ಕ್ವಾರೆಂಟೈನ್‌ನಲ್ಲಿದ್ದ ಯೋಧ ಹೃದಯಾಘಾತದಿಂದ ಸಾವು

By Kannadaprabha NewsFirst Published Jun 14, 2020, 8:30 AM IST
Highlights

ಭಾರತೀಯ ಭೂ ಸೇನಾ ಸಿಗ್ನಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ನಿವಾಸಿ ಸಂದೇಶ್‌ ಶೆಟ್ಟಿ(34) ಎಂಬವರು ಉತ್ತರಪ್ರದೇಶದ ಮಥುರಾ ಎಂಬಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ಉಪ್ಪಿನಂಗಡಿ(ಜೂ.14): ಭಾರತೀಯ ಭೂ ಸೇನಾ ಸಿಗ್ನಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ನಿವಾಸಿ ಸಂದೇಶ್‌ ಶೆಟ್ಟಿ(34) ಎಂಬವರು ಉತ್ತರಪ್ರದೇಶದ ಮಥುರಾ ಎಂಬಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ಬಾರ್ಯ ಅಲಿಂಗಿರ ಮನೆ ನಿವಾಸಿ ನಾರಾಯಣ ಶೆಟ್ಟಿ- ಗುಲಾಬಿ ದಂಪತಿಯ ನಾಲ್ವರು ಮಕ್ಕಳ ಪೈಕಿ ಎರಡನೇಯವರಾದ ಸಂದೇಶ್‌ ಶೆಟ್ಟಿಈ ಬಾರಿ ರಜೆಯಲ್ಲಿ ಊರಿಗೆ ಬಂದಿದ್ದರು. ಲಾಕ್‌ಡೌನ್‌ ಕಾರಣದಿಂದ ಮೂರು ತಿಂಗಳ ಕಾಲ ಮನೆಯಲ್ಲಿಯೇ ಇದ್ದರು. ಕಳೆದ ಸೋಮವಾರ (ಜೂನ್‌ 8ರಂದು)ವಷ್ಟೇ ಬೆಂಗಳೂರಿಗೆ ಹೋಗಿ ಅಲ್ಲಿಂದ ವಿಮಾನ ಮೂಲಕ ಕರ್ತವ್ಯಕ್ಕೆ ಹಿಂತಿರುಗಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಅವರನ್ನು ಮಥುರಾದಲ್ಲಿನ ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಲಾಗಿತ್ತು. ಈ ಮಧ್ಯೆ ಶುಕ್ರವಾರ ಮಧ್ಯರಾತ್ರಿ 12.30 ರ ವೇಳೆಗೆ ಹೃದಯಾಘಾತಕ್ಕೀಡಾದ ಅವರನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಕುಂದಾಪುರ: ಅಮ್ಮ ಸತ್ತ ಒಂದೇ ಗಂಟೆಯೊಳಗೆ ಮಗ ಸಾವು

ಹದಿನಾಲ್ಕು ವರ್ಷಗಳಿಂದ ಭಾರತೀಯ ಭೂ ಸೇನಾ ಪಡೆಯಲ್ಲಿ ಸಿಗ್ನಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು, ಗೋವಾ, ದೆಹಲಿ, ಜಮ್ಮು ಹಾಗೂ ಉತ್ತರ ಪ್ರದೇಶದಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಪಾರ್ಥೀವ ಶರೀರವನ್ನು ಭಾನುವಾರ ಹುಟ್ಟೂರಿಗೆ ತರಲಾಗುತ್ತದೆ.

ಕ್ರೀಡಾ ಪಟುವಾಗಿದ್ದ ಸಂದೇಶ್‌: ಬಾರ್ಯ ಗ್ರಾಮದ ಪೆರಿಯೊಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇತರಗತಿಯವರೆಗೆ ಕಲಿತು, ಬಳಿಕ ಉಪ್ಪಿನಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಿಕ್ಷಣವನ್ನು ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿ, ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದರು. ಶಾಲಾ ಜೀವನದಲ್ಲಿ ಉತ್ತಮ ಓಟಗಾರನಾಗಿದ್ದ ಇವರು, ಕಾಲೇಜು ದಿನಗಳಲ್ಲಿ ವೇಯ್‌್ಟಲಿಫ್ಟರ್‌ ಆಗಿಯೂ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು.

ಬಿಜೆಪಿ ಜನಸಂವಾದ ರ‍್ಯಾಲಿ, 3015 ಬೂತ್‌ಗಳಲ್ಲಿ ವೀಕ್ಷಣೆ..!

ಸಂದೇಶ್‌ ಶೆಟ್ಟಿಯವರ ಸೋದರತ್ತೆಯ ಮಗಳ ವಿವಾಹವು ಜೂನ್‌ 14ರಂದು ನಿಗದಿಯಾಗಿದ್ದು, ಹೆತ್ತವರಿಲ್ಲದ ಆಕೆಯ ವಿವಾಹವನ್ನು ಅಣ್ಣನ ಸ್ಥಾನದಲ್ಲಿ ನಿಂತು ನಡೆಸಲು ಎಲ್ಲ ಸಿದ್ಧತೆ ನಡೆಸಿದ್ದರು. ಆದರೆ ಕರ್ತವ್ಯಕ್ಕೆ ಹಾಜರಾಗಬೇಕಾದ ಅನಿವಾರ್ಯತೆ ಬಂದಿದ್ದರಿಂದ ಜೂನ್‌ 8ರಂದು ತೆರಳಿದ್ದರು. ಈಗ ವಿವಾಹಕ್ಕೂ ಮುನ್ನವೇ ಮೃತಪಟ್ಟಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಮೌನ ಆವರಿಸಿದೆ. ಮೃತರಿಗೆ ತಂದೆ, ತಾಯಿ, ಸೋದರಿ, ಸೋದರರು ಇದ್ದಾರೆ.

click me!