ಕಳೆದೈದು ತಿಂಗಳಿಂದ ಬಂದ್ ಮಾಡಲಾಗಿದ್ದ ನಗರದ ಶಿರಾ ಗೇಟ್ ರಸ್ತೆಯನ್ನು ಇಂದಿನಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದರು.
ತುಮಕೂರು (ಸೆ.15): ಕಳೆದೈದು ತಿಂಗಳಿಂದ ಬಂದ್ ಮಾಡಲಾಗಿದ್ದ ನಗರದ ಶಿರಾ ಗೇಟ್ ರಸ್ತೆಯನ್ನು ಇಂದಿನಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದರು. ನಗರದ ಎಸ್.ಮಾಲ್ ಬಳಿ ಲೋಕೋಪಯೋಗಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು 6.65 ಕೋಟಿ ರು.ಗಳ ಅಂದಾಜು ವೆಚ್ಚದಲ್ಲಿ ಪುನರ್ ನಿರ್ಮಿಸಿರುವ ಸೇತುವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಅಮಾನಿಕೆರೆ ಕೋಡಿ ನೀರು ಹರಿಯುವ ರಾಷ್ಟ್ರೀಯ ಹೆದ್ದಾರಿ 4ರ ಸೇತುವೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಸಾವುಗಳು ಸಂಭವಿಸುತ್ತಲೇ ಇದ್ದವು.
ಕಿರಿದಾಗಿದ್ದ ಈ ಸೇತುವೆಯನ್ನು ಅಗಲೀಕರಣಗೊಳಿಸಿ, ಹೊಸ ಸೇತುವೆಯನ್ನು ನಿರ್ಮಿಸಬೇಕೆಂದು ಈ ಭಾಗದ ಜನರು, ಜನಪ್ರತಿನಿಧಿಗಳಿಂದ ಬಹು ದಿನಗಳ ಬೇಡಿಕೆಯಿತ್ತು. ರಾಜ್ಯದ 15 ಜಿಲ್ಲೆ ಸೇರಿ ಜಿಲ್ಲೆಯ ಪಾವಗಡ, ಕೊರಟಗೆರೆ, ಶಿರಾ, ಮಧುಗಿರಿ ಭಾಗಕ್ಕೆ ಇದೇ ರಸ್ತೆಯಿಂದ ತೆರಳಬೇಕಿತ್ತು. ರಸ್ತೆ ಕಾಮಗಾರಿ ಕೈಗೊಂಡ ನಂತರ ವಾಹನಗಳು ಬಳಸಿಕೊಂಡು ಹನುಮಂತಪುರ ಮೂಲಕ ಸಾಗಬೇಕಿತ್ತು. ಈಗ ಸೇತುವೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ವಾಹನಗಳು ಮುಕ್ತವಾಗಿ ಸಂಚರಿಸಬಹುದಾಗಿದೆ ಎಂದು ಹೇಳಿದರು.
ರಾಮದೇವರ ಬೆಟ್ಟದಲ್ಲಿ ರಣಹದ್ದು ರಿಲಿಸಿಂಗ್ ಸೆಂಟರ್: ಅರಣ್ಯಾಧಿಕಾರಿ ರಾಮಕೃಷ್ಣಪ್ಪ
ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಭಾಗವಾಗಿ ಜಿಲ್ಲೆಯಲ್ಲಿ 70 ಕೋಟಿ ರು ವೆಚ್ಚದಲ್ಲಿ ಕಾರ್ಡಿಯಾಲಜಿ ಕೇಂದ್ರವನ್ನು ನಿರ್ಮಿಸಲಾಗುವುದು. ಹೃದ್ರೋಗ ಸಮಸ್ಯೆಯಿದ್ದವರು ತುಮಕೂರು ಜಿಲ್ಲೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಲು ಕನಿಷ್ಟ 2 ತಾಸು ಬೇಕಾಗುತ್ತದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ರೋಗಿಗಳು ಸಾವನ್ನಪ್ಪುವ ಸಾಧ್ಯತೆಯಿರುತ್ತದೆ. ಜಿಲ್ಲೆಯಲ್ಲಿ ಕಾರ್ಡಿಯಾಲಜಿ ಕೇಂದ್ರ ನಿರ್ಮಿಸುವುದರಿಂದ ಜಿಲ್ಲೆಯ ಜನರಿಗೆ ಮಾತ್ರವಲ್ಲದೇ ಶಿವಮೊಗ್ಗ, ಹಾಸನ, ಚಿತ್ರದರ್ಗು ಮುಂತಾದ ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ ಎಂದರು.
ಪ್ರಸ್ತುತ ಕಾರ್ಯನನಿರ್ವಹಿಸುತ್ತಿರುವ ಜಿಲ್ಲಾಸ್ಪತ್ರೆಯು ಕಲ್ಲಿನ ಕಟ್ಟಡವಾಗಿದ್ದು, ತುಂಬಾ ಹಳೆಯದಾಗಿದೆ. ಜಿಲ್ಲಾಸ್ಪತ್ರೆಗೆ ಆಧುನಿಕ ರೂಪ ನೀಡಿ ಸುಸಜ್ಜಿತಗೊಳಿಸಲು 130 ಕೋಟಿ ರು.. ವೆಚ್ಚದ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ ವಸತಿ ನಿಲಯ ನಿರ್ಮಿಸಲು 50 ಕೋಟಿ ರು. ಗಳ ಅನುದಾನವನ್ನು ಒದಗಿಸಲು ಒಪ್ಪಿದ್ದಾರೆ. ಇದಕ್ಕಾಗಿ ತುಮಕೂರು ವಿಶ್ವವಿದ್ಯಾನಿಲಯದ ಆವರಣದೊಳಗೆ ಸ್ಥಳವನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
50 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ: ಶೈಕ್ಷಣಿಕ ನಗರವೆನಿಸಿಕೊಂಡಿರುವ ತುಮಕೂರಿನಲ್ಲಿ ಬಹುತೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪೂರಕವಾದ ಹಾಸ್ಟೆಲ್ ವ್ಯವಸ್ಥೆಗಳಿಲ್ಲ. ಈಗಿರುವ ಹಾಸ್ಟೆಲ್‌ಗಳು ಸಾಲುತ್ತಿಲ್ಲ. ಜಿಲ್ಲೆಯಲ್ಲಿ 50 ಕೋಟಿ ರು. ವೆಚ್ಚದಲ್ಲಿ 12 ನೂತನ ಹಾಸ್ಟೆಲ್‌ಗಳನ್ನು ನಿರ್ಮಿಸಲು ಶೀಘ್ರದಲ್ಲಿ ಅಡಿಗಲ್ಲು ಹಾಕಲಾಗುವುದು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ 3 ಸಾವಿರ ಹಾಗೂ ಗುಬ್ಬಿ ತಾಲೂಕಿನ ಎಚ್‌ಎಎಲ್ ಘಟಕದಲ್ಲಿ 6500 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುತ್ತಿರುವ ತುಮಕೂರು ಜಿಲ್ಲೆಗೆ ಸವಲತ್ತು ನೀಡುವ ಅವಶ್ಯಕತೆ ಇದ್ದು, ನಮ್ಮ ಸರ್ಕಾರವು ಜಿಲ್ಲೆಯ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು.
ಗುಬ್ಬಿ ರಸ್ತೆಯಲ್ಲಿರುವ ಭೀಮಸಂದ್ರದ ಸೇತುವೆಯನ್ನೂ ಸಹ ಅಗಲೀಕರಣಗೊಳಿಸುವ ಕಾಮಗಾರಿಯನ್ನು ಸದ್ಯದಲ್ಲೆ ಕೈಗೆತ್ತಿಕೊಳ್ಳಲಾಗುವುದು. ತುಮಕೂರಿಗೆ ಮೆಟ್ರೋ ರೈಲು ಸಂಚಾರ ಸೌಲಭ್ಯವನ್ನು ತರುವ ನಿಟ್ಟಿನಲ್ಲಿ ವಿಸ್ತೃತ ವರದಿಯನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ನೀಡಲಾಗುವುದೆಂದು ತಿಳಿಸಿದರು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ ವಸಂತನರಸಾಪುರದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ನಂತರ ಎಸ್ ಮಾಲ್ ಬಳಿಯಿರುವ ಈ ಸೇತುವೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಈ ಸೇತುವೆ ಪುನರ್ ನಿರ್ಮಾಣದಿಂದ ಸಂಚಾರ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುವಾಗಲಿದೆ ಎಂದರು.
ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಾನೆಂದಿಗೂ ರಾಜಕಾರಣ ಮಾಡುವುದಿಲ್ಲ. ವೇಗವಾಗಿ ಬೆಳೆಯುತ್ತಿರುವ ತುಮಕೂರು ನಗರವನ್ನು ಎಕನಾಮಿಕ್ ಹಬ್ ಆಗಿ ಅಭಿವೃದ್ಧಿಗೊಳಿಸಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಬಿ. ಜ್ಯೋತಿಗಣೇಶ್ ಸೇತುವೆ ಪುನರ್ ನಿರ್ಮಾ ಣ ಕೈಗೊಂಡ ನಂತರ ಸ್ಥಳೀಯರಿಂದ ಪ್ರತಿದಿನ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಡಗಳು ಬರುತ್ತಲೇ ಇದ್ದವು. ಇಂದಿನಿಂದ ಸೇತುವೆ ವಾಹನ ಸಂಚಾರಕ್ಕೆ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ ಎಂದರು.
ರೈತರು, ಯೋಧರು ನಮ್ಮ ಕಣ್ಣುಗಳಿದ್ದಂತೆ: ಮಾಜಿ ಸಚಿವ ರೇಣುಕಾಚಾರ್ಯ
ವಿಧಾನ ಪರಿಷತ್‌ನ ಮಾಜಿ ಸದಸ್ಯ ಹುಲಿ ನಾಯ್ಕರ್, ಮಾಜಿ ಸಚಿವ ರೇವಣ್ಣ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಪಂ ಸಿಇಒ ಜಿ. ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಮಂಜಪ್ಪ, ಜಿ.ಸಿ. ಜಗದೀಶ್, ಹರೀಶ್, ಡಾ ತಿಪ್ಪೇಸ್ವಾಮಿ, ಹಿರಿಯ ಪತ್ರಕರ್ತ ಎಸ್.ನಾಗಣ್ಣ, ಉಪಸ್ಥಿತರಿದ್ದರು.