ಚಿಕ್ಕಬಳ್ಳಾಪುರ: ಅಪರಿಚಿತ ಶವ ಸಾಗಿಸಲು ಪೊಲೀಸರಿಗೆ ನೆರವಾದ ಯೋಧರು

By Kannadaprabha NewsFirst Published Aug 9, 2023, 10:45 PM IST
Highlights

ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆಯ ಶೈತ್ಯಾಗಾರದಲ್ಲಿ ಇಡಲಾಗಿದ್ದು, ಮೃತರ ವಾರಸುದಾರರು ಯಾರಾದರೂ ಇದ್ದರೆ ತಮ್ಮನ್ನು ಸಂಪರ್ಕಿಸುವಂತೆ ಗ್ರಾಮಾಂತರ ಪೋಲಿಸರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ(ಆ.09): ಆವಲಗುರ್ಕಿ ಬಳಿಯ ಈಶಾ ಆದಿಯೋಗಿ ಸನ್ನಿಧಾನದ ಬಳಿಯ ಶ್ರೀ ಜಾಲಾರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಬೆಟ್ಟದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಶವವನ್ನು ಯೋಧನ ನೆರವಿನಿಂದ ಪೊಲೀಸರು ಕುರುಚಲು ಕಾಡಿನಿಂದ 5-6 ಕಿಲೋಮೀಟರ್‌ ದೂರ ಶವವನ್ನು ಹೊತ್ತು ತಂದರು. ಸುಮಾರು 50 ವರ್ಷದ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು ಗುರುತು ಪತ್ತೆಯಾಗಿಲ್ಲ. ಹತ್ತಾರು ಕಿಲೋಮೀಟರ್‌ ಬೆಟ್ಟದ ಸಾಲಿದ್ದು ಕುರಚಲು ಕಾಡಿನ ಮಧ್ಯೆ ವ್ಯಕ್ತಿಯ ಮೃತದೇಹ ಸಿಕ್ಕಿದೆ.

ಶ್ರೀ ಜಾಲಾರಿ ಲಕ್ಷ್ಮೀನರಸಿಂಹ ಸ್ವಾಮಿ ಬೆಟ್ಟದ ಬಳಿ ತರಬೇತಿಗಾಗಿ ಯೋಧರು ಕ್ಯಾಂಪ್‌ ಹಾಕಿ ಕೂಂಬಿಂಗ್‌ ನಡೆಸುತ್ತಿರುವಾಗ ವ್ಯಕ್ತಿಯ ಶವ ಕಾಣಿಸಿದೆ. ಈ ವಿಷಯವನ್ನು ಅವರು ಚಿಕ್ಕಬಳ್ಳಾಪುರ ಪೋಲಿಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌ ಗಮನಕ್ಕೆ ತಂದಿದ್ದಾರೆ. ಆಗ ಎಸ್ಪಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯ ಪಿಎಸ್‌ಐ ಕೆ.ಪ್ರದೀಪ್‌ ಪೂಜಾರ್‌ರಿಗೆ ವಿಷಯ ತಿಳಿಸಿದ್ದಾರೆ.

ಬೆಳೆ ವಿಮೆ ತೊಡಕುಗಳ ನಿವಾರಣೆಗೆ ಸಚಿವ ಎಂ.ಸಿ.ಸುಧಾಕರ್‌ ಸೂಚನೆ

ತಕ್ಷಣ ಕಾರ್ಯ ಪ್ರವೃತ್ತರಾದ ಪಿಎಸ್‌ಐ ಪ್ರದೀಪ್‌ ಪೂಜಾರ್‌ ತಮ್ಮ ಸಿಬ್ಬಂದಿ ರಮೇಶ್‌, ಮಂಜುನಾಥ್‌ ಮತ್ತು ಸಾಧಿಕ್‌ರೊಂದಿಗೆ ಜಾಲಾರಿ ಲಕ್ಷ್ಮೀನರಸಿಂಹ ಸ್ವಾಮಿ ಬೆಟ್ಟದ ಬಳಿ ತೆರಳಿ ಸೈನಿಕರ ಸಹಾಯದೊಂದಿಗೆ ಬೆಟ್ಟಹತ್ತಿ, ಮೃತದೇಹ ಹೊತ್ತು ತಂದಿದ್ದಾರೆ.

ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆಯ ಶೈತ್ಯಾಗಾರದಲ್ಲಿ ಇಡಲಾಗಿದ್ದು, ಮೃತರ ವಾರಸುದಾರರು ಯಾರಾದರೂ ಇದ್ದರೆ ತಮ್ಮನ್ನು ಸಂಪರ್ಕಿಸುವಂತೆ ಗ್ರಾಮಾಂತರ ಪೋಲಿಸರು ತಿಳಿಸಿದ್ದಾರೆ.

click me!