ಒಪಿಎಸ್ ಜಾರಿ ಸೇರಿದಂತೆ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಹತ್ತು ಹಲವು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದು ಹಿರಿಯೂರಿನ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಪಾವಗಡ : ಒಪಿಎಸ್ ಜಾರಿ ಸೇರಿದಂತೆ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಹತ್ತು ಹಲವು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದು ಹಿರಿಯೂರಿನ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಎಂಎಲ್‌ಸಿ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಪಾವಗಡಕ್ಕೆ ಭೇಟಿ ನೀಡಿ, ಇಲ್ಲಿನ ತಾಲೂಕು ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಮ್ಮ ಪತಿ ಶ್ರೀನಿವಾಸ್ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಈ ಬಾರಿ ಅವರನ್ನು ಆಯ್ಕೆ ಮಾಡಿದರೆ ಶಾಲಾ ಶಿಕ್ಷಕರ ವರ್ಗಾವಣೆ, ನೂತನ ಪಿಂಚಣಿ ವ್ಯವಸ್ಥೆ ಗೊಂದಲ, ಪದವೀಧರ ಶಿಕ್ಷಕರ ನೇಮಕಾತಿ ವಿಚಾರ ಹಾಗೂ ಶಿಕ್ಷಕ ವರ್ಗ ಮತ್ತು ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸಿ ಪರಿಹಾರ ಕಲ್ಪಿಸುವ ಭರವಸೆ ವ್ಯಕ್ತಪಡಿಸಿದರು.
undefined
ಕಾಂಗ್ರೆಸ್ಸಿನ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನಮ್ಮ ತಂದೆ ಎ. ಕೃಷ್ಣಪ್ಪ ಅವರು ಸಾಮಾಜಿಕ ಕಲ್ಯಾಣ ಸಚಿವರಾಗಿದ್ದರು. ಈ ವೇಳೆ ಸಿಎಂ ಜತೆ ಚರ್ಚಿಸಿದ್ದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಬಿಸಿ ಊಟ ಯೋಜನೆ ಜಾರಿಗೆ ತಂದರು. ನಂತರ ಸಿದ್ದರಾಮಯ್ಯ ಸರ್ಕಾರ ಕ್ಷೀರ ಭಾಗ್ಯ, ಶೂ ಭಾಗ್ಯ ಹಾಗೂ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವಂತೆ ಎಂಪಿಎಸ್ ತೆಗೆದು ಓಪಿಎಸ್ ಯೋಜನೆಗಳನ್ನು ಜಾರಿಗೊಳಿಸುವುದು ಹಾಗೂ 7ನೇ ವೇತನದ ಆಯೋಗ ಮತ್ತು ಸರಕಾರಿ ಶಾಲೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ ಅವರು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹೊತ್ತು ನೀಡಿ ಕೆಲಸ ಮಾಡುವ ಭರವಸೆ ವ್ಯಕ್ತಪಡಿಸಿದರು.
ನನ್ನ ಪತಿ ಡಿ.ಟಿ. ಶ್ರೀನಿವಾಸ್ ಕೆಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಖಾಸಗಿ ಶಿಕ್ಷಣ ಸಂಸ್ಥೆಯ ನೇತೃತ್ವ ವಹಿಸಿದ್ದಾರೆ. ಈ ಸಂಸ್ಥೆ ಸುಮಾರು 800 ವಿದ್ಯಾರ್ಥಿಗಳನ್ನು ಹೊಂದಿದ್ದು ಎಲ್ಲಾ ವರ್ಗದ ಶಿಕ್ಷಕರ ಮತ್ತು ನೌಕರರ ಸಮಸ್ಯೆಗಳ ಬಗ್ಗೆ ಅರಿವಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಇರುವುದರಿಂದ ಕಾಂಗ್ರೆಸ್ ಪಕ್ಷವು ಶ್ರೀನಿವಾಸ್ ಅವರನ್ನು ಪ್ರಥಮ ಬಾರಿಗೆ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರವು ಒಟ್ಟು 5 ಜಿಲ್ಲೆಯ 33 ತಾಲೂಕಿನ 25 ಸಾವಿರ ಮತದಾರರನ್ನು ಹೊಂದಿದ್ದು, ಈ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚಿಸುವುದಾಗಿ ತಿಳಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಶಾಸಕರಾಗಿ ಸಲ್ಲಿಸಿದ್ದ ಸೇವೆ ಹಾಗೂ ಕಾಂಗ್ರೆಸ್ ಸೇರ್ಪಡೆ ಸೇರಿದಂತೆ ಆನೇಕ ವಿಚಾರಗಳ ಕುರಿತು ವಿವರಿಸಿ ಎಲ್ಲಾ ಕೈಜೋಡಿಸುವ ಮೂಲಕ ತಮ್ಮ ಪತಿ ಎಂಎಲ್‌ಸಿ ಅಭ್ಯರ್ಥಿ ಶ್ರೀನಿವಾಸ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ತಾಲೂಕು ಯಾದವ ಸಮುದಾಯದ ಅಧ್ಯಕ್ಷ ಮುಗದಾಳಬೆಟ್ಟ ನರಸಿಂಹಪ್ಪ, ಹಿರಿಯ ಮುಖಂಡರಾದ ಬ್ಯಾಡನೂರು ಚಿತ್ತಪ್ಪ, ಕೇಶವಚಂದ್ರದಾಸ್, ರಂಗಪ್ಪ, ಎಸ್‌ಇಎ ವಿದ್ಯಾಸಂಸ್ಥೆ ನಿರ್ದೇಶಕ ಡಾ. ಕೃಷ್ಣಕುಮಾರ್, ಮಾಜಿ ಪುರಸಭೆ ಅಧ್ಯಕ್ಷೆ ಸುಮಾ ಅನಿಲ್, ಉಷಾರಾಣಿ ಹರೀಶ್, ಪುರಸಭೆ ಸದಸ್ಯ ಬಾಲ ಸುಬ್ರಮಣ್ಯಂ, ಮಾಜಿ ಪುರಸಭೆ ಸದಸ್ಯ ರಿಜ್ವಾನ್ ಉಲ್ಲಾ, ಮುಖಂಡ ಪೆಟ್ರೋಲ್ ಬಂಕ್ ಬಾಲಚಂದ್ರನಾಯಕ, ಎಂಜಿನಿಯರ್ ಮೂರ್ತಿ, ಅನಿಲ್ ಹಂಡೆ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಣಿ ಪಿ.ಎಲ್., ಶಶಿಕಲಾ, ಹನುಮೇಶ್, ರಾಜವಂತಿ ಮಂಜು, ವೆಂಕಟಾಪುರ ರಂಜಿತ್ ಇತರೆ ಕಾಂಗ್ರೆಸ್ ಮುಖಂಡರಿದ್ದರು.