ತೆಂಗು ಮತ್ತು ಕೊಬ್ಬರಿ ಬೆಳೆಗಾರರ ಸಮಸ್ಯೆಗಳ ಪರಿಹರಿಸಲು ರಾಜ್ಯ ಸರ್ಕಾರ ಮಧ್ಯಪ್ರವೇಶಕ್ಕೆ ಆಗ್ರಹಿಸಿ ರೈತ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಜಿಲ್ಲೆಯ ಶಾಸಕರಿಗೆ ಮನವಿ ಸಲ್ಲಿಸಿದರು.
ತುಮಕೂರು : ತೆಂಗು ಮತ್ತು ಕೊಬ್ಬರಿ ಬೆಳೆಗಾರರ ಸಮಸ್ಯೆಗಳ ಪರಿಹರಿಸಲು ರಾಜ್ಯ ಸರ್ಕಾರ ಮಧ್ಯಪ್ರವೇಶಕ್ಕೆ ಆಗ್ರಹಿಸಿ ರೈತ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಜಿಲ್ಲೆಯ ಶಾಸಕರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್, ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹಾಗೂ ಗ್ರಾಮೀಣ ಶಾಸಕ ಬಿ. ಸುರೇಶ್‌ಗೌಡ ಸೇರಿದಂತೆ ಜಿಲ್ಲೆಯ ಶಾಸಕರರಿಗೆ ತೆಂಗು ಮತ್ತು ಕೊಬ್ಬರಿ ಬೆಳೆಗಾರರ ಸಮಸ್ಯೆ ಪರಿಹರಿಸಲು ಮಹಾತ್ಮಗಾಂಧಿ ಕ್ರೀಡಾಂಗಣದ ಹತ್ತಿರ ರೈತ ಸಂಘಟನೆಗಳ ಪದಾಧಿಕಾರಿಗಳು ಮನವಿ ನೀಡಿದರು.
ಈ ಸಂದರ್ಭದಲ್ಲಿ ಸಂಚಾಲಕ ಸಿ.ಯತಿರಾಜು ಮಾತನಾಡಿ, ಕೃಷಿಯು ಸಂವಿಧಾನ ಪ್ರಕಾರ ರಾಜ್ಯಗಳ ಪಟ್ಟಿಯಲ್ಲಿದೆ. ಕೊಬ್ಬರಿ ಬೆಂಬಲ ಬೆಲೆಯೂ ಸೇರಿದಂತೆ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸುವ ಪರಮಾಧಿಕಾರ, ಕೃಷಿ ಸಂಬಂಧಿ ಕಾನೂನುಗಳು, ನೀತಿಗಳನ್ನು ನಿರ್ಣಯಿಸುವ ಅಧಿಕಾರವನ್ನು ನಮ್ಮ ಸಂವಿಧಾನ ರಾಜ್ಯ ಸರ್ಕಾರಗಳಿಗೆ ನೀಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೃಷಿ ಸಂಬಂಧಿ ಶಾಸನಗಳನ್ನು ನೀತಿಗಳನ್ನು ರೂಪಿಸುವ ಮೂಲಕ ಭಾರತದ ಒಕ್ಕೂಟ ವ್ಯವಸ್ಥೆಗೆ ಕೊಡಲಿ ಪೆಟ್ಟನ್ನು ಹಾಕಿರುವುದರ ವಿರುದ್ಧ ಧ್ವ್ವನಿ ಎತ್ತಬೇಕೆಂದರು.
ಕರ್ನಾಟಕ ರಾಜ್ಯರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಕರಾಳ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆದು ವಾಯುಗುಣ ವೈಪರಿತ್ಯ ತಾಳಿಕೆಯ ಕೃಷಿ ನೀತಿ ಜಾರಿಗೆ ತಂದು ತೆಂಗು ಬೆಳೆಯ ಅಸ್ತಿತ್ವಕ್ಕೆ ಗಂಡಾಂತರಕಾರಿಯಾಗಿರುವ ಎಲೆಸುರುಳಿ ರೋಗ, ಕೆಂಪು ಮತ್ತು ಕಪ್ಪು ಮೂತಿಹುಳುಗಳ ಬಾಧೆ ಸುರುಳಿ ಪೂಚಿರೋಗ, ರಸಸೋರುವರೋಗ ಮುಂತಾದ ರೋಗಗಳಿಗೆ ತುತ್ತಾಗಿ ತೆಂಗಿನ ಇಳುವರಿ ಕೂಡ ಕಡಿಮೆಯಾಗುತ್ತಾ ಸಾಗಿದೆ ಎಂದರು.
ಸಂಯುಕ್ತ ಹೋರಾಟ-ಕರ್ನಾಟಕ, ತುಮಕೂರು ಜಿಲ್ಲಾ ಘಟಕದ ನಿಯೋಗದಲ್ಲಿ ರಾಜ್ಯರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ಮುಖಂಡರಾದ ಷಬ್ಬೀರ್ ಪಾಷ, ರವೀಶ್, ಮೂಡ್ಲಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಅಜ್ಜಪ್ಪ, ಉಪಾಧ್ಯಕ್ಷ ಬಿ.ಉಮೇಶ್, ಎಐಕೆಕೆಎಂಎಸ್ ಜಿಲ್ಲಾ ಸಂಚಾಲಕ ಎಸ್.ಎನ್.ಸ್ವಾಮಿ, ಪ್ರಗತಿಪರ ಚಿಂತಕ ದೊರೈರಾಜು, ಎ. ನರಸಿಂಹಮೂರ್ತಿ ಮುಂತಾದವರು ಇದ್ದರು.