ಭಕ್ತಸಾಗರದ ಮಧ್ಯ ಸಿದ್ಧಾರೂಢರ ರಥೋತ್ಸವ: ಮೂರುವರೆ ಲಕ್ಷಕ್ಕೂ ಅಧಿಕ ಭಕ್ತರು ಭಾಗಿ

By Kannadaprabha NewsFirst Published Feb 23, 2020, 7:35 AM IST
Highlights

ಜನಪದ ಕಲಾಮೇಳಗಳ ಸಂಗಮ| ಉತ್ತತ್ತಿ, ಬಾಳೆಹಣ್ಣಿನಿಂದ ತುಂಬಿಹೋದ ರಥಬೀದಿ| ಧಾರವಾಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಸೇರಿ ರಾಜ್ಯದ ವಿವಿಧೆಡೆಯ ಭಕ್ತರು ಮಾತ್ರವಲ್ಲದೆ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಿಂದಲೂ ಭಕ್ತಸಾಗರ ಜಾತ್ರೆಗೆ ಹರಿದುಬಂದಿತ್ತು|

ಹುಬ್ಬಳ್ಳಿ(ಫೆ.23): ರಥವೇರಿ ಬಂದ ಅಜ್ಜನ ಕಂಡು ಕಿಕ್ಕಿರಿದ ಭಕ್ತರ ಹರ್ಷೋದ್ಗಾರ, ಭಾವಾವೇಶದಲ್ಲಿ ಸಿದ್ಧಾರೂಢ ಮಹಾರಾಜ್‌ ಕೀ ಜೈ ಘೋಷಣೆ, ಜನಪದ ಕಲಾಮೇಳಗಳ ಸಂಗಮ, ವಿವಿಧ ದೇವಾಲಯದ ಪಲಕ್ಕಿಗಳು..

ಶ್ರೀ ಸಿದ್ಧಾರೂಢರ 118ನೇ ಮಹಾರಥೋತ್ಸವವು ಶನಿವಾರ ಸಂಜೆ ಶ್ರದ್ಧಾ ಭಕ್ತಿ, ಸಡಗರ, ಸಂಭ್ರಮದಿಂದ ನಡೆಯಿತು. ಬರೊಬ್ಬರಿ 3.50 ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಈ ಮಹಾರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾಭಾವ ಅನುಭವಿಸಿದರು. ಧಾರವಾಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಸೇರಿ ರಾಜ್ಯದ ವಿವಿಧೆಡೆಯ ಭಕ್ತರು ಮಾತ್ರವಲ್ಲದೆ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಿಂದಲೂ ಭಕ್ತಸಾಗರ ಜಾತ್ರೆಗೆ ಹರಿದುಬಂದಿತ್ತು.

ಮಹಾಶಿವರಾತ್ರಿ ಹಾಗೂ ಜಾತ್ರೆಯ ಹಿನ್ನೆಲೆಯಲ್ಲಿ ಶುಕ್ರವಾರ ಅಹೋರಾತ್ರಿ ಮಹಾಜಾಗರಣೆ ಕಾರ್ಯಕ್ರಮ ನಡೆಯಿತು. ಭಜನೆ, ಸಂಗೀತೋತ್ಸವ, ಕೀರ್ತನೆಗಳು ನಡೆದವು. ಶನಿವಾರ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ ಆಯೋಜಿಸಲಾಗಿತ್ತು. ಸಂಜೆ 5.30ಕ್ಕೆ ಪಲ್ಲಕ್ಕಿಯು ಮಠಕ್ಕೆ ಆಗಮಿಸಿದ ಬಳಿಕ ಮಹಾರಥೋತ್ಸವಕ್ಕೆ ಚಾಲನೆ ದೊರೆಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶ್ರೀ ಮಠದ ಆಡಳಿತಾಧಿಕಾರಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಅವರು ಸಿದ್ಧಾರೂಢ ಶ್ರೀಗಳ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಸಿದ್ಧಾರೂಢ ಸ್ವಾಮೀಜಿ ಟ್ರಸ್ಟ್‌ ಆಡಳಿತಾಧಿಕಾರಿ ಡಿ.ಡಿ. ಮಾಳಗಿ ಅವರು ಉಪಸ್ಥಿತರಿದ್ದರು. ಕಾಲಿಡಲೂ ಜಾಗವಿಲ್ಲದಂತೆ ಸೇರಿದ್ದ ಭಕ್ತಮಹಾಜನತೆ ರಥಬೀದಿಯಲ್ಲಿ ಸಿದ್ಧಾರೂಢ ಅಜ್ಜನ ತೇರನ್ನು ಎಳೆವ ಮೂಲಕ ಭಕ್ತಿ ಮೆರೆದರು. ತೇರು ಸಾಗಿದ ಬೀದಿಯಲ್ಲಿ ಗೆಜ್ಜೆ ಮೇಳ, ಹೆಜ್ಜೆ ಕುಣಿತ, ಡೊಳ್ಳು ಕುಣಿತ, ಜಗ್ಗಲಗಿ ಮೇಳಗಳು, ಭಜನಾ ಮೇಳಗಳು ರಥೋತ್ಸವಕ್ಕೆ ಮೆರಗು ತುಂಬಿದವು. ಸುಮಾರು 50ಕ್ಕೂ ಹೆಚ್ಚು ವಿವಿಧ ಜಾನಪದ ಮೇಳಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು. ಚನ್ನಪೇಟೆ, ಕೇಶ್ವಾಪುರ, ಗಣೇಶಪೇಟೆಯ ಜಡಿಮಠ ಸೇರಿ ವಿವಿಧೆಡೆಗಳಿಂದ ಪಲ್ಲಕ್ಕಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು.

ಸಿದ್ಧಾರೂಢರ ಅಂಗಾರ ಜಗತ್ತಿಗೆಲ್ಲ ಬಂಗಾರ, ಹುಬ್ಬಳ್ಳಿಯೆಂಬುದು ಕಲ್ಯಾಣ ಸಿದ್ಧಾರೂಢ ಬಸವಣ್ಣ, ಸಿದ್ಧಾರೂಢರ ಜೋಳಿಗೆ ಊರಿಗೆಲ್ಲ ಹೋಳಿಗೆ ಎಂಬ ಘೋಷವಾಕ್ಯಗಳು ಮೊಳಗಿದವು. ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಶ್ರೀ ಮಠದ ಕೈಲಾಸ ಮಂಟಪದ ಆವರಣ, ರಥಬೀದಿ ಅಕ್ಕಪಕ್ಕ ಎಲ್ಲೆಡೆಯಿಂದ ಸಿದ್ಧಾರೂಢರಿಗೆ ಜೈಕಾರ, ಶಿವಪಂಚಾಕ್ಷರಿ ಮಂತ್ರ ಮುಗಿಲು ಮುಟ್ಟಿತು. ರಥಬೀದಿಯಲ್ಲಿ ನಿಲ್ಲಲು ಜಾಗವಿಲ್ಲದ ಕಾರಣ ಅಕ್ಕಪಕ್ಕದ ಕಟ್ಟಡಗಳನ್ನು, ಕೈಲಾಸ ಮಂಟಪದ ಚಾವಣಿ, ಸೇರಿದಂತೆ ವಿವಿಧ ಕಟ್ಟಡಗಳು, ಗಿಡಮರಗಳನ್ನು ಏರಿ ಕುಳಿತು ಅಜ್ಜನ ರಥೋತ್ಸವವನ್ನು ಕಣ್ತುಂಬಿಕೊಂಡರು.

ರಥ ಹತ್ತಿರ ಬರುತ್ತಿದ್ದಂತೆ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣು ಸೇರಿದಂತೆ ಇತರೆ ಹರಕೆಗಳನ್ನು ಸಮರ್ಪಿಸಿ ಭಕ್ತಿ ಮೆರೆದರು. ಮಠದ ಎದುರಿನಿಂದ ಆರಂಭವಾದ ರಥೋತ್ಸವವು ಮುಖ್ಯದ್ವಾರದವರೆಗೆ ತೆರಳಿ ಮರಳಿತು. ಸಿದ್ಧಾರೂಢ ಶಾಖಾ ಮಠಗಳ ಪೀಠಾಧಿಪತಿಗಳು, ಉಕ ಭಾಗದ ವಿವಿಧ ಮಠಾಧೀಶರು, ಟ್ರಸ್ಟ್‌ ಕಮೀಟಿಯ ಧರ್ಮದರ್ಶಿಗಳು, ಪ್ರಮುಖ ಭಕ್ತರು, ಗಣ್ಯರು ಈ ರಥೋತ್ಸವದಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಪೊಲೀಸ್‌ ಕಮೀಶನರೆಟ್‌ ಅಧಿಕಾರಿಗಳು ಸ್ಥಳದಲ್ಲಿದ್ದು ಸೇವೆ ಸಲ್ಲಿಸಿದರು.

ಬಿಗಿ ಭದ್ರತೆ:

ಜಾತ್ರೆ ಹಿನ್ನೆಲೆಯಲ್ಲಿ ಮಹಾನಗರ ಪೊಲೀಸ್‌ ಕಮಿಷನರೆಟ್‌ ಅಗತ್ಯ ಭದ್ರತೆ ಕೈಗೊಂಡಿದೆ. ಹುಬ್ಬಳ್ಳಿಯ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್‌, ಎಎಸ್‌ಐಗಳು ಸೇರಿದಂತೆ 800 ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಇದರ ಜೊತೆಗೆ ಎರಡು ಸಿಎಆರ್‌ ವಾಹನಗಳು ಇರಲಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.


ಅದ್ಧೂರಿ ಅಂಬಾರಿ ಉತ್ಸವ

ಜಾತ್ರೆ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷದಿಂದ ಶ್ರೀ ಸಿದ್ಧಾರೂಢರ ಹಾಗೂ ಸಮಕಾಲೀನ ಮಹಾತ್ಮರ ಸೇವಾ ಸಮಿತಿಯಿಂದ ಅಂಬಾರಿ ಉತ್ಸವ ಅದ್ಧೂರಿಯಾಗಿ ನಡೆಯಿತು.

ಬೆಳಗ್ಗೆ 10.30ಕ್ಕೆ ಬೆಂಗೇರಿ ಗ್ರಾಮದ ಧರಿದೂಳೇಶ್ವರ ಗುಡಿಯ ಬಳಿ ಸದ್ಗುರು ಸಿದ್ಧಾರೂಢಸ್ವಾಮಿಯವರ ಮಠ ಟ್ರಸ್ಟ್‌ನ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ ಅವರು ಚಾಲನೆ ನೀಡಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಉಪಸ್ಥಿತರಿದ್ದರು. ಕುಂದಗೋಳದ ಚನ್ನವೀರ ವಿರಕ್ತಮಠ ಶಿವಯೋಗೀಶ್ವರ ಮಹಾಸ್ವಾಮೀಜಿ, ಇಂಚಲ ಶಿವಾನಂದ ಭಾರತಿ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.

ಒಂದು ಅಂಬಾರಿಯಲ್ಲಿ ಸಿದ್ಧಾರೂಢರು ಹಾಗೂ ಇನ್ನೊಂದರಲ್ಲಿ ಗುರುನಾಥಾರೂಢ ಸ್ವಾಮೀಜಿಗಳ ವಿಗ್ರಹವನ್ನಿಟ್ಟು ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ಗೋಪನಕೊಪ್ಪ ಮಾರ್ಗವಾಗಿ ಕೋರ್ಟ್‌ ವೃತ್ತಕ್ಕೆ ಬಂದು ಅಲ್ಲಿಂದ ಚನ್ನಮ್ಮ ವೃತ್ತದ ಮೂಲಕ ಕಾರವಾರ ರಸ್ತೆ ಮೂಲಕ ಸಿದ್ಧಾರೂಢ ಮಠವನ್ನು ತಲುಪಿತು. ಮೆರವಣಿಗೆಯಲ್ಲಿ ಗೋಪನಕೊಪ್ಪ, ಬೆಂಗೇರಿ, ನಾಗಶೆಟ್ಟಿಕೊಪ್ಪ, ಕೇಶ್ವಾಪುರ, ಗಿರಣಿಚಾಳ, ಅಮರಗೋಳ ಹೆಬ್ಬಳ್ಳಿ, ಶಿವಳ್ಳಿ, ವನಹಳ್ಳಿ, ಸುಳ್ಳ, ಬ್ಯಾಹಟ್ಟಿ, ಹೆಬಸೂರ, ಇಂಗಳ್ಳಿ, ಶಿರಗುಪ್ಪಿ, ಬಂಡಿವಾಡ ಸೇರಿದಂತೆ ಹತ್ತಾರು ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಸಮಿತಿ ಸಂಚಾಲಕ ಮನೋಜಕುಮಾರ ಗದಗಿನ, ಪ್ರಫುಲ್ಲ ಚಂದ್ರ ರಾಯನಗೌಡ್ರ, ಹೂವಪ್ಪ ದಾಯಗೋಡಿ, ಪ್ರಭು ಹಿರೇಕೇರೂರ, ಮಾರುತಿ ಬಾರಕೇರ, ಸುರೇಶ ಬಣವಿ ಸೇರಿ ಹಲವರಿದ್ದರು.

ಜಾತ್ರೆಗೆ ಬಂದ ಭಕ್ತರಿಗೆ ಭರಪೂರ ಪ್ರಸಾದ

ಸಿದ್ಧಾರೂಢ ಮಠದ ಆವರಣದಿಂದ ಹಿಡಿದು ಮಹಾದ್ವಾರದವರೆಗೆ ಇಡೀ ಪ್ರದೇಶ ಶನಿವಾರ ಅನ್ನಛತ್ರವಾಗಿ ಬದಲಾಗಿತ್ತು. ಕ್ವಿಂಟಲ್‌ಗಟ್ಟಲೆ ಊಟ, ಪಲಾವು, ಹಣ್ಣು ಹಂಪಲುಗಳು ಫಲಾಹಾರ, ಸಾವಿರಾರು ಲೀ. ಮಜ್ಜಿಗೆ, ತಂಪು ಪಾನೀಯವನ್ನು ಭಕ್ತರಿಗೆ ಸೇವಾನಿರತ ಭಕ್ತರು ವಿತರಣೆ ಮಾಡಿದರು.

ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಬೆಳಗ್ಗೆಯಿಂದಲೇ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಮಠದ ವತಿಯಿಂದ ಬೆಳಗ್ಗೆ 15 ಕ್ವಿಂಟಲ್‌ ಪಲಾವು, 4 ಕ್ವಿಂಟಲ್‌ ಶಿರಾವನ್ನು ಪೂರೈಸಲಾಯಿತು. ಮಧ್ಯಾಹ್ನ 40 ಕ್ವಿಂಟಲ್‌ ಅನ್ನ, 9 ಸಾವಿರ ಲೀ. ಗೂ ಹೆಚ್ಚು ಸಾಂಬಾರ್‌, ಪಾಯಸವನ್ನು ಪೂರೈಸಲಾಯಿತು.

ಸಿದ್ಧಾರೂಢ ಸೇವಾ ಸಂಘ ಇಂಡಿ ಪಂಪ್‌ನಿಂದ 5 ಸಾವಿರಕ್ಕೂ ಹೆಚ್ಚಿನ ಜನರಿಗೆ ಅನ್ನಸಂತರ್ಪಣೆ ವಿತರಣೆ ಮಾಡಲಾಯಿತು. ಅಲ್ಲದೆ, ಸಂಜೆವರೆಗೂ ಪಾನಕ, ಮಜ್ಜಿಗೆ ವಿತರಣೆ ಮಾಡಲಾಯಿತು. ಅಜ್ಜ ಆರೂಢ ಸ್ನೇಹಿತರ ಬಳಗದಿಂದ 50 ಕೆಜಿ ಮೊಸರನ್ನವನ್ನು ಭಕ್ತರಿಗೆ ವಿತರಣೆ ಮಾಡಲಾಯಿತು. ವಿಮಾನ ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರಿಡುವಂತೆ ಒತ್ತಾಯಿಸುತ್ತಿರುವ ಸಂಘಟನೆ, ಕಾರವಾರ ರಸ್ತೆಯಲ್ಲಿನ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ, ಶಿವಶಂಕರ ಕಾಲನಿ, ಪಡದಯ್ಯನ ಹಕ್ಕಲ, ಕಲಘಟಗಿ ಸಿದ್ಧಾರೂಢರ ಭಕ್ತ ಮಂಡಳಿ, ಮಿಶ್ರಿಕೋಟಿ ಭಕ್ತಮಂಡಳಿ ಸೇರಿದಂತೆ 50ಕ್ಕೂ ಹೆಚ್ಚಿನ ಸಂಘಟನೆಗಳು ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗಾಗಿ ಬೆಳಗ್ಗೆಯಿಂದಲೇ ಪಲಾವ್‌, ಉಪ್ಪಿಟ್ಟು, ಶಿರಾ, ಪಾಯಸ ವಿತರಣೆ ಮಾಡಿದರು.

ಇಲ್ಲಿನ ಕಾರವಾರ ರಸ್ತೆಯ ಜಲಾವ್‌ ಕಟ್ಟಿಗೆ ಅಡ್ಡೆಯಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಪ್ಪ ಎಚ್‌. ತೆಗ್ಗಿ, ಹಿರಿಯರಾದ ಸುಭಾಷ್‌ ತೆಗ್ಗಿ ನೇತೃತ್ವದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು. ಸತತ 52 ವರ್ಷಗಳಿಂದ ಜಾತ್ರೆಯಲ್ಲಿ ಅನ್ನಸಂತರ್ಪಣೆ ಆಚರಣೆ ಮಾಡಿಕೊಂಡು ಬಂದಿದೆ. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಗೋಪಾಲ್‌ ಎಣ್ಣೆಚವಡಿ, ಪರಶುರಾಮ ತೆಗ್ಗಿ, ಮೋಹನ್‌ ತೆಗ್ಗಿ, ಸುರೇಶ್‌ ಹೊಸಮನಿ, ಅಪ್ಪು ಕೆ.ಟಿ. ಸಂದೀಪ್‌ ತೆಗ್ಗಿ, ಮಂಜುನಾಥ್‌ ತೆಗ್ಗಿ, ಸಿದ್ದಪ್ಪ ಅಮರಾವತಿ ಮತ್ತಿತರರು ಇದ್ದರು.
 

click me!