ಅನಂತ ಹೆಗಡೆಗೆ ಸಾಮಾಜಿಕ ಬಹಿಷ್ಕಾರಕ್ಕೆ ಒತ್ತಾಯ

By Kannadaprabha NewsFirst Published Feb 5, 2020, 10:59 AM IST
Highlights

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಅವಹೇಳನ ಮಾಡಿದ ಸಂಸದ ಅನಂತ ಹೆಗಡೆ ವಿರುದ್ಧ ಕೂಡಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು. ಮಾತ್ರವಲ್ಲದೆ, ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದು ಕಾಂಗ್ರೆಸ್‌ನ ದ.ಕ. ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಒತ್ತಾಯಿಸಿದ್ದಾರೆ.

ಮಂಗಳೂರು(ಫೆ.05): ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಅವಹೇಳನ ಮಾಡಿದ ಸಂಸದ ಅನಂತ ಹೆಗಡೆ ವಿರುದ್ಧ ಕೂಡಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು. ಮಾತ್ರವಲ್ಲದೆ, ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದು ಕಾಂಗ್ರೆಸ್‌ನ ದ.ಕ. ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಒತ್ತಾಯಿಸಿದ್ದಾರೆ.

ನಮ್ಮ ದೇಶದಲ್ಲಿ ಗಾಂಧೀಜಿಗಿಂತ ಎತ್ತರಕ್ಕೇರಿದ ಮಹಾತ್ಮ ಬೇರೊಬ್ಬರಿಲ್ಲ. ಅವರನ್ನೇ ಅವಹೇಳನ ಮಾಡಿರುವುದು ದೇಶದ ನಾಗರಿಕರಿಗೆ ಮಾಡಿದ ಅವಮಾನ, ದೇಶದ್ರೋಹದ ಕೆಲಸ. ಅನಂತ ಹೆಗಡೆಗೆ ಬಿಜೆಪಿ ಕೇವಲ ನೋಟಿಸ್‌ ನೀಡಿದರೆ ಸಾಲದು, ಪಕ್ಷದಿಂದ ಅವರನ್ನು ಉಚ್ಚಾಟಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

ಗಾಂಧೀಜಿ ಹೆಸರು ನಿಷೇಧ ಸವಾಲು:

ಮಹಾತ್ಮಾ ಗಾಂಧೀಜಿ ಕುರಿತು ಸಂಸದ ಅನಂತ ಹೆಗಡೆಗೆ ಗೌರವ ಇಲ್ಲವಾದರೆ, ಅವರ ಕ್ಷೇತ್ರದಲ್ಲಿ ಗಾಂಧೀಜಿ ಹೆಸರಿನ ರಸ್ತೆಗಳು, ಸ್ಮಾರಕಗಳು, ಫಲಕಗಳಿಗೆ ನಿಷೇಧ ಹೇರುವ ಧೈರ್ಯ ಮಾಡಿ ತೋರಿಸಲಿ ನೋಡೋಣ ಎಂದವರು ಸವಾಲು ಹಾಕಿದರು. ಗಾಂಧೀಜಿ ಅವಮಾನವನ್ನು ದೇಶಭಕ್ತರು ಸಹಿಸಲು ಸಾಧ್ಯವಿಲ್ಲ ಎಂದರು.

ನಳಿನ್‌ ಮಾತಿನ ಮೇಲೆ ಹತೋಟಿ ಬೇಕು:

ಪಂಪ್‌ವೆಲ್‌ ಮೇಲ್ಸೇತುವೆ 10 ವರ್ಷಗಳ ಉದ್ಘಾಟನೆ ಮಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲು ಇದಕ್ಕೆ ಕಾಂಗ್ರೆಸ್‌ ಕಾರಣ ಎಂದಿದ್ದಾರೆ. ಯಾವುದೇ ಕೆಲಸ ವಿಳಂಬವಾದರೆ ಕಾಂಗ್ರೆಸ್‌ ಕಾರಣ ಎನ್ನುವುದು, ಬೇಗ ಮುಗಿದರೆ ಬಿಜೆಪಿ ಸಾಧನೆ ಎನ್ನುವುದು ಅವರ ಅಭ್ಯಾಸ. ಪಂಪ್‌ವೆಲ್‌ ಮೇಲ್ಸೇತುವೆಗೆ ಗ್ರೀನ್‌ ಸಿಗ್ನಲ್‌ ನೀಡಿದ್ದು ಕಾಂಗ್ರೆಸ್‌ ಸರ್ಕಾರ. ಆದರೆ ಅದನ್ನು ತ್ವರಿತಗತಿಯಲ್ಲಿ ಮುಗಿಸಲು ಸಂಸದರಿಗೆ ಸಾಧ್ಯವಾಗದೆ ಕಾಂಗ್ರೆಸ್‌ ಮೇಲೆ ಆರೋಪ ಮಾಡಿದ್ದಾರೆ.

ಪುತ್ತೂರು ವಿಭಾಗ BSNL ಸಿಬ್ಬಂದಿ ಸಾಮೂಹಿಕ ಸ್ವಯಂ ನಿವೃತ್ತಿ

ಸಂಸದರಾಗಿ ತಾವು ಆಡುವ ಮಾತಿನ ಮೇಲೆ ಹತೋಟಿ ಇಡಲಿ ಎಂದು ಹರೀಶ್‌ ಕುಮಾರ್‌ ಸಲಹೆ ನೀಡಿದರು. ಎಂಎಲ್ಸಿ ಐವನ್‌ ಡಿಸೋಜ, ಪ್ರಮುಖರಾದ ಶಾಹುಲ್‌ ಹಮೀದ್‌, ಟಿ.ಕೆ. ಸುಧೀರ್‌, ನೀರಜ್‌ ಪಾಲ್‌ ಮತ್ತಿತರರಿದ್ದರು.

ಎತ್ತಿನಹೊಳೆ ನಿಲುವು ಸ್ಪಷ್ಟಪಡಿಸಲಿ

ಎತ್ತಿನಹೊಳೆ ಯೋಜನೆ ಆಗದಂತೆ ಜೀವನವನ್ನೇ ಮುಡಿಪಾಗಿಡುವುದಾಗಿ ಹಿಂದೆ ಸಂಸದ ನಳಿನ್‌ ಕುಮಾರ್‌ ಹೇಳಿದ್ದರು. ಈ ಯೋಜನೆ ಕುರಿತು ಕಾಂಗ್ರೆಸ್‌ ನಿಲುವು ಹಿಂದಿನಂತೆಯೇ ಈಗಲೂ ಸ್ಪಷ್ಟವಾಗಿದೆ. ಮುಖ್ಯಮಂತ್ರಿಗೆ ಸಲಹೆ ನೀಡುವ ಸ್ಥಾನದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಎತ್ತಿನಹೊಳೆ ಯೋಜನೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಹರೀಶ್‌ ಕುಮಾರ್‌ ಒತ್ತಾಯಿಸಿದರು.

click me!