Karwar: ತಲೆಮರೆಸಿಕೊಂಡಿದ್ದ ಆರೋಪಿಗೆ 33 ವರ್ಷಗಳ ಬಳಿಕ 5 ವರ್ಷ ಜೈಲು ಶಿಕ್ಷೆ, ದಂಡ

Published : May 05, 2026, 09:49 AM IST
judgementJudgement

ಸಾರಾಂಶ

1993ರಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ಪ್ರಕರಣದಲ್ಲಿ, ತಲೆಮರೆಸಿಕೊಂಡಿದ್ದ ಆರೋಪಿಯನ್ನು 2021ರಲ್ಲಿ ಬಂಧಿಸಲಾಗಿತ್ತು. ಇದೀಗ ಕಾರವಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಕಾರವಾರ: ಹಳೆಯ ದ್ವೇಷದ ಹಿನ್ನೆಲೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ 1993ರ ಹಳೆಯ ಪ್ರಕರಣದ ಆರೋಪಿಗೆ ಕಾರವಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹7,000 ದಂಡ ವಿಧಿಸಿ ತೀರ್ಪು ನೀಡಿದೆ.

ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ

ಹಳೆಯ ದ್ವೇಷದ ಹಿನ್ನೆಲೆ ಆರೋಪಿಗಳು ಗುಂಪುಗೂಡಿ ಪ್ರಶಾಂತ್ ಎಂಬ ವ್ಯಕ್ತಿಗೆ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಕುರಿತು 1993ರಲ್ಲಿ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 143, 147, 149, 504, 302 ಅಡಿ ಪ್ರಕರಣ ದಾಖಲಾಗಿತ್ತು. ಅಂದಿನ ಕದ್ರಾ ವೃತ್ತದ ಸಿಪಿಐ ಆಗಿದ್ದ ಡಿ.ಕೆ. ನಿಕ್ಕಮ್ ಅವರು ಸಮಗ್ರ ತನಿಖೆ ನಡೆಸಿ, ಕಾರವಾರದ ಭಗತವಾಡಾ ಅಸ್ನೋಟಿ ನಿವಾಸಿ ದೀಲಿಪ ಶಾಂತಾ ತಳೇಕರ ಎಂಬಾತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಆರೋಪಿ ದೀಲಿಪ ತಲೆಮರೆಸಿಕೊಂಡಿದ್ದ. ಹೀಗಾಗಿ ಆತನ ಪ್ರಕರಣವನ್ನು ಎಲ್.ಪಿ.ಸಿ ಎಂದು ಪರಿಗಣಿಸಲಾಗಿತ್ತು. ತರುವಾಯ, 16-04-2021 ರಂದು ಚಿತ್ತಾಕುಲ ಪಿಎಸ್‌ಐ ಪ್ರವೀಣ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ, ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.

5 ವರ್ಷ ಜೈಲು ಶಿಕ್ಷೆ ಹಾಗೂ ₹7 ಸಾವಿರ ದಂಡ

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಕಾರವಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಆರೋಪಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ₹7 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸುನೀತಾ ನಾಗೇಕರ ವಾದ ಮಂಡಿಸಿದ್ದರು.

PREV
Read more Articles on
click me!

Recommended Stories

Belagavi: ವಿಡಿಯೋ ಕಾಲ್‌ನಲ್ಲಿ ಮಗುವಿನ ಮುಖ ತೋರಿಸದ ಅತ್ತೆಗೆ ಚಾಕು ಇರಿದ ಪಾಪಿ ಅಳಿಯ
ನೋಡ ನೋಡ್ತಿದ್ದಂತೆ ಹೊತ್ತಿ ಉರಿದ ಬೆಂಗಳೂರಿನಿಂದ ಗದಗಕ್ಕೆ ಹೊರಟಿದ್ದ ಪಲ್ಲಕ್ಕಿ ಬಸ್