ರಾಮದೇವರ ಬೆಟ್ಟದಲ್ಲಿ ರಣಹದ್ದು ರಿಲಿಸಿಂಗ್ ಸೆಂಟರ್: ಅರಣ್ಯಾಧಿಕಾರಿ ರಾಮಕೃಷ್ಣಪ್ಪ

By Kannadaprabha News  |  First Published Sep 15, 2024, 4:50 PM IST

ರಣಹದ್ದುಗಳ ಸಂತಾನ ಹೆಚ್ಚಿಸುವ ಸಲುವಾಗಿ ಬನ್ನೇರುಘಟ್ಟದಲ್ಲಿ ನಿರ್ಮಿಸಿರುವ ಬ್ರೀಡಿಂಗ್ ಸೆಂಟರ್ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದ್ದು, ರಾಮದೇವರ ಬೆಟ್ಟದಲ್ಲಿ ರಿಲಿಸಿಂಗ್ ಸೆಂಟರ್ ತೆರೆಯಲಾಗುತ್ತಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ರಾಮಕೃಷ್ಣಪ್ಪ ತಿಳಿಸಿದರು. 
 


ರಾಮನಗರ (ಸೆ.15): ರಣಹದ್ದುಗಳ ಸಂತಾನ ಹೆಚ್ಚಿಸುವ ಸಲುವಾಗಿ ಬನ್ನೇರುಘಟ್ಟದಲ್ಲಿ ನಿರ್ಮಿಸಿರುವ ಬ್ರೀಡಿಂಗ್ ಸೆಂಟರ್ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದ್ದು, ರಾಮದೇವರ ಬೆಟ್ಟದಲ್ಲಿ ರಿಲಿಸಿಂಗ್ ಸೆಂಟರ್ ತೆರೆಯಲಾಗುತ್ತಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ರಾಮಕೃಷ್ಣಪ್ಪ ತಿಳಿಸಿದರು. ನಗರದ ಸಹಾಸ ಕಲಾ ಶಿಕ್ಷಣ ಕೇಂದ್ರದಲ್ಲಿ ಜಿಲ್ಲಾ ಅರಣ್ಯ ಇಲಾಖೆ ಮತ್ತು ವಿವಿಧ ಸಂಘಟನೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಮನಗರದ ರಾಮದೇವರ ಬೆಟ್ಟದಲ್ಲಿನ ರಣಹದ್ದು ವನ್ಯಜೀವಿಧಾಮದಲ್ಲಿಯೇ ಬ್ರೀಡಿಂಗ್ ಸೆಂಟರ್ ತೆರೆಯಲು ಯೋಚಿಸಲಾಗಿತ್ತು. 

ಆದರೆ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಬ್ರೀಡಿಂಗ್ ಸೆಂಟರ್ ಸ್ಥಾಪನೆಯು ಬನ್ನೇರುಘಟ್ಟಕ್ಕೆ ವರ್ಗಾವಣೆಯಾಗಿತ್ತು. ಹಾಗೇ ರಾಮದೇವರ ಬೆಟ್ಟದಲ್ಲಿ ರಿಲಿಸಿಂಗ್ ಸೆಂಟರ್ ತೆರೆಯಲಾಗುತ್ತದೆ. ಬನ್ನೇರುಘಟ್ಟದಲ್ಲಿ ಸಿದ್ಧವಾದ ರಣಹದ್ದು ಮರಿಗಳನ್ನು ರಾಮನಗರದಲ್ಲಿ ಬಿಡಲಾಗತ್ತದೆ ಎಂದು ಹೇಳಿದರು. ರಣಹದ್ದು ಬ್ರೀಡಿಂಗ್ ಸೆಂಟರ್ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಉದ್ಘಾಟನೆಯಾಗಲಿದೆ. ಈ ಸಂಬಂಧ ಅರಣ್ಯ ಇಲಾಖೆಯು ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಅರಣ್ಯಗಳು ಕಂಡುಬರುತ್ತದೆ. ಇದು ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಆರಂಭವಾಗಿ ದಕ್ಷಿಣ ಕನ್ನಡ ಜಿಲ್ಲೆಯ ತನಕ ವ್ಯಾಪ್ತಿದೆ. 

Latest Videos

undefined

ಮನುಷ್ಯನಲ್ಲಿರುವ ಶ್ರೇಷ್ಠವಾದ ಜ್ಞಾನವೆಂದರೆ ಅದು ವಿಜ್ಞಾನ: ಸಚಿವ ಈಶ್ವರ್ ಖಂಡ್ರೆ

ಈ ಬೃಹತ್ ಪ್ರದೇಶದಲ್ಲಿ ರಾಮನಗರ ಜಿಲ್ಲೆ ಸೇರಿದಂತೆ ಒಟ್ಟು 26 ಜಿಲ್ಲೆಗಳು ಈ ಅರಣ್ಯ ಪ್ರದೇಶದ ವಿಸ್ತೀರ್ಣ ಹೊಂದಿದೆ. ಇದು ಅರ್ಧ ಚಂದ್ರಾಕೃತಿಯಲ್ಲಿ ಕಾಣಸಿಗುತ್ತದೆ ಎಂದರು. 1917ರಲ್ಲಿ ರಾಮದೇವರ ಬೆಟ್ಟವನ್ನು ಅಂದಿನ ಮೈಸೂರು ಸಂಸ್ಥಾನ ಮೀಸಲು ಅರಣ್ಯ ಎಂಬುದಾಗಿ ಘೋಷಣೆ ಮಾಡಿತ್ತು. ಹಿಂದಿಯ ಖ್ಯಾತ ಸಿನಿಮಾ ಶೋಲೆ ಇಲ್ಲಿ ಚಿತ್ರೀಕರಣ ಮಾಡಿದ್ದ ಕಾರಣ, ಈ ಬೆಟ್ಟಕ್ಕೆ ರಾಮ್ ಘಡ್ ಎಂಬ ಹೆಸರುಬಂದಿತು. ಇನ್ನು ರಾಜ್ಯ ಸರ್ಕಾರ 2012ರಲ್ಲಿ ರಣಹದ್ದು ವನ್ಯಜೀವಿಧಾಮವನ್ನಾಗಿ ಘೋಷಣೆ ಮಾಡಿತು ಎಂದು ಹೇಳಿದರು. ಬೆಟ್ಟದಲ್ಲಿ ಈ ತನಕ ಒಟ್ಟು 09 ಉದ್ದಕೊಕ್ಕಿನ ರಣಹದ್ದು ಕಂಡುಬಂದಿವೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಉದ್ದಕೊಕ್ಕಿನ ರಣಹದ್ದು ಮರಿ ಮಾಡುತ್ತಿವೆ. 9 ಹಿಮಾಲಯನ್ ಗ್ರೀಫನ್ ರಣಹದ್ದುಗಳು ಕಾಣಿಸಿಕೊಂಡಿವೆ ಎಂದು ರಾಮಕೃಷ್ಣಪ್ಪ ತಿಳಿಸಿದರು.

ಜೈವಿಕತೆ ಬದಲಾಗುವುದಿಲ್ಲ: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಿದರೆ, ಅಭಿವೃದ್ಧಿಯಾಗಲಿದ್ದು, ಇದರಿಂದ ರಣಹದ್ದುಗಳಿಗೆ ತೊಂದರೆಯಾಗಲಿದೆಯೇ ಎಂದು ಶಿಬಿರಾರ್ಥಿಯೊಬ್ಬರು ಪ್ರಶ್ನಿಸಿದರು, ಇದಕ್ಕೆ ಉತ್ತರಿಸಿದ ರಾಮಕೃಷ್ಣಪ್ಪ, ರಾಮದೇವರ ಬೆಟ್ಟ ಮೀಸಲು ಅರಣ್ಯ ಒಟ್ಟು 856 ಎಕರೆಪ್ರದೇಶದಲ್ಲಿ ವಿಸ್ತರಿಸಿದೆ. ಗುಡಿ ಕೈಗಾರಿಕೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಮನೆ ಕಟ್ಟಲು ಬಿಟ್ಟು ಬೇರೆ ಯಾವುದೇ ಕಾರ್ಯ ಚುಟುವಟಿಕೆಗಳನ್ನು ಮಾಡಲು ನಿಷೇಧಿಸಲಾಗಿದೆ. ಜಿಲ್ಲೆಯ ಹೆಸರು ಬದಲಾದರೂ, ಜೈವಿಕತೆ ಬದಲಾಗುವುದಿಲ್ಲ ಎಂದು ಹೇಳಿದರು.

ರೈತರು, ಯೋಧರು ನಮ್ಮ ಕಣ್ಣುಗಳಿದ್ದಂತೆ: ಮಾಜಿ ಸಚಿವ ರೇಣುಕಾಚಾರ್ಯ

ರಾಮದೇವರ ಬೆಟ್ಟದ ವನ್ಯಜೀವಿ ಜೀವಶಾಸ್ತ್ರಜ್ಞ ದರ್ಶನ್ ಉಪನ್ಯಾಸ ನೀಡಿ, ಪ್ರಪಂಚದಲ್ಲಿ ಶೇ.99ರಷ್ಟು ರಣಹದ್ದುಗಳ ನಾಶವಾಗಿದ್ದು, ಶೇ.1ರಷ್ಟು ಮಾತ್ರ ಕಾಣಸಿಗುತ್ತಿದೆ. ಜಿಂಕೆ ಗಾತ್ರದಿಂದ ಹಿಡಿದು ಆನೆಗಾತ್ರದ ತನಕ ಮೃತ ಪ್ರಾಣಿಗಳ ಕೊಳೆತ ದೇಹವನ್ನ ತಿಂದು ಜೀವಿಸಿಕೊಳ್ಳುತ್ತದೆ. ಕಾವೇರಿ ವನ್ಯಜೀವಿಧಾಮವೂ ರಾಮದೇವರ ಬೆಟ್ಟಕ್ಕೆ ಸಮೀಪದಲ್ಲಿಯೇ ಇರುವುದರಿಂದ ಇಲ್ಲಿನ ರಣಹದ್ದಗಳು ಆಹಾರಕ್ಕಾಗಿ ಅಲ್ಲಿಗೆ ತೆರಳುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪರಿಸರ ತಜ್ಞ ಪ್ರೊ.ಶಿವನಂಜಯ್ಯ, ಎಸಿಎಫ್ ಪುಟ್ಟಮ್ಮ, ಆರ್ ಎಸ್ ಬಿಎನ್ ಮ್ಯಾನೇಜರ್ ಕ್ರಿಸ್ ಬೋಡೆನ್ ದೇವೋಜಿ ದಾಸ್ ಮತ್ತಿತರರು ಉಪಸ್ಥಿತರಿದ್ದರು.

click me!