ಮಗುವಿನಿಂದ 80 ವರ್ಷದ ವೃದ್ಧರವರೆಗೆ ಸಮಸ್ಯೆ | ಕಲುಷಿತ ನೀರು ಸೇವಿಸಿ ಹರಡಿದ ಸಮಸ್ಯೆ| ನೀರಿನ ಮೂಲಗಳ ವಿವಿಧ ಮಾದರಿ ಸಂಗ್ರಹ| ದಿನಾಲೂ ಹೊಸ ಪ್ರಕರಣಗಳು ಬರುತ್ತಿವೆ. ಇನ್ನೂ ರೋಗ ನಿಯಂತ್ರಣಕ್ಕೆ ಬಂದಿಲ್ಲ: ಖಾಸಗಿ ವೈದ್ಯ ಡಾ. ಗುರುನಾಥ ಬಳಬಟ್ಟಿ|
ಚಿತ್ತಾಪುರ(ಫೆ.22): ತಾಲೂಕಿನ ಅಲ್ಲೂರ. ಬಿ ಗ್ರಾಮದಲ್ಲಿ ನಾಲ್ಕು ದಿನಗಳಿಂದ 60ಕ್ಕೂ ಅಧಿಕ ಜನರಿಗೆ ವಾಂತಿಭೇದಿ ಹರಡಿದ್ದರಿಂದ ಜನರಲ್ಲಿ ಭೀತಿ ಮೂಡಿಸಿದೆ. ಏತನ್ಮಧ್ಯೆ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಗರ್ಭಿಣಿಯೊಬ್ಬರು ಮೃತಪಟ್ಟಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸುಜಾತಾ ಭೀಮರಾಯ ಎಂಬ ಎಂಟು ತಿಂಗಳ ಗರ್ಭಿಣಿ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಫೆ.15ರಂದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಎರಡು ವರ್ಷದ ಮಗುವಿನಿಂದ 80 ವರ್ಷದ ವೃದ್ಧರವರೆಗೆ, ಮಹಿಳೆಯರು, ಮಕ್ಕಳಿಗೆ ವಾಂತಿ ಭೇದಿ ಹರಡಿದೆ. ಗ್ರಾಮದಲ್ಲಿರುವ ಖಾಸಗಿ ವೈದ್ಯರೇ ವಾಂತಿ ಭೇದಿ ಹರಡಿದ ಗ್ರಾಮಸ್ಥರಿಗೆ ತಮ್ಮ ಮನೆಯಲ್ಲಿನ ಕ್ಲಿನಿಕ್‌ನಲ್ಲಿ ಹಗಲು ರಾತ್ರಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರಿಲ್ಲದಿದ್ದರೆ ಜನರು ತುಂಬಾ ಕಷ್ಟ ಪಡಬೇಕಾಗುತ್ತಿತ್ತು ಎಂದು ಗ್ರಾಮದ ಮಹಿಳೆಯರು ಅಳಲು ತೋಡಿಕೊಂಡರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಲ್ಲೂರ.ಕೆ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾಗಿ ಚಿಕಿತ್ಸಾ ಸೌಲಭ್ಯ ಇಲ್ಲ. ನನ್ನ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳಿಗೆ ವಾಂತಿ ಭೇದಿ ಆಗಿದೆ. ಡಾ. ಗುರುನಾಥ ಬಳಬಟ್ಟಿ ಅವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇನೆ ಎಂದು ಗ್ರಾಮದ ಮಹಾದೇವ ಹೊಸಮನಿ ಹೇಳಿದರು.
ದಿನಾಲೂ ಹೊಸ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. 60ಕ್ಕೂ ಅಧಿಕ ಜನರಿಗೆ ರೋಗ ಹರಡಿದೆ. ಚಿಕಿತ್ಸೆಯಿಂದ ಗುಣಮುಖವಾದವರಿಗೆ ಮತ್ತೆ ವಾಂತಿ ಭೇದಿ ಹರಡುತ್ತಿದ್ದು ಜನರು ಭಯ ಪಡುತ್ತಿದ್ದಾರೆ ಎಂದು ಕರವೇ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್ ತಿಳಿಸಿದರು.
ಗ್ರಾಮಸ್ಥರಿಗೆ ಖಾಸಗಿ ವೈದ್ಯರೇ ಆಸರೆಯಾಗಿದ್ದಾರೆ. ಅಲ್ಲೂರ.ಕೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ದಿನಾಲೂ ಬರುವುದಿಲ್ಲ. ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ. ಹೀಗಾಗಿ ಜನರು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಗ್ರಾಮದಲ್ಲಿ ಕುಡಿಯುವ ನೀರಿನ ಮೂಲಗಳು ಕಲುಷಿತಗೊಂಡಿವೆ. ಆ ನೀರು ಕುಡಿದ ಜನರಿಗೆ ವಾಂತಿ ಭೇದಿ ಹರಡಿದೆ. ನೀರು ಕಲುಷಿತಗೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ ಗ್ರಾಮದಲ್ಲಿ ನೈರ್ಮಲ್ಯ ಹದಗೆಟ್ಟಿದೆ ಎಂದು ಜಿಲ್ಲಾ ಕಾಲರಾ ನಿಯಂತ್ರಣ ವೈದ್ಯಾಧಿಕಾರಿ ಡಾ. ಗಜಲಖೇಡ ಹೇಳಿದ್ದಾರೆ.
ಗ್ರಾಮದ ಕುಡಿಯುವ ನೀರಿನ ಮೂಲಗಳ ವಿವಿಧ ಮಾದರಿ ಸಂಗ್ರಹಿಸಲಾಗಿದೆ. ಪರೀಕ್ಷೆ ನಡೆಸಿದ ನಂತರ ನೀರಿನ ಗುಣಮಟ್ಟ ತಿಳಿಯಲಿದೆ ಎಂದು ಡಿ.ಎಚ್‌ಒ. ಡಾ. ಸುರೇಶ ಮೇಕಿನ್ ತಿಳಿಸಿದ್ದಾರೆ.
20 ಕ್ಕೂ ಹೆಚ್ಚು ಜನರು, 10 ಚಿಕ್ಕ ಮಕ್ಕಳಿಗೆ ಚಿಕಿತ್ಸೆ ನೀಡಿದ್ದೇನೆ. ದಿನಾಲೂ ಹೊಸ ಪ್ರಕರಣಗಳು ಬರುತ್ತಿವೆ. ಇನ್ನೂ ರೋಗ ನಿಯಂತ್ರಣಕ್ಕೆ ಬಂದಿಲ್ಲ ಎಂದು ಅಲ್ಲೂರ.ಬಿ ಖಾಸಗಿ ವೈದ್ಯ ಡಾ. ಗುರುನಾಥ ಬಳಬಟ್ಟಿ ತಿಳಿಸಿದ್ದಾರೆ.