ಕುಸಿದ ಕಟ್ಟಡದ ನೀರಿನಲ್ಲಿ ಸಾಮ್ರಾಜ್ಯ ಮಾಡಿಕೊಂಡ ಹಾವು, ಚೇಳು, ಕಪ್ಪೆ, ಸೊಳ್ಳೆಗಳು, ವಾರ್ಡ್‌ನಲ್ಲಿ ಸರಿಯಾಗಿ ಕಸ ವಿಲೇವಾರಿಯಿಲ್ಲ, ಬೀದಿ ದೀಪ ನಿರ್ವಹಣೆ, ರಸ್ತೆ ರಿಪೇರಿಯಾಗಲಿ.
ಬಸವರಾಜ ಹಿರೇಮಠ
ಧಾರವಾಡ(ಆ.21): 2019ರ ಹೋಳಿ ಹುಣ್ಣಿಮೆ ಸಮಯದಲ್ಲಿ ಕುಮಾರೇಶ್ವರ ನಗರದ ಬಹು ಅಂತಸ್ತಿನ ಕಟ್ಟಡ ಕುಸಿತದ ಪ್ರಕರಣ ಧಾರವಾಡದ ಜನತೆ ಎಂದಿಗೂ ಮರೆಯುವಂತಿಲ್ಲ. ಘಟನೆ ನಡೆದು ನಾಲ್ಕು ವರ್ಷಗಳಾದರೂ ಕಟ್ಟಡ ಮಾತ್ರ ಆಗಾಗ ಸುದ್ದಿಯಲ್ಲಿರುತ್ತದೆ. ಮಳೆಗಾಲ ಬಂತೆಂದರೆ ಈ ಕಟ್ಟಡ ವಿಶಾಲ ಜಾಗ ಸರಿಸೃಪಗಳ ಸಾಮ್ರಾಜ್ಯವಾಗಿ ಪರಿವರ್ತನೆಯಾಗುತ್ತಿದೆ.
undefined
ಕುಸಿದ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ ಸುತ್ತಲೂ ತಗಡಿನ ಫೆನ್ಸಿಂಗ್ ಮಾಡಿ ಮಹಾನಗರ ಪಾಲಿಕೆ ಕೈ ತೊಳೆದುಕೊಂಡಿದೆ. ರಸ್ತೆಯಿಂದ ಸುಮಾರು 20 ಅಡಿ ಆಳವಿರುವ ಈ ಜಾಗ ಮಳೆಗಾಲದಲ್ಲಿ ಸುಮಾರು ಐದಾರು ಅಡಿ ನೀರು ತುಂಬಿ ಸುತ್ತಲಿನ ಜನರಿಗೆ ಶಾಪವಾಗಿ ಪರಿಣಮಿಸಿದೆ. ಗಬ್ಬು ವಾಸನೆಯೊಂದಿಗೆ ಸುತ್ತಲಿನ ಮನೆಗಳಲ್ಲಿ ನಿತ್ಯ ಹಾವು, ಚೇಳು, ಕಪ್ಪೆಗಳು ದಾಂಗುಡಿ ಇಡುತ್ತಿವೆ.
Road accidents: ವಾಣಿಜ್ಯ ತೆರಿಗೆ ಇಲಾಖೆ ವಾಹನಕ್ಕೆ ಲಾರಿ ಡಿಕ್ಕಿ:ಕರ್ತವ್ಯನಿರತ ಸಿಬ್ಬಂದಿ ಸಾವು
ಸಂಜೆಯಾಗುವುದೇ ತಡ ಸೊಳ್ಳೆಗಳ ದಂಡು ಮನೆ ಮಂದಿಗೆಲ್ಲಾ ದಾಳಿ ಮಾಡುತ್ತದೆ. ಈ ಜಾಗದ ಸಮೀಪವೇ ಇರುವ ಈಶ್ವರ ಅಂಗಡಿ ಎಂಬುವರ ಮನೆಗಂತೂ ಸಾವಿರಾರು ಕಪ್ಪೆ ಮರಿಗಳು ಮೆತ್ತಿಕೊಂಡಿದ್ದು ಮನೆಯಲ್ಲಿ ಇರದಂತಹ ಸ್ಥಿತಿ ಉಂಟಾಗಿದೆ. ಈ ಜಾಗದಿಂದಾಗಿ ಕುಮಾರೇಶ್ವರ ನಗರದ ಜನರು ತೀವ್ರ ತೊಂದರೆಗೀಡಾಗಿದ್ದು, ಕೂಡಲೇ ತಗ್ಗು ಪ್ರದೇಶದಿಂದ ನೀರು ಹೊರಹಾಕಿಸಿ ಅದನ್ನು ಮುಚ್ಚಬೇಕು. ಇಲ್ಲದೇ ಹೋದರೆ ಹೋರಾಟ ಮಾಡುವುದು ಅನಿವಾರ್ಯ ಎನ್ನುವುದು ಮಹಾನಗರ ಪಾಲಿಕೆಯ 1ನೇ ವಾರ್ಡ್‌ನ ಕುಮಾರೇಶ್ವರ ನಗರ ನಿವಾಸಿಗಳ ಆಗ್ರಹ.
ಪಾಲಿಕೆಯಿಂದ ಸ್ಪಂದನೆ ಇರಲಿ:
ಇನ್ನು, ಪೊಲೀಸ್ ಹೆಡ್‌ಕ್ವಾರ್ಟರ್ಸ್, ಕೃಷಿ ವಿವಿ, ಸಾಧನಕೇರಿ ಕೆರೆ ಅಂತಹ ಹಲವು ವಿಶೇಷತೆಗಳನ್ನು ಒಳಗೊಂಡಿರುವ ಹಾಗೂ ಬಹುತೇಕ ಸುಧಾರಿತ ಸಮುದಾಯ ವಾಸಿಸುವ ಪ್ರದೇಶ ಮೊದಲಿನ 3ನೇ ಹಾಗೂ ಸದ್ಯದ 1ನೇ ವಾರ್ಡ್. ಹಲವು ಪ್ರಮುಖ ಬಡಾವಣೆಗಳನ್ನು ಹೊಂದಿರುವ ಈ ವಾರ್ಡ್ ಪ್ರದೇಶ ವಿಸ್ತಾರವಾಗಿದ್ದು ಪಾಲಿಕೆ ನೇಮಿಸಿದ ಸ್ವಚ್ಛತಾ ಸಿಬ್ಬಂದಿ ಸಾಲುತ್ತಿಲ್ಲ. ಪದೇ ಪದೇ ವಾಹನ ರಿಪೇರಿ ನೆಪ ಹೇಳುತ್ತಾರೆ. ಹೀಗಾಗಿ ನಿತ್ಯ ಕಸ ನಿರ್ವಹಣೆಯಾಗುತ್ತಿಲ್ಲ. ಆರೋಗ್ಯ ನಿರೀಕ್ಷಿಕರು, ಸ್ವಚ್ಛತಾ ಮೇಲ್ವಿಚಾರಕರು ಸಿಬ್ಬಂದಿಯಿಂದ ಸರಿಯಾಗಿ ಕೆಲಸ ಮಾಡಿಸುತ್ತಿಲ್ಲ. ಹೀಗಾಗಿ ಜನತೆಯಿಂದ ಎಲ್ಲೆಂದರಲ್ಲಿ ಕಸೆ ಎಸೆಯುವ ಸಂಪ್ರದಾಯ ಮುಂದುವರಿದಿದೆ. ಈ ಬಗ್ಗೆ ನಾಗರಿಕರು ಹಲವು ಬಾರಿ ಪಾಲಿಕೆಗೆ ಕರೆ ಮಾಡಿದರೂ ಸ್ಪಂದನೆ ಮಾತ್ರ ಅಷ್ಟಕ್ಕಷ್ಟೇ ಎನ್ನುವುದು ಸ್ಥಳೀಯರ ಆರೋಪ.
ಫಲಕ ಹಾಕಿ:
ಮಹಾನಗರ ಪಾಲಿಕೆ ಸದಸ್ಯರು ಆಗಾಗ ಬಡಾವಣೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಪಾಲಿಕೆ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಬೇಕು. ಪ್ರತಿ ಬಡಾವಣೆಗಳಿಗೂ ನಾಮಫಲಕ ಇಲ್ಲದೇ ಯಾವ ಬಡಾವಣೆ ಎಲ್ಲಿದೆ ಎಂದು ಹೊರಗಿನ ಜನಕ್ಕೆ ಗೊತ್ತಾಗುತ್ತಿಲ್ಲ. 1ನೇ ವಾರ್ಡ್‌ನ ಬಹುತೇಕ ಬಡಾವಣೆಗಳು ಹೊಸದಾಗಿ ನಿರ್ಮಾಣಗೊಂಡಿದ್ದು ಹೊಸಬರಿಗೆ ತೀವ್ರ ಕಷ್ಟವಾಗುತ್ತಿದೆ. ಹೀಗಾಗಿ ನಾಮಫಲಕ ಹಾಕುವುದಲ್ಲದೇ ವೃತ್ತಗಳಿಗೆ ಹೆಸರುಗಳನ್ನಿಡಬೇಕು ಎನ್ನುವುದು ವಾರ್ಡ್‌ನ ಹಿರಿಯರ ಆಗ್ರಹ.
ತಗ್ಗು-ದಿಣ್ಣೆಯ ರಸ್ತೆ..
ಹುಬ್ಳೀಕರ ಪ್ಲಾಟ್, ಕಾಳೆ ಪ್ಲಾಟ್ ಹಾಗೂ ಹಲವು ಕಡೆಗಳಲ್ಲಿ ಒಳಚರಂಡಿ ನಿರ್ಮಿಸಿದ್ದಾರೆ. ಆದರೆ, ಸಂಪರ್ಕ ನೀಡಿಲ್ಲ. ಪೊಲೀಸ್ ಹೆಡ್‌ಕ್ವಾಟರ್ಸ್‌ನ ಪ್ರಮುಖ ರಸ್ತೆ ಹಾಳಾಗಿ ಹತ್ತು ವರ್ಷಗಳಾದವು. ಎಸ್ಪಿ ಮನೆ ಎದುರಿನ ರಸ್ತೆಗೆ ಡಾಂಬರೀಕರಣ ಆಗುತ್ತದೆ. ಅದೇ ದಾರಿಯಲ್ಲಿ ಮುಂದೆ ಹೋದರೆ ಪೊಲೀಸ್ ಕಾನ್‌ಸ್ಟೇಬಲ್‌ಗಳ ಮನೆ ಎದುರಿನ ರಸ್ತೆ ತಗ್ಗು-ದಿಣ್ಣೆಗಿಂದ ಕೂಡಿರುತ್ತದೆ. ಹಲವು ಸಮಸ್ಯೆಗಳಿದ್ದರೂ ಹೇಳದಂತಹ ಸ್ಥಿತಿ ಪೊಲೀಸರದ್ದಾಗಿದೆ. ಪೊಲೀಸ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ಬೀದಿ ದೀಪಗಳಿಲ್ಲ. ರಾತ್ರಿ ಕತ್ತಲೆಯಲ್ಲಿ ಕಳೆಯಬೇಕಾದ ಸ್ಥಿತಿ. ಸೋಲಾರ್ ದೀಪ ಅಳವಡಿಸಿದರೂ ಅವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಇದೆ.
ವಾರ್ಡ್ ವಿಶೇಷತೆಗಳು..
ಡಾ. ದ.ರಾ. ಬೇಂದ್ರೆ ಅವರ ಸಾಹಿತ್ಯಕ್ಕೆ ಪ್ರೇರಣೆಯಾದ ಸಾಧನಕೇರಿ ಕೆರೆ ಹಾಗೂ ಬಾರೋ ಸಾಧನೆಕೇರಿ ಉದ್ಯಾನವನ ವಾರ್ಡ್‌ನ ಪ್ರಮುಖ ವಿಶೇಷ. ಸದ್ಯ ಅಭಿವೃದ್ಧಿ ಹಂತದಲ್ಲಿರುವ ಈ ಕೆರೆ, ಉದ್ಯಾನವನ ಇಡೀ ಧಾರವಾಡಕ್ಕೆ ಹೆಮ್ಮೆಯೂ ಹೌದು. ಪೊಲೀಸ ಹೆಡ್‌ಕ್ವಾರ್ಟರ್ಸ್‌ನಲ್ಲಿ ಪೊಲೀಸ್ ಕಮೀಷನರೇಟ್ ಹಾಗೂ ಸಶಸ್ತ್ರಪಡೆಯ ಪೊಲೀಸರು ವಾಸವಾಗಿದ್ದಾರೆ. ಇಲ್ಲೊಂದು ಹಳೆಯ ಕಾಲದ ಐತಿಹಾಸಿಕ ದುರ್ಗಾದೇವಿ ದೇವಸ್ಥಾನವಿದೆ. ಪಕ್ಕದ ಸಂಪಿಗೆ ನಗರದಲ್ಲಿ ಮಹಾಗಣಪತಿ ದೇವಸ್ಥಾನವಿದೆ. ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯ, ಉತ್ತರ ಕರ್ನಾಟಕ ಪೈಕಿ ಧಾರವಾಡದಲ್ಲಿರುವ ಮಾನಸಿಕ ರೋಗಿಗಳ ಸಂಸ್ಥೆ (ಡಿಮಾನ್ಸ್), ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್ಸುಗಳಿಗಾಗಿ ಹೊಸ ಬಸ್ ನಿಲ್ದಾಣ, ಪೆಪ್ಸಿ ಫ್ಯಾಕ್ಟರಿ ವಾರ್ಡ್‌ನ ವಿಶೇಷತೆಗಳು.
ವಾರ್ಡ್ ವ್ಯಾಪ್ತಿ ಪ್ರದೇಶಗಳು
ಕುಮಾರೇಶ್ವರ ನಗರ
ಸಂಪಿಗೆ ನಗರ
ಬನಶ್ರೀ ನಗರ
ಕೆಎಚ್‌ಬಿ ಕಾಲೋನಿ ವಿವಿಧ ಹಂತಗಳು
ವಿಕಾಸ ನಗರ
ಮುಧೋಳಕರ ಕಾಂಪೌಂಡ್
ದೇನಾ ಬ್ಯಾಂಕ್ ಕಾಲನಿ
ಸಿದ್ದಾಥ್‌ರ್ ಕಾಲನಿ,
ಆದರ್ಶ ನಗರ
ಸರೋವರ ನಗರ
ಕಟ್ಟಡ ಕುಸಿದ ಜಾಗದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತಿದ್ದು ಕೆಟ್ಟವಾಸನೆಯೊಂದಿಗೆ ಅಲ್ಲಿರುವ ಹಾವು, ಚೇಳು, ಕಪ್ಪೆಗಳು ನಮ್ಮ ಮನೆಯೊಳಗೆ ನುಗ್ಗುತ್ತಿವೆ. ಮನೆ ಮಂದಿಯೆಲ್ಲರಿಗೂ ಸಾಕಾಗಿ ಹೋಗಿದೆ. ಸಾವಿರಾರು ಸಂಖ್ಯೆಯಲ್ಲಿ ಕಪ್ಪೆಗಳ ಹಿಂಡು ನೋಡಿ ಊಟ ಮಾಡಲಾಗುತ್ತಿಲ್ಲ. ಅದೆಷ್ಟುಬಾರಿ ಪಾಲಿಕೆಗೆ ದೂರು ನೀಡಿದರೂ ಕಟ್ಟಡ ಕುಸಿತದ ಜಾಗದ ಹೊಂಡವನ್ನು ಮುಚ್ಚುತ್ತಿಲ್ಲ ಎಂಬುದೇ ಬೇಸರ ಎಂದು ಕುಮಾರೇಶ್ವರ ನಗರ ನಿವಾಸಿ ಈಶ್ವರ ಅಂಗಡಿ ತಿಳಿಸಿದ್ದಾರೆ.
ವಾರ್ಡ್‌ನಲ್ಲಿ ಕಸ ನಿರ್ವಹಣೆ ಸರಿಯಾಗುತ್ತಿಲ್ಲ. ಮೇಲ್ವಿಚಾರಕರು ಸಿಬ್ಬಂದಿ ನಿರ್ವಹಿಸುವುದನ್ನು ಕಲಿಯಬೇಕಿದೆ. ದೂರು ಕೊಟ್ಟವರ ಮನೆ ಎದುರು ಮಾತ್ರ ಸ್ವಚ್ಛತೆಯಾಗುತ್ತಿದೆ. ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಆಗಾಗ ಬಡಾವಣೆಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಜನರಿಗೂ ಅಭಿಪ್ರಾಯ ತಿಳಿಸಲು ಅವಕಾಶ ನೀಡಬೇಕು. ಪ್ರತಿ ಬಡಾವಣೆಗಳಿಗೆ ನಾಮಫಲಕ ಹಾಕಬೇಕು ಎಂದು ಸಂಪಿಗೆ ನಗರ ಹಿರಿಯ ನಾಗರಿಕರು ಲಕ್ಷ್ಮೇಕಾಂತ ಬೀಳಗಿ ಹೇಳಿದ್ದಾರೆ.
ಧಾರವಾಡ ಎಸ್ಪಿಗೆ ಶಬ್ಬಾಶ್ ಗಿರಿ ಕೊಟ್ಟ ಸಚಿವ ಪರಮೇಶ್ವರ್!
24 ಗಂಟೆ ನಿರಂತರ ಕುಡಿಯುವ ನೀರಾದರೂ ಕೊಡಲಿ ಅಥವಾ ಮೂರು ದಿನಕ್ಕೊಮ್ಮೆಯಾದರೂ ಬಿಡಲಿ. ಎಂಟು ದಿನಗಳಿಗೊಮ್ಮೆ ಬೇಡ. ಬೀದಿ ದೀಪ, ಕಸ ನಿರ್ವಹಣೆ ಸೇರಿದಂತೆ ಕೆಎಚ್‌ಬಿ ಕಾಲನಿಯಲ್ಲಿ ಹಲವು ಸಮಸ್ಯೆಗಳಿದ್ದು ಪಾಲಿಕೆ ಸದಸ್ಯರು, ಅಧಿಕಾರಿಗಳು ಬಡಾವಣೆಗಳಿಗೆ ಭೇಟಿಯಾಗಿ ಮಹಿಳೆಯರ, ನಾಗರಿಕರ ಸಮಸ್ಯೆಗಳನ್ನು ಆಲಿಸಬೇಕು ಎಂದು ಕೆಎಚ್‌ಬಿ ಕಾಲನಿ ನಿವಾಸಿ ಸುಮಂಗಲಾ ಕೊರವರ ತಿಳಿಸಿದ್ದಾರೆ.
ಸಂಪಿಗೆ ನಗರ ಕೊನೆ ಬಸ್ ತಿರುವಿನಲ್ಲಿ ಹೆಚ್ಚು ಅಪಘಾತಗಳಾಗುತ್ತಿದ್ದು, ರಸ್ತೆ ತಡೆ ಹಾಕಬೇಕು. ವಾರ್ಡ್‌ನಲ್ಲಿ ಹಲವು ಕಡೆಗಳಲ್ಲಿ ರಸ್ತೆಗಳ ನಿರ್ಮಾಣ, ಗಟಾರುಗಳು ತುಂಬಿಕೊಂಡಿದ್ದು ಹೂಳು ತೆಗೆಯುವ ಕೆಲಸವಾಗಬೇಕಿದೆ. 1ನೇ ವಾರ್ಡ್‌ಗೆ ಪ್ರತ್ಯೇಕ ಅನುದಾನ ಮೂಲಕ ಮೂಲಭೂತ ಸೌಕರ‍್ಯ ಕಲ್ಪಿಸಬೇಕು ಎಂದು ಸಂಪಿಗೆ ನಗರ ನಿವಾಸಿ ಆನಂದ ಪಾಟೀಲ ತಿಳಿಸಿದ್ದಾರೆ.