ಮದ್ಯ ಮಾರಾಟ ತಡೆಗೆ ಏಕಾಂಗಿ ಧರಣಿ

By Kannadaprabha NewsFirst Published Jan 29, 2020, 1:50 PM IST
Highlights

ಅಕ್ರಮ ಮದ್ಯ ಮಾರಾಟವನ್ನು ತಡೆಯುವಂತೆ ಆಗ್ರಹಿಸಿ ವ್ಯಕ್ತಿಯೊಬ್ಬರು ಒಂಟಿಯಾಗಿ ಪ್ರತಿಭಟನೆ ಮಾಡುತ್ತಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಎದುರು ಗ್ರಾಮಸ್ಥ ಕೆಂಪರಾಜು ಏಕಾಂಗಿ ಧರಣಿ ನಡೆಸುತ್ತಿದ್ದಾರೆ.

ಮಂಡ್ಯ(ಜ.29): ಭಾರತೀನಗರದ ಕೆ.ಶೆಟ್ಟಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಎದುರು ಗ್ರಾಮಸ್ಥ ಕೆಂಪರಾಜು ಏಕಾಂಗಿ ಧರಣಿ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ.

ಶಾಲೆ, ದೇವಾಲಯ, ಸಮುದಾಯ ಭವನ, ರಸ್ತೆಬದಿಗಳಲ್ಲಿ ರಾತ್ರಿ ವೇಳೆ ಮದ್ಯ ಸೇವಿಸಿ ಬಿಸಾಡಲಾಗುತ್ತಿದೆ. ಇದರಿಂದ ಗ್ರಾಮದ ಸ್ವಾಸ್ಥ್ಯ ಹದಗೆಡುತ್ತಿದೆ. ಹಗಲು ವೇಳೆಯಲ್ಲಿಯೂ ಮದ್ಯ ಮಾರಾಟ ಹೆಚ್ಚಾಗಿದೆ. ಜನತೆ ಮದ್ಯ ಸೇವಿಸಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಗ್ರಾಮದ ನೆಮ್ಮದಿಗೆ ಅಕ್ರಮ ಮದ್ಯ ಭಂಗ ತಂದಿದೆ. ಗ್ರಾಪಂ, ತಾಪಂ, ಜಿಲ್ಲಾಧಿಕಾರಿ ಕಚೇರಿ, ಅಬಕಾರಿ ಇಲಾಖೆಗೆ ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಅಕ್ರಮ ಮದ್ಯ ತಡೆಗೆ ಮುಂದಾಗಿಲ್ಲ ಎಂದು ಕಿಡಿಕಾರಿದ್ದಾರೆ.

ಟಿಕೆಟ್‌ಗಾಗಿ ವಿಷ ಸೇವನೆ ಬೆದರಿಕೆ, ನಗರಸಭೆ ನಾಮಪತ್ರ ಸಲ್ಲಿಕೆಯಲ್ಲಿ ಹೈಡ್ರಾಮ

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಕೆಂಪರಾಜು ಅವರನ್ನು ಭೇಟಿ ಮಾಡಿ ಮದ್ಯ ಮಾರಾಟ ತಡೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಆದರೆ, ಕೆಂಪರಾಜು ಅವರು ಜಿಲ್ಲಾಧಿಕಾರಿ, ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ. ಕೆಂಪೆರಾಜು ಪ್ರತಿಭಟನೆ ಹಿನ್ನೆಲೆಯಲ್ಲಿ ಕೆ.ಎಂ.ದೊಡ್ಡಿ ಪೊಲೀಸರು ಗ್ರಾಮದಲ್ಲಿ ಅಂಗಡಿಗಳಲ್ಲಿ ಮದ್ಯಮಾರಾಟ ತಡೆಯಲು ಮುಂದಾಗಿದ್ದಾರೆ.

click me!