Sirsi Haveri Road: ಸಾವಿಗೆ ದಾರಿಯಾದ ರಸ್ತೆ; ಹೇಳಿ ಹೇಳಿ ಸಾಕಾಗಿ, ತಕ್ಕ ಪಾಠ ಕಲಿಸಲು ರೆಡಿಯಾದ ಜನತೆ

Published : May 05, 2026, 01:22 PM IST
sirsi haveri road

ಸಾರಾಂಶ

Sirsi Haveri Road: ಶಿರಸಿ ಹಾವೇರಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಶುರುವಾಗಿ ಐದು ವರ್ಷಗಳ ಮೇಲಾಯ್ತು. ಹೀಗಾಗಿ ಈ ಭಾಗದ ಜನರು ಒಟ್ಟಿಗೆ ಸೇರಿ ರಸ್ತೆಗೋಸ್ಕರ ಪ್ರತಿಭಟನೆ ಮಾಡಿದ್ದಾರೆ. ಓಡಾಡಲು ಸಾಧ್ಯವಾಗದ ರೀತಿಯಲ್ಲಿ ರಸ್ತೆ ಇದ್ದರೂ ಕೂಡ ಜನಪ್ರತಿನಿಧಿಗಳು ಸುಮ್ಮನೆ ಇದ್ದಾರೆ.

ಉತ್ತರ ಕನ್ನಡ: ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ( Sirsi Haveri Road ) ಪ್ರತಿ ವರ್ಷ ಹಾಳಾದ ರಸ್ತೆಗೆ ಅಲ್ಪ ಸ್ವಲ್ಪ ಡಾಂಬರು ಹಾಕಿ ಪ್ಯಾಚ್‌ ವರ್ಕ್‌ ಮಾಡಲಾಗ್ತಿದೆ. ಕಳೆದ ಎರಡು-ಮೂರು ವರ್ಷಗಳಿಂದ ಇದು ರಸ್ತೆಯಾಗಿ ಉಳಿದಿಲ್ಲ, ಬದಲಾಗಿ ಕೆಸರು ಗದ್ದೆಯಾಗಿದೆ. ಬೇಸಿಗೆ ಬಂದರೆ ಎಲ್ಲೆಲ್ಲೂ ಧೂಳು, ಮಳೆಗಾಲದಲ್ಲಿ ಕೆಸರು ಗದ್ದೆ. ಹೀಗಾಗಿ ಇಂದು ಬಿಸಲಕೊಪ್ಪದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗಿದೆ.,

ಬಿಸಲಕೊಪ್ಪದಲ್ಲಿ ಪ್ರತಿಭಟನೆ

ಪ್ರತಿ ವರ್ಷ ರಸ್ತೆ ಸರಿ ಇಲ್ಲ ಎಂದು ಶಾಪ ಹಾಕುತ್ತಲೇ ಸಾಗಬೇಕಾಗಿದೆ. ಹೀಗಾಗಿ ರಸ್ತೆ ಕೆಲಸ ವಿಳಂಬವಾಗಿದೆ. ಅಷ್ಟೇ ಅಲ್ಲದೆ ಅವೈಜ್ಞಾನಿಕ ಕಾಮಗಾರಿ ನಡೆಯುತತಿದೆ. ಹೀಗಾಗಿ ಇಲ್ಲಿನ ಜನತೆ ರೊಚ್ಚಿಗೆದ್ದಿದೆ. ಶಿರಸಿ ಹಾಗೂ ಹಾವೇರಿ ಮಧ್ಯೆ ಇರುವ ಬಿಸಲಕೊಪ್ಪ ಬಳಿ ವಾಹನ ತಡೆದು, ಹೆದ್ದಾರಿ ಬಂದ್ ಮಾಡಿ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಬದುಕಿಗಾಗಿ ಹೋರಾಟ' ಹೆಸರಿನಲ್ಲಿ ಬಿಸಲಕೊಪ್ಪ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗಿದೆ.

ಫುಲ್‌ ಟ್ರಾಫಿಕ್‌ ಜಾಮ್

ಯಾವ ವಾಹನಗಳಿಗೂ ಹೆದ್ದಾರಿಯಲ್ಲಿ ತೆರಳಲು ಅವಕಾಶ ನೀಡದೇ ಪ್ರತಿಭಟನೆ ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ರಸ್ತೆ ಅವ್ಯವಸ್ಥೆ ವಿರುದ್ಧ ಕಿಡಿ ಕಾರಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ತಕ್ಷಣ ಭೇಟಿ ಕೊಡುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

ಜನಪ್ರತಿನಿಧಿಗಳ, ಅಧಿಕಾರಿಗಳ ಗುತ್ತಿಗೆದಾರರ ವಿರುದ್ಧ ಧಿಕ್ಕಾರ ಕೂಗಿ ರಣಾಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರನ ವಿರುದ್ಧ ಕೆಂಡ ಕಾರಿದ್ದಾರೆ. ಶಾಸಕರ, ಸಂಸದರ & ಅಧಿಕಾರಿಗಳ ಹೊಣೆಗೇಡಿತನಕ್ಕೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳಲಾಗಿದೆ. ಶಿರಸಿ ಹಾವೇರಿ ಹೈವೇ ಬೃಹತ್ ಹೋರಾಟಕ್ಕೆ ಪಕ್ಷಾತೀತವಾಗಿ ಜನರು ಬೆಂಬಲಿಸಿದ್ದಾರೆ. ಬಂದ್ ಹಿನ್ನೆಲೆ ಕಿಲೋಮೀಟರ್ ಗಟ್ಟಲೇ ವಾಹನಗಳ ಸಾಲು ಸಾಲಾಗಿ ನಿಂತಿವೆ. ಹೀಗಾಗಿ ಫುಲ್ ಟ್ರಾಫಿಕ್ ಜಾಮ್ ಆಗಿದೆ.

ಪ್ರತಿಭಟನಾಕಾರರು ಏನಂದ್ರು?

“ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ಇದು ಆರಂಭ ಅಷ್ಟೇ.. ಬಗ್ಗದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ಜಿಲ್ಲಾಧಿಕಾರಿ ಬಂದು ಸಮಸ್ಯೆ ಆಲಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ” ಎಂದು ಪ್ರತಿಭಟನಾನಿರತರು ಸಂದೇಶ ನೀಡಿದ್ದಾರೆ.

ಹೆದ್ದಾರಿ ಪ್ರಾಧಿಕಾರದ ಪೋಸ್ಟರ್‌ಗೆ ಶ್ರದ್ಧಾಂಜಲಿ ಅರ್ಪಿಸಿ ಜನ ಪ್ರತಿಭಟನೆ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ! ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ AC ಚಂದ್ರಶೇಖರ್, ತಹಶೀಲ್ದಾರ್ ಪಟ್ಟರಾಜ ಗೌಡ ದೌಡಾಯಿಸಿದ್ದಾರೆ. ಇನ್ನು ಪ್ರತಿಭಟನಾಕಾರರ ಜೊತೆ ಅಧಿಕಾರಿಗಳುಮಾತುಕತೆ ಮಾಡಿದ್ದಾರೆ.

ಧರಣಿನಿರತರ ಮನವೊಲಿಸುವ ಪ್ರಯತ್ನ ಮಾಡಿದರೂ ಕೂಡ, ಡಿಸಿಯೇ ಬರಬೇಕೆಂದು ಬಿಗಿಪಟ್ಟು ಹಿಡಿಯಲಾಗಿತ್ತು. ಬಿರು ಬಿಸಿಲಿನ ಮಧ್ಯೆಯೂ ಧರಣಿ ನಡೆದಿತ್ತು. ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಭಾಗಿಯಾಗಿದ್ದರು. ಪೋಲಿಸರ ಸರ್ಪಗಾವಲಿನ ನಡುವೆ ಹೋರಾಟ ತೀವ್ರಗೊಂಡಿತ್ತು. ಗುತ್ತಿಗೆದಾರರನ್ನು ಕರೆಸಿ ಮಾತನಾಡಲಾಗುವುದು ಎಂದು ಸಮಾಧಾನ ಮಾಡಲಾಗಿದೆ.

ನಿಜಕ್ಕೂ ಏನಾಗಿದೆ?

ಈ ಭಾಗದ ಶಾಸಕ ಭೀಮಣ್ಣ ನಾಯ್ಕ್‌, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, “ಗುತ್ತಿಗೆದಾರರ ತಪ್ಪು” ಎಂದು ಹೇಳಿದ್ದಾರೆ. ಆದರೆ ಯಾವುದೇ ರೀತಿಯಲ್ಲಿ ಕೂಡ ಕ್ರಮ ಕೈಗೊಂಡಿಲ್ಲ.

ಜನರು ಅವರ ಕಷ್ಟಗಳನ್ನು ಯಾರ ಬಳಿ ಹೇಳಬೇಕು? ಇನ್ನೇನು ಒಂದು ತಿಂಗಳಲ್ಲಿ ಮಳೆಗಾಲ ಶುರುವಾಗಲಿದೆ. ರಸ್ತೆ ಕಾಮಗಾರಿ ಮಾಡ್ತೀವಿ ಎಂದು ಇರೋ ರಸ್ತೆಯನ್ನು ಅಗೆದು ಇಟ್ಟಿದ್ದಾರೆ. ಹೀಗಾಗಿ ಇನ್ನಷ್ಟು ಧೂಳು ಆಗಿದೆ, ಮೊನ್ನೆ ಒಂದು ಮಳೆಗೆ ರಸ್ತೆಯಂತೂ ಕೆಸರುಗದ್ದೆಯಾಗಿದೆ. ಶಿರಸಿಯಿಂದ ದಾಸನಕೊಪ್ಪ, ನಾಗರಕತ್ರಿವರೆಗೆ ರಸ್ತೆ ಅಗೆಯಲಾಗಿದೆ, ಜಲ್ಲಿ ಕಲ್ಲು ಹಾಕಲಾಗಿದೆ. ಹೀಗಾದಾಗ ಬೈಕ್‌ನಲ್ಲಂತೂ ಹೋಗಲು ಆಗೋದಿಲ್ಲ, ಬೇರೆ ವಾಹನಗಳಲ್ಲಿ ಹೋದರೂ ಕೂಡ ಧೂಳಿಗೆ ರಸ್ತೆ ಕಾಣ್ತಿಲ್ಲ, ಇದರಿಂದ ಇತ್ತೀಚೆಗೆ ಇದೇ ರೋಡ್‌ನಲ್ಲಿ ಓಮಿನಿಯೊಂದು ಗಟಾರಕ್ಕೆ ಬಿದ್ದಿದೆ.

ಹಾವೇರಿ ಭಾಗದಿಂದಲೂ ಶಿರಸಿ ಶಾಲೆ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಾರೆ. ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಒಂದು ಸೆಕೆಂಡ್‌ ಕೂಡ ಈ ರಸ್ತೆ ಖಾಲಿ ಇರೋದಿಲ್ಲ. ಹೀಗಿರುವಾಗ ಈ ರೀತಿ ರಸ್ತೆ ಇದ್ದರೆ ಏನು ಮಾಡಬೇಕು? ನಾಳೆ ಅಪಘಾತ ಆದರೆ, ಧೂಳಿನಿಂದ ಅನಾರೋಗ್ಯ ಆದರೆ ಅದಕ್ಕೆ ಯಾರು ಹೊಣೆ? ಆಮೇಲೆ ಶ್ರದ್ಧಾಂಜಲಿ ಹೇಳಿ ಹೋಗುತ್ತೀರಾ ಎಂದು ಇಲ್ಲಿನ ಜನರು ಆಕ್ರೋಶ ಹೊರಹಾಕಿದ್ದಾರೆ.

PREV
Read more Articles on
click me!

Recommended Stories

ಬಗಲ್‌ ಮೇ ಹೈ ದುಷ್ಮನ್! ಸಚಿವ ಜಮೀರ್ ಅಹಮದ್ ಮನೆಯಲ್ಲಿ 1.2 ಕೆಜಿ ಚಿನ್ನ ಕಳ್ಳತನ ಮಾಡಿದ ಸಂಬಂಧಿಕರು!
ಶೃಂಗೇರಿ ಮರು ಮತ ಎಣಿಕೆ: 'ಬಿಜೆಪಿಯಿಂದ ವೋಟ್ ಚೋರಿ, ಪ್ರಜಾಪ್ರಭುತ್ವಕ್ಕೆ ದ್ರೋಹ' - ಸಿಎಂ ಸಿದ್ದರಾಮಯ್ಯ ಆರೋಪ