ಮಾಲೆಗಳಿಗಿಲ್ಲ ಗೌರವ!
ಕಾರ್ಖಾನೆಯೊಂದಕ್ಕೆ ಕೆಆರ್‌ಐಡಿಬಿ ಸ್ವಾಧೀನ ಪ್ರಕ್ರಿಯೆ ನಡೆದು, ರೈತರ ವಿರೋಧದಿಂದ ತಿರಸ್ಕಾರವಾಗಿರುವ 998 ಎಕರೆ ಭೂಮಿ ಕೊಪ್ಪಳಕ್ಕೆ ಹೊಂದಿಕೊಂಡೇ ಇದೆ. ಇದನ್ನು ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಸ್ವಾಧೀನ ಮಾಡಿಕೊಳ್ಳುವುದು ತೀರಾ ಅಗತ್ಯ. ಕೆಕೆಆರ್‌ಡಿಬಿಯಲ್ಲಿ ವಿಶೇಷ ಮಂಜೂರಾತಿಯಡಿಯಲ್ಲಿ ಈ ಕಾರ್ಯ ಮೊದಲು ಆಗಬೇಕು.
ಇದಾಗದಿದ್ದರೆ ಕೆಕೆಆರ್‌ಡಿಬಿಯಲ್ಲಿ ಪ್ರತಿವರ್ಷ ನೂರು ಎಕರೆ ಭೂಮಿಯನ್ನು ನಗರಕ್ಕೆ ಹೊಂದಿಕೊಂಡು ಸ್ವಾಧೀನ ಮಾಡಿಕೊಂಡು ಭೂ ಬ್ಯಾಂಕ್ ನಿರ್ಮಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಬೇಕು. ಅಂದಾಗ ಭವಿಷ್ಯದಲ್ಲಿ ಬೆಳೆಯುತ್ತಿರುವ ನಗರಕ್ಕೆ ಅನುಕೂಲವಾಗುತ್ತದೆ. ಯೋಜನೆಗಳು ಸಾಕಾರಗೊಳ್ಳುತ್ತವೆ.
ತುರ್ತಾಗಿ ಆಗಬೇಕಿರುವುದು:
ವಿಮಾನ ನಿಲ್ದಾಣ:
ನಗರಕ್ಕೆ ಹೊಂದಿಕೊಂಡೇ ಕುಷ್ಟಗಿ ರಸ್ತೆಯಲ್ಲಿ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಅಸ್ತು ಎಂದು ಭೂ ಸ್ವಾಧೀನಕ್ಕೂ ಮುಂದಾಗಿದೆ. ಇದು ಬೇಗನೆ ಕಾರ್ಯಗತವಾಗುವ ಅಗತ್ಯವಿದೆ. ತ್ವರಿತವಾಗಿ ಆಗುವುದರಿಂದ ಇತರೆ ಎಲ್ಲ ಬೆಳವಣಿಗೆಗೂ ಅನುಕೂಲವಾಗಲಿದೆ.
ರೈಸ್ ಪಾರ್ಕ್:
ಕಾರಟಗಿ ಬಳಿ ನಡೆಯುತ್ತಿರುವ ರೈಸ್ ಪಾರ್ಕ್ ಸ್ಥಾಪನೆ ಕುಂಟುತ್ತಾ ಸಾಗುತ್ತಿದ್ದು, ಇದು ವೇಗವಾಗಿ ಅನುಷ್ಠಾನವಾಗಬೇಕಾಗಿದೆ. ನಾಲ್ಕಾರು ವರ್ಷಗಳಿಂದಲೂ ನಡೆಯುತ್ತಿರುವ ಯೋಜನೆಯ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗುತ್ತಿಲ್ಲ. ಘೋಷಣೆಗೆ ತೋರಿದ ಆಸಕ್ತಿ ಜಾರಿಗೆ ತೋರುತ್ತಿಲ್ಲ.
ಕೊಪ್ಪಳ ವಿವಿ:
ಕೊನೆಗೂ ಕೊಪ್ಪಳಕ್ಕೊಂದು ವಿವಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ ಮತ್ತು ಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಕಾರ್ಯಾದೇಶ ಮಾಡಿದೆ. ಆದರೆ, ಇದಕ್ಕೆಂದು ನೂರು ಎಕರೆ ಭೂಮಿ ಅಗತ್ಯವಿದೆ. ಹೀಗಾಗಿ ಇದು ತ್ವರಿತ ಗತಿಯಲ್ಲಿ ಆಗಬೇಕಾಗಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ:
ಜಿಲ್ಲೆಗೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಿದ್ದು, ಕಾರ್ಯಾನುಷ್ಠಾನಕ್ಕಾಗಿ ಭೂಮಿಯ ಸಮಸ್ಯೆ ಎದುರಾಗಿದೆ. ಹೀಗಾಗಿ ಇದನ್ನು ಕೂಡಲೇ ಇತ್ಯರ್ಥ ಮಾಡಿ ಅನುಷ್ಠಾನ ಮಾಡುವಂತೆ ಆಗಬೇಕು. ವೈದ್ಯಕೀಯ ಕಾಲೇಜು ಬಂದ ಮೇಲೆ ಕೊಪ್ಪಳ ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗಿದೆ. ಆದರೆ, ಇದು ಇನ್ನಷ್ಟುಪ್ರಬಲವಾಗಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭವಾಗಬೇಕು.
ಜಿಲ್ಲಾ ಸಹಕಾರಿ ಬ್ಯಾಂಕ್:
ಕೊಪ್ಪಳ ಜಿಲ್ಲೆಯಾಗಿ 25 ವರ್ಷಗಳಾಗಿದ್ದರೂ ಇದುವರೆಗೂ ಜಿಲ್ಲಾ ಸಹಕಾರಿ ಬ್ಯಾಂಕ್ ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲೇ ಇದೆ. ಇದನ್ನು ಪ್ರತ್ಯೇಕಗೊಳಿಸಿ ಕೊಪ್ಪಳ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆಯಾಗುವ ಅಗತ್ಯವಿದೆ. ಠೇವಣಿ ಕೊಪ್ಪಳ ಜಿಲ್ಲೆಯದ್ದಾಗಿದ್ದರೂ ಸಾಲ ಫಲಾನುಭವಿಗಳು ಮಾತ್ರ ರಾಯಚೂರು ಜಿಲ್ಲೆಯವರು. ಹೀಗಾಗಿ ಇದನ್ನು ಪ್ರತ್ಯೇಕಿಸಬೇಕಾಗಿದೆ.
ನೀರಾವರಿ ಯೋಜನೆಗಳು:
ಜಿಲ್ಲೆಗೆ ನೀರಾವರಿ ಯೋಜನೆಗಳ ಜಾರಿಗೆ ವಿಪುಲ ಅವಕಾಶಗಳಿವೆ. ಇರುವ ನೀರನ್ನು ಬಳಕೆ ಮಾಡಿಕೊಳ್ಳುವ ಮನಸ್ಸು ಇಲ್ಲದಂತಾಗಿದೆ. ಈಗಾಗಲೇ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಜಿಲ್ಲೆಗೆ ಹನಿ ನೀರು ದೊರೆಯುತ್ತಿಲ್ಲ. ಯೋಜನೆ ಲೋಕಾರ್ಪಣೆಯಾಗಿ 10 ವರ್ಷವಾದರೂ ಹನಿ ನೀರು ಬಂದಿಲ್ಲ. ಇದು ತ್ವರಿತ ಜಾರಿಯಾದರೆ ಲಕ್ಷಾಂತರ ಎಕರೆ ಭೂಮಿಗೆ ನೀರಾವರಿಯಾಗುತ್ತದೆ.
ನವಲಿ ಸಮಾಂತರ ಜಲಾಶಯ ನಿರ್ಮಾಣ ಶರವೇಗದಲ್ಲಿ ಆಗಬೇಕಾಗಿದೆ. ಕೊಪ್ಪಳ ಏತ ನೀರಾವರಿ ಯೋಜನೆ ಪ್ರಗತಿ ತ್ವರಿತವಾಗಿದೆಯಾದರೂ ಪೂರ್ಣಗೊಳ್ಳುವ ಅಗತ್ಯವಿದೆ. ಹಿರೇಹಳ್ಳ ಜಲಾಶಯ ಎತ್ತರ ಹೆಚ್ಚಳ ಮಾಡುವುದು, ಪ್ರವಾಹ ಹರಿವು ಕಾಲುವೆ ನಿರ್ಮಾಣ, ಕೊಪ್ಪಳ ಮತ್ತು ಯಲಬುರ್ಗಾ ಕೆರೆ ತುಂಬಿಸುವ ಯೋಜನೆ ಜಾರಿಯಾಗಬೇಕಾಗಿದೆ.
ಫ್ಲೋರೈಡ್ ನೀರಿಗೆ ಪರಿಹಾರ:
ಜಿಲ್ಲೆಯಲ್ಲಿ ಸುಮಾರು 700 ಕಂದಾಯ ಗ್ರಾಮಗಳ ಪೈಕಿ 500ಕ್ಕೂ ಅಧಿಕ ಗ್ರಾಮಗಳಲ್ಲಿ ಫೆä್ಲೕರೈಡ್ ನೀರಿನ ಸಮಸ್ಯೆ ಇದೆ. ಇದರ ಪರಿಹಾರಕ್ಕಾಗಿ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡುವ ಹತ್ತಾರು ಬಹುಗ್ರಾಮ ಯೋಜನೆಗಳು ನನೆಗುದಿಗೆ ಬಿದ್ದಿವೆ. ಅವುಗಳು ಕಳೆದ ಹದಿನೈದು ವರ್ಷಗಳಿಂದಲೂ ಕುಂಟುತ್ತಾ ಸಾಗುತ್ತಿವೆ. ಇವುಗಳನ್ನು ಕಾರ್ಯಗತ ಮಾಡಬೇಕಾಗಿದೆ. ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳಿಗೆ ದಿನದ 24 ಗಂಟೆ ಆಲಮಟ್ಟಿಯಿಂದ ನೀರು ಪೂರೈಕೆ ಮಾಡುವ ಯೋಜನೆಗಳು ಕುಂಟುತ್ತಾ ಸಾಗುತ್ತಿದೆ.
ಸ್ಟೀಲ್ ಸಿಟಿ ಘೋಷಣೆ:
ಕೊಪ್ಪಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಟೀಲ್ ಸಿಟಿ ಮಾಡುವುದಾಗಿ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ಸ್ಟೀಲ್ ಕಾರಿಡಾರ್ ಸ್ಥಾಪಿಸುವ ಕುರಿತು ಘೋಷಣೆ ಮಾಡಲಾಗಿತ್ತು. ಕರ್ನಾಟಕ ಜೆಮಶೆಡ್‌ಪುರ ಎಂದೇ ಕರೆಯುವ ಕೊಪ್ಪಳದಲ್ಲಿ ಸ್ಟೀಲ್ ಉತ್ಪಾದನೆಯಲ್ಲಿ ಕ್ರಾಂತಿ ಮಾಡುವುದಕ್ಕೆ ಸಾಕಷ್ಟುಅವಕಾಶಗಳಿದ್ದರೂ ರಾಜ್ಯ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಅವು ಕಾರ್ಯಗತವಾಗುತ್ತಿಲ್ಲ.
ಸರೋಜಿನಿ ಮಹಿಷಿ ವರದಿ ಜಾರಿ:
ಜಿಲ್ಲೆಯಲ್ಲಿ ಹತ್ತಾರು ಬೃಹತ್ ಕೈಗಾರಿಕೆಗಳು, ದೇಶದ ಮೊದಲ ಆಟಿಕೆ ಕ್ಲಸ್ಟರ್ ಸ್ಥಾಪನೆಯಾಗುತ್ತಿದ್ದರೂ ಸ್ಥಳೀಯರಿಗೆ ಉದ್ಯೋಗ ಸಿಕ್ಕಿರುವುದು ಅಷ್ಟಕ್ಕಷ್ಟೇ. ಕೈಗಾರಿಕೆಗಳಲ್ಲಿ ಅನ್ಯ ರಾಜ್ಯದವರೇ ತುಂಬಿಕೊಂಡಿದ್ದಾರೆ. ಇಲ್ಲಿ ಸರೋಜನಿ ಮಹಿಷಿ ವರದಿಯ ಪ್ರಾಮಾಣಿಕ ಅನುಷ್ಠಾನವಾಗಬೇಕಾಗಿದೆ.
ದೇಶದ ಮೊದಲ ಆಟಿಕೆ ಕ್ಲಸ್ಟರ್:
ಕುಕನೂರು ತಾಲೂಕಿನ ಭಾನಾಪುರ ಗ್ರಾಮದ ಬಳಿ ಖಾಸಗಿಯಾಗಿ ದೇಶದ ಮೊದಲ ಆಟಿಕೆ ಕ್ಲಸ್ಟರ್ ಪ್ರಾರಂಭವಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆರ್ಥಿಕ ಹಿಂಜರಿಕೆಯಿಂದ ನಿಧಾನಗತಿಗೆ ದೂಡಲಾಗಿದೆ. ಇದನ್ನು ತ್ವರಿತವಾಗಿ ಪ್ರಾರಂಭಿಸುವ ದಿಸೆಯಲ್ಲಿ ಪ್ರಯತ್ನ ಆಗಬೇಕಾಗಿದೆ.
ಪದವಿ, ಸ್ನಾತಕೊತ್ತರ ಶಿಕ್ಷಣದ ಅಭಾವ:
ಜಿಲ್ಲೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣದ ಅಭಾವ ದೊಡ್ಡ ಪ್ರಮಾಣದಲ್ಲಿಯೇ ಇದೆ. ಇರುವ ಪದವಿ ಕಾಲೇಜುಗಳು ಸಾಲುತ್ತಿಲ್ಲ. ಪದವಿ ಕೋರ್ಸ್‌ಗಳಲ್ಲಿಯೂ ಸೀಟ್ ಪಡೆಯಲು ಹೆಣಗಾಡಬೇಕು. ಸಿಕ್ಕರೂ ನಿಂತುಕೊಂಡೇ ಪಾಠ ಕೇಳಬೇಕಾದ ದಯನೀಯ ಸ್ಥಿತಿ ಇದೆ. ಇನ್ನು ಸ್ನಾತಕೋತ್ತರ ಕೇಂದ್ರ ಇದೆಯಾದರೂ ಅದಕ್ಕೆ ಸೂಕ್ತ ಕಟ್ಟಡ ಮತ್ತು ಜಾಗ ಇಲ್ಲದಿರುವುದರಿಂದ ತಳಕಲ್ ಎಂಜಿನಿಯರಿಂಗ್ ಕಾಲೇಜಿಗೆ ಸ್ಥಳಾಂತರ ಮಾಡಲಾಗಿರುವುದು ದುರಂತ. ಈಗಲೂ ಪದವಿ ಕೋರ್ಸ್ ಪ್ರವೇಶಕ್ಕೆ ಸೀಟ್ ದೊರೆಯದೇ ಹಾಗೂ ಸ್ನಾತಕೊತ್ತರ ಕೋರ್ಸ್ ಪ್ರವೇಶ ಪಡೆಯಲು ಆಗದೆ ಉನ್ನತ ಶಿಕ್ಷಣದಿಂದ ಸಾವಿರಾರು ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಈ ದಿಸೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ತ್ವರಿತವಾಗಿ ಸಮಸ್ಯೆ ಇತ್ಯರ್ಥ ಮಾಡಬೇಕಾಗಿದೆ.
ಪ್ರವಾಸೋದ್ಯಮಕ್ಕೆ ಇಂಬು:
ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಜಿಲ್ಲೆಗೆ ವಿಫುಲ ಅವಕಾಶಗಳಿವೆ. ಧಾರ್ಮಿಕವಾಗಿ ಶಕ್ತಿ ಕೇಂದ್ರಗಳು ಹಾಗೂ ಐತಿಹಾಸಿಕ ಹಾಗೂ ಪೌರಣಿಕ ಹಿನ್ನೆಲೆಯುಳ್ಳ ಪವಿತ್ರ ಸ್ಥಳಗಳು ಇದ್ದು, ಇಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿದ್ದೇ ಆದರೆ ಪ್ರವಾಸೋದ್ಯಮದಲ್ಲಿ ಕ್ರಾಂತಿಯಾಗಲಿದೆ.
ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿ, ಯೋಜನೆಯನ್ನು ಕೈಗೆತ್ತಿಕೊಳುತ್ತಿದೆ. ಹಾಗೆ ಹಿರೇಬೆಣಕಲ್ ಬಳಿ ಇರುವ ಮೋರೆರ್ ತಟ್ಟೆಗಳ, ಆನೆಗೊಂದಿ, ಪಂಪಾ ಸರೋವರ, ಕನಕಗಿರಿ ಕನಕಾಚಲಪತಿ, ಕೋಟಿಲಿಂಗಗಳ ಪುರ, ದೇವಾಲಯಗಳ ಚಕ್ರವರ್ತಿ ಎಂದೇ ಹೆಸರಾದ ಇಟಗಿ ಮಹದೇವ ದೇವಾಲಯ, ಹುಲಿಗೆಮ್ಮ ದೇವಿ ದೇವಸ್ಥಾನ ಹಾಗೂ ಕೊಪ್ಪಳ ಗವಿಮಠ, ಅಶೋಕ ಶಿಲಾಶಾಸನ, ಅರ್ಜುನ ತಪಸ್ಸು ಮಾಡಿದ ಮಳೆಮಲ್ಲೇಶ್ವರ, ರಾಮನಿಗಾಗಿ ಕಾದ ಶಬರಿ ಸ್ಥಳ, ವಾಲಿ ಸುಗ್ರೀವರ ಕಾದಾಟದ ವಾಲಿಕಿಲ್ಲಾ ಹೀಗೆ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿರುವ ಸ್ಥಳಗಳು ಇವೆ. ಇವುಗಳ ಕುರಿತು ವ್ಯಾಪಕ ಪ್ರಚಾರ ಮತ್ತು ಸ್ಥಳೀಯವಾಗಿ ಮೂಲ ಸೌಕರ್ಯಗಳನ್ನು ಒದಗಿಸಿದರೆ ಸಾಕು ತನ್ನಿಂದ ತಾನೆ ಬೆಳೆಯುತ್ತದೆ.
ಗಂಗಾವತಿ: ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪತ್ರಕರ್ತ ರಾಮಮೂರ್ತಿ ನವಲಿಗೆ ವಿಶೇಷ ಆಹ್ವಾನ
ರಾಮ ಜನ್ಮಭೂಮಿ ಅಯೋಧ್ಯೆಯಿಂದ ಹನುಮನ ಜನ್ಮಭೂಮಿ ಅಂಜನಾದ್ರಿ ನೇರ ಸಂಪರ್ಕ ಕಲ್ಪಿಸುವ ರೈಲು ಮಾರ್ಗವೊಂದು ಆಗುವ ಅಗತ್ಯವಿದೆ. ಇದು ಇಡೀ ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ಬೆಸೆಯುವ ಮಾರ್ಗವಾಗುವುದರಲ್ಲಿ ಅನುಮಾನವೇ ಇಲ್ಲ. ಜಿಲ್ಲೆಯ ಪ್ರಗತಿಗೆ ಹತ್ತಾರು ವಿಫುಲ ಅವಕಾಶಗಳಿದ್ದು, ಘೋಷಣೆಯಾಗಿರುವ ಯೋಜನೆಗಳ ಅನುಷ್ಠಾನವಾಗುವ ದಿಸೆಯಲ್ಲಿ ಪಕ್ಷಾತೀತವಾಗಿ ರಾಜಕೀಯ ನಾಯಕರು ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡಬೇಕಾಗಿದೆ.