
ಬೆಂಗಳೂರು(ಮಾ.08): ಬೆಂಗಳೂರು ಉತ್ತರ ಹಾಗೂ ದಕ್ಷಿಣ ವಿಭಾಗಗಳಲ್ಲಿ ಹತ್ತಾರು ಎಕರೆ ಗೋಮಾಳ ಭೂಮಿಯನ್ನು ಉಪ ನೋಂದಣಾಧಿಕಾರಿಯೇ ಖಾಸಗಿಯವರಿಗೆ ಅಕ್ರಮವಾಗಿ ನೋಂದಣಿ ಮಾಡಿ ಭ್ರಷ್ಟಾಚಾರ ಎಸಗಿರುವ ಪ್ರಕರಣ ಸೋಮವಾರ ಸದನದಲ್ಲಿ ಪ್ರತಿಧ್ವನಿಸಿ, ಈ ಬಗ್ಗೆ ಸರ್ವ ಪಕ್ಷ ಸದಸ್ಯರಿಂದ ಸಮಗ್ರ ತನಿಖೆಗೆ ಆಗ್ರಹ ವ್ಯಕ್ತವಾಯಿತು.
ಇದಕ್ಕೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ ಉತ್ತರಿಸಿ, ಎರಡೂ ವಿಭಾಗಗಳಲ್ಲಿ ನಡೆದಿರುವ ಸರ್ಕಾರಿ ಭೂಮಿ ಅಕ್ರಮ ಭೂ ನೋಂದಣಿ ಪ್ರಕರಣಗಳನ್ನು ತಕ್ಷಣವೇ ಭ್ರಷ್ಟಾಚಾರ ನಿಗ್ರಹ ದಳ(ACB) ತನಿಖೆಗೆ ವಹಿಸುವುದಾಗಿ ಹಾಗೂ ಭಾರೀ ಭೂ ಅಕ್ರಮ ಆರೋಪಕ್ಕೆ(Land Scam) ಗುರಿಯಾಗಿರುವ ಉತ್ತರ ವಿಭಾಗದ ಉಪನೋಂದಣಾಧಿಕಾರಿ ಕೆ.ರಂಗನಾಥ್ ಅವರನ್ನು ಕೂಡಲೇ ಅಮಾನತುಗೊಳಿಸುವುದಾಗಿಯೂ ತಿಳಿಸಿದರು.
CD Scandal: ಜಾರಕಿಹೊಳಿ ಪ್ರಕರಣ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಯುವತಿ
ಅಲ್ಲದೆ, ರಾಜಧಾನಿ ಬೆಂಗಳೂರು(Bengaluru) ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಇದೇ ರೀತಿ ಎಲ್ಲೆಲ್ಲಿ ಸರ್ಕಾರಿ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿಯವರಿಗೆ ವರ್ಗಾಯಿಸಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗುವುದು. ಜತೆಗೆ ಇತ್ತೀಚೆಗೆ ಸರ್ಕಾರಿ ಜಮೀನನ್ನು(Government Land) ಖಾಸಗಿಯವರಿಗೆ ನೋಂದಾಯಿಸಿರುವ ಎಲ್ಲಾ ಪ್ರಕರಣಗಳನ್ನು ಪುನರ್ ಪರಿಶೀಲಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ವಿಶೇಷ ಅಭಿಯಾನ ಕೈಗೊಳ್ಳುವುದಾಗಿ ಹಾಗೂ ಎಸಿ, ಡಿಸಿ, ತಹಶೀಲ್ದಾರ್‌ಗಳ ನೇತೃತ್ವದ ಅರೆ ನ್ಯಾಯಿಕ ಅಧಿಕಾರಿಗೆ ಸರ್ಕಾರಿ ಜಮೀನನ್ನು ಪರಿಶೀಲಿಸಿ ಖಾಸಗಿಯವರಿಗೆ ನೋಂದಾಯಿಸುವ ಅಧಿಕಾರವನ್ನು ಕೊಡಬೇಕಾ ಬೇಡವಾ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ನಿಯಮ 69ರಡಿ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ಅವರು ಪ್ರಸ್ತಾಪಿಸಿದ ಸಾರ್ವಜನಿಕ ಮಹತ್ವದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ಎ.ಟಿ.ರಾಮಸ್ವಾಮಿ ಅವರು ನಕಲಿ ದಾಖಲೆ(Fake Documents) ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಸುತ್ತಿರುವ ಭೂಗಳ್ಳರ ಹಿಂದೆ ಬೇತಾಳ ಬೆನ್ನು ಹತ್ತಿದಂತೆ ಹತ್ತಿದ್ದಾರೆ. ಸದನದ ಇಂತಹ ಒಬ್ಬ ಹಿರಿಯ ಸದಸ್ಯರು ನಿಷ್ಠೆ ಹಾಗೂ ಪ್ರಮಾಣಿಕತೆಯಿಂದ ಭೂಗಳ್ಳರನ್ನು ಮಟ್ಟಹಾಕಲು ಪ್ರಯತ್ನಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಅಕ್ರಮ ನೋಡಿ ಕಣ್ಮುಚ್ಚಿಕೊಳ್ಳುವ ನಾವೆಂತಹಾ ಭಾರತೀಯರು!
ಇದಕ್ಕೂ ಮುನ್ನ ಅಕ್ರಮ ಭೂ ನೋಂದಣಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಎ.ಟಿ.ರಾಮಸ್ವಾಮಿ, ಬೆಂಗಳೂರು ಉತ್ತರ ವಿಭಾಗದ ಲಕ್ಷ್ಮೇಪುರ, ದಾಸನಪುರ, ಕೊಡಿಗೇಹಳ್ಳಿ, ಬಿದರಹಳ್ಳಿ, ಯಲಹಂಕ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಟ್ಟು 11 ಪ್ರಕರಣಗಳಲ್ಲಿ 37 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಭೂ ಮಾಪಿಯಾದವರೊಂದಿಗೆ ಕೈಜೋಡಿಸಿ ಈ ವಿಭಾಗದ ಉಪವಿಭಾಗಾಧಿಕಾರಿಯಾಗಿದ್ದ ಕೆ.ರಂಗನಾಥ್ ಖಾಸಗಿಯವರಿಗೆ ನಕಲಿ ದಾಖಲೆಗಳ ಆಧಾರದ ಮೇಲೆ ನೋಂದಣಿ ಮಾಡಿಕೊಟ್ಟಿದ್ದಾರೆ. ಅದೇ ರೀತಿ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯಾಗಿದ್ದ ಶಿವಣ್ಣ ಬೆಂಗಳೂರು ನಗರ ಜಿಲ್ಲೆ ಬೇಗೂರು ಹೋಬಳಿ ಹುಳಿಮಾವು ಗ್ರಾಮದ ಎಕರೆಗಟ್ಟಲೆ ಗೋಮಾಳ ಜಮೀನನ್ನು ಅಕ್ರಮವಾಗಿ ಖಾಸಗಿಯವರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ.
ಇದು ಈಗ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾಗಿರುವ ಎನ್.ಮಂಜುನಾಥ್ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ನಡೆಸಿದ ತನಿಖಾ ವರದಿಯಲ್ಲಿ ಬಹಿರಂಗವಾಗಿದೆ. ತಮ್ಮ ವರದಿಯನ್ನು ಮುಖ್ಯಕಾರ್ಯದರ್ಶಿ ಅವರಿಗೆ ಕಳುಹಿಸಿ ಕ್ರಮಕ್ಕೆ ಶಿಫಾರಸು ಮಾಡಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಆಗಿಲ್ಲ. ಬದಲಿಗೆ ಈ ಪ್ರಕರಣ ಹೊರಬಂದ ಬಳಿಕ ಒಬ್ಬ ಅಧಿಕಾರಿಯನ್ನು ಇನ್ನೂ ಹೆಚ್ಚಿನ ಸರ್ಕಾರಿ ಭೂಮಿ ಇರುವ ಮತ್ತೊಂದು ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇದನ್ನು ನೋಡಿಕೊಂಡು ‘ಭಾರತ ಮಾತಾಕಿ ಜೈ’ ಎಂದು ಕೂರುವ ನಾವೆಂತಹಾ ಭಾರತೀಯರು, ಸರ್ಕಾರ ಬದುಕಿದೆಯಾ ಎಂದು ವಾಗ್ದಾಳಿ ನಡೆಸಿದರು.
ಜಾರಕಿಹೊಳಿ ಸಿಡಿ ಕೇಸ್ ಮಾಜಿ ಸಚಿವರಿಗೆ ಕೊಂಚ ರಿಲೀಫ್
ಇದಕ್ಕೆ ಕಾಂಗ್ರೆಸ್‌ನ ಮಾಜಿ ಸ್ಪೀಕರ್ ರಮೇಶ್ ಕುಮಾರ್(Ramesh Kumar), ಎಚ್.ಕೆ.ಪಾಟೀಲ್IHK PAtil), ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ಜೆಡಿಎಸ್‌ನ ಶಿವಲಿಂಗೇಗೌಡ ಸೇರಿದಂತೆ ಪಕ್ಷಾತೀತವಾಗಿ ಸದಸ್ಯರು ದನಿಗೂಡಿಸಿ ತನಿಖೆಗೆ ಆಗ್ರಹಿಸಿದರು.
ರಾಮಸ್ವಾಮಿಯವರ ಶ್ರಮಕ್ಕೆ ಇಡೀ ಸದನ ಧ್ವನಿಯಾಗಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಾಮಸ್ವಾಮಿ ಅವರ ಶ್ರಮ ವ್ಯರ್ಥವಾಗಬಾರದು. ಸರ್ಕಾರ ಇದನ್ನು ಗಂಭೀರವಾಗಿ ಕ್ರಮ ಕೈಗೊಂಡರೆ ಸರ್ಕಾರಕ್ಕೂ ಜಮೀನು ಉಳಿಯುತ್ತದೆ ಅಂತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.