
ಬೆಂಗಳೂರು(ಮಾ.20): ಬಿಸಿಲಿನ ಬೇಗೆಯಿಂದ ಸಿಲಿಕಾನ್ ಸಿಟಿಯ ಅನೇಕ ಬಡಾವಣೆಗಳಲ್ಲಿ ಉರುಗಗಳ ಕಾಟ ಹೆಚ್ಚಾಗಿದ್ದು ಮನೆ, ಹಾಲ್, ಕಾಂಪೌಂಡ್‌ಗಳ ಸಂದಿಗೊಂದು ಸೇರಿದಂತೆ ಎಲ್ಲೆಂದರಲ್ಲಿ ಪತ್ತೆಯಾಗುತ್ತಿವೆ. ಇದರಿಂದ ನಾಗರಿಕರಲ್ಲಿ ಆತಂಕ ಮೂಡಿಸಿದೆ.
ಬಿಬಿಎಂಪಿ(BBMP) ವ್ಯಾಪ್ತಿಯ ಪುಟ್ಟೇನಹಳ್ಳಿ, ರಾಜರಾಜೇಶ್ವರಿ ನಗರ, ವಿದ್ಯಾರಣ್ಯಪುರ, ಸರ್ಜಾಪುರ ರಸ್ತೆ, ಯಲಹಂಕ, ನಾಗರಬಾವಿ, ಎಚ್‌ಬಿಆರ್ ಲೇಟ್ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳಲ್ಲಿ ನಿತ್ಯವೂ ಒಂದಿಲ್ಲೊಂದು ಜಾಗದಲ್ಲಿ ಉರುಗಗಳು ಕಾಣಸಿಗುತ್ತಿವೆ. ಇದರಿಂದಾಗಿ ಪಾಲಿಕೆಯ ವನ್ಯಜೀವಿ ಸಂರಕ್ಷಣಾ ತಂಡ(Wildlife Conservation Team) ಉರುಗಗಳನ್ನು ಹಿಡಿಯಲು ಹರಸಾಹಸ ಪಡುತ್ತಿದೆ.
ಕಸ್ಟಮ್ಸ್ ಅಧಿಕಾರಿಗಳಿಗೆ ವ್ಯಕ್ತಿಯ ಬಟ್ಟೆಯೊಳಗೆ ಸಿಕ್ತು 52 ಜೀವಂತ ಹಾವು, ಹಲ್ಲಿ
ನಿತ್ಯ ಉರುಗಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ನಿಯಂತ್ರಣ ಕೊಠಡಿಗಳಿಗೆ 45ರಿಂದ 50 ಕರೆಗಳು(Lake) ಬರುತ್ತಿವೆ. ಆದರೆ, ವನ್ಯಜೀವಿ ಸಂರಕ್ಷಣಾ ತಂಡದಲ್ಲಿ ಕೇವಲ 7 ಮಂದಿ ಮಾತ್ರ ಉರುಗಗಳನ್ನು ಹಿಡಿಯುವವರು ಇದ್ದಾರೆ. ಈ ಕಾರಣದಿಂದ ಎಲ್ಲ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಮನೆ, ಅಡುಗೆ ಮನೆ, ಬಾತ್‌ರೂಂ, ಕಾಂಪೌಂಡ್ ಒಳಗಡೆ ಇರುವ ಮತ್ತು ನಾಗರಿಕರಿಗೆ ತೊಂದರೆ ಆಗುವಂತಿದ್ದರೆ ಮಾತ್ರ ಅಲ್ಲಿನ ಹಾವುಗಳನ್ನು(Snake) ಹಿಡಿಯಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಬಿಸಿಲು ಹೆಚ್ಚಳ:
ರಾಜಧಾನಿ ಬೆಂಗಳೂರಿನಲ್ಲಿ(Bengaluru) ಕುರುಚಲ ಕಾಡುಗಳು, ಕೆರೆಗಳು ಇಲ್ಲವಾಗುತ್ತಿವೆ. ಚರಂಡಿಗಳು ಕೂಡ ಕಾಂಕ್ರಿಟ್‌ನಿಂದ ನಿರ್ಮಾಣಗೊಂಡಿದ್ದು ಉರುಗಗಳಿಗೆ ಜೀವಿಸಲು ಸೂಕ್ತ ಸ್ಥಳವೇ ಇಲ್ಲದಂತಾಗಿದೆ. ಕಳೆದೆರಡು ವಾರಗಳಿಂದ ನಗರದಲ್ಲಿ ಬಿಸಿಲಿನ ಪ್ರತಾಪ ಹೆಚ್ಚಿದ್ದು ನಿತ್ಯ 34 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಅತೀ ಉಷ್ಣತೆಯಲ್ಲಿ ಉರುಗಗಳಿಗೆ ಉಳಿಗಾಲವಿಲ್ಲ. ಆದ್ದರಿಂದ ತಂಪು ಜಾಗಗಳನ್ನು ಹುಡುಕುತ್ತಾ ಬಿಲದಿಂದ ಮೇಲೆದ್ದು ಬರುತ್ತಿವೆ ಎಂದು ಉರುಗ ತಜ್ಞರು ಮಾಹಿತಿ ನೀಡಿದ್ದಾರೆ.
ಜೀವಿಸಲು ಉತ್ತಮ ಸ್ಥಳಕ್ಕಾಗಿ ಹುಡುಕಾಟ
ಮಾರ್ಚ್, ಏಪ್ರಿಲ್ ಉರುಗಗಳು ಮೊಟ್ಟೆ ಇಡುವ ಸಮಯ. ಈ ಮೊಟ್ಟೆಗಳು ಜೂನ್‌ನಲ್ಲಿ ಒಡೆದು ಮರಿಗಳು ಹೊರ ಬರುತ್ತವೆ. ಪ್ರಸ್ತುತ ಕಾಡುಗಳು, ಚರಂಡಿ, ಕಲ್ಲು ಚಪ್ಪಡಿಗಳು ಸಹ ಸಿಗುತ್ತಿಲ್ಲ. ಎಲ್ಲವೂ ಕಾಂಕ್ರಿಟ್ ಮಯವಾಗಿದ್ದು ಹಾವುಗಳ ಆವಾಸ ಸ್ಥಾನವನ್ನೆಲ್ಲ ಮನುಷ್ಯರು ಆಕ್ರಮಿಸಿಕೊಂಡಿದ್ದಾರೆ. ಹಾಗಾಗಿ ಮನೆ, ಕಾಂಪೌಂಡ್ ಸಂದಿಗಳು, ಪಾರ್ಕ್ಗಳು ಇತ್ಯಾದಿಗಳಲ್ಲಿ ಹಾವುಗಳು ಕಂಡು ಬರುತ್ತಿವೆ. ಉರುಗಗಳು ಅತಿ ಶೀತ ಪ್ರದೇಶ ಮತ್ತು ಹೆಚ್ಚು ಉಷ್ಣತೆಯಿರುವ ಪ್ರದೇಶಗಳಲ್ಲಿ ಜೀವಿಸುವುದಿಲ್ಲ. ಆದ್ದರಿಂದ ಜೀವಿಸಲು ಸೂಕ್ತವಾದ ಸ್ಥಳಗಳನ್ನು ಹುಡುಕಿಕೊಂಡು ಹೊರ ಬರುತ್ತಿವೆ.
ಎಂಥಾ ಧೈರ್ಯ... ಅಂಗೈ ಮೇಲೆ ಹಾವಿಗೆ ನೀರು ಕುಡಿಸಿದ ವ್ಯಕ್ತಿ
ಬೆಂಗಳೂರಿನಲ್ಲಿ ಹಲವು ಬಡಾವಣೆಗಳಲ್ಲಿ ಹೆಚ್ಚಾಗಿ ನಾಗರಹಾವು, ಮಂಡಲದ ಹಾವು, ಕೇರಿ ಹಾವು, ನೀರಾವು, ತೋಳ ಮೂತಿ ಹಾವು, ಟ್ರೀಸ್ನೇಕ್ ಹೆಚ್ಚಾಗಿವೆ. ಅದರಲ್ಲೂ ಸರ್ಜಾಪುರ, ಎಚ್‌ಬಿಆರ್ ಲೇಔಟ್, ಹೆಬ್ಬಾಳ, ವೈಟ್‌ಫೀಲ್ಡ್, ಯಲಹಂಕ ಸೇರಿದಂತೆ ಇತ್ಯಾದಿ ಬಡಾವಣೆಗಳಲ್ಲಿ ನಾಗರಹಾವು ಮತ್ತು ಕೇರಿ ಹಾವು ಹೆಚ್ಚಾಗಿ ಕಂಡು ಬರುತ್ತವೆ ಎಂದು ಉರುಗ ತಜ್ಞ ಮೋಹನ್ ಮಾಹಿತಿ ನೀಡಿದರು.
ಉರುಗ ತಜ್ಞರು(Snake Experts) ಅಥವಾ ವನ್ಯಜೀವಿ ಸಂರಕ್ಷಣಾ ತಂಡದವರು ಹಿಡಿದ ಹಾವುಗಳನ್ನು ಜಾರಕಬಂಡೆ, ತುರುವೆಹಳ್ಳ ಕಾಡು ಅಥವಾ ಜನವಸತಿ ಇಲ್ಲದ ಪ್ರದೇಶಗಳಲ್ಲಿ ಹೋಗಿ ಬಿಟ್ಟು ಬರುತ್ತಾರೆ ಎಂದು ಬಿಬಿಎಂಪಿ ವನ್ಯಜೀವಿ ತಂಡದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಂಪರ್ಕಿಸಿ ಹಾವುಗಳು ಮನೆ ಸುತ್ತಮುತ್ತ ಕಂಡು ಬಂದಲ್ಲಿ ಬಿಬಿಎಂಪಿ ಕೇಂದ್ರ ನಿಯಂತ್ರಣ ಕೊಠಡಿ ಸಂಖ್ಯೆ: 080 22221188 ಅಥವಾ ಉರಗ ತಜ್ಞ ಮೋಹನ್: 98450 80903 ಅನ್ನು ಸಂಪರ್ಕಿಸಬಹುದು.