ಕೋವಿಡ್‌ನಂತಹ ಸಂಕಷ್ಟದ ವೇಳೆ ಭಾರತೀಯ ವೈದ್ಯರು, ವಿಜ್ಞಾನಿಗಳು ಲಸಿಕೆ ಕಂಡುಹಿಡಿಯುವ ಮೂಲಕ ದೇಶದ ಜನರನ್ನು ರಕ್ಷಿಸಿದರು. ನಮ್ಮ ವೈದ್ಯರಿಗೆ ಹಾಗೂ ವಿಜ್ಞಾನಿಗಳಿಗೆ ಸಾಕಷ್ಟು ಸಾಮರ್ಥ್ಯವಿದೆ. ಅವರ ಸಾಮರ್ಥ್ಯಕ್ಕೆ ತಕ್ಕ ಸೌಲಭ್ಯಗಳನ್ನು ಸರ್ಕಾರಗಳು ನೀಡಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ(ಆ.21): ಭಾರತ ಇಂದು ಮೆಡಿಕಲ್ ಹಬ್ ಆಗಿ ಪರಿವರ್ತನೆಯಾಗುತ್ತಿದೆ. ವೈದ್ಯಕೀಯ ಸೇವೆ, ಸೌಲಭ್ಯಗಳಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಭಾನುವಾರ ಇಲ್ಲಿನ ಅಕ್ಷಯ ಕಾಲನಿಯಲ್ಲಿ ನಿರ್ಮಿಸಲಾದ ವಿಹಾನ್ ಹಾರ್ಚ್ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೋವಿಡ್‌ನಂತಹ ಸಂಕಷ್ಟದ ವೇಳೆ ಭಾರತೀಯ ವೈದ್ಯರು, ವಿಜ್ಞಾನಿಗಳು ಲಸಿಕೆ ಕಂಡುಹಿಡಿಯುವ ಮೂಲಕ ದೇಶದ ಜನರನ್ನು ರಕ್ಷಿಸಿದರು. ನಮ್ಮ ವೈದ್ಯರಿಗೆ ಹಾಗೂ ವಿಜ್ಞಾನಿಗಳಿಗೆ ಸಾಕಷ್ಟು ಸಾಮರ್ಥ್ಯವಿದೆ. ಅವರ ಸಾಮರ್ಥ್ಯಕ್ಕೆ ತಕ್ಕ ಸೌಲಭ್ಯಗಳನ್ನು ಸರ್ಕಾರಗಳು ನೀಡಬೇಕು. ಪೋಲಿಯೋದಿಂದ ಹಿಡಿದು ಟೈಪೈಡ್ ವರೆಗೂ ನಾವು ವಾಕ್ಸಿನ್‌ನನ್ನು ಆಮದು ಮಾಡಿಕೊಂಡಿದ್ದೇವೆ. ಆದರೆ, ಕೋವಿಡ್‌ನಲ್ಲಿ ಎರಡು ಸುರಕ್ಷಿತ ವ್ಯಾಕ್ಸಿನ್‌ಗಳನ್ನು ನಮ್ಮ ಭಾರತದಲ್ಲಿಯೇ ತಯಾರಿಸಿ ಜನರಿಗೆ ನೀಡಲಾಗಿರುವುದು ಹೆಮ್ಮೆಯ ಸಂಗತಿ. ಈಗ ಉದ್ಘಾಟನೆಯಾದ ವಿಹಾನ್ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ಸಂಕಲ್ಪ ಹೊಂದಿರುವ ಡಾ. ವಿಜಯಕೃಷ್ಣ ಕೊಳೂರ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಮಹದಾಯಿ ವಿಷಯದಲ್ಲಿ ರಾಜಕೀಯ ಮಾಡಿಲ್ಲ: ಪ್ರಲ್ಹಾದ್ ಜೋಶಿ
ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ ಡಾ. ವಿಜಯ ಸಂಕೇಶ್ವರ ಮಾತನಾಡಿ, ಹುಬ್ಬಳ್ಳಿ ವೈದ್ಯಕೀಯ ಕ್ಷೇತ್ರದಲ್ಲಿ ಜನರಿಗೆ ಜೀವನಾಡಿಯಾಗಿ ಮಾರ್ಪಾಡಾಗಿದ್ದು, ಮೆಡಿಕಲ್ ಹಬ್ ಆಗಿ ಹೊರಹೊಮ್ಮುತ್ತಿರುವುದು ಸಂತಸದ ಸಂಗತಿ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ನಾವು ಬೆಂಗಳೂರಿಗೆ ಹೋಗುವ ಅಗತ್ಯ ಇತ್ತು. ಕಾರ್ಡಿಯಾ ಸಮಸ್ಯೆ ಎದುರಾದಾಗ ಬೆಂಗಳೂರಿಗೆ ಹೋಗುವ ಅಗತ್ಯವಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಹುಬ್ಬಳ್ಳಿಯಲ್ಲೇ ಎಲ್ಲ ವೈದ್ಯಕೀಯ ಸೌಲಭ್ಯಗಳು ಸಿಗುವಂತಾಗಿದೆ ಎಂದರು.
ಹಿರಿಯ ಪತ್ರಕರ್ತ ಮೋಹನ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಡಾ. ವಿಜಯಕೃಷ್ಣ ಕೋಳೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಎಸ್.ಪಿ. ಶಾಸ್ತ್ರಿ, ಡಾ. ಸಚಿನ ಹೊಸಕಟ್ಟಿ, ಕಾಂಗ್ರೆಸ್ ವಕ್ತಾರ ಧ್ರುವ ಜಟ್ಟಿ, ಡಾ. ಶ್ವೇತಾ ಕೊಳೂರ ಸೇರಿದಂತೆ ಹಲವರಿದ್ದರು.