ಸಿದ್ದೇಶ್ವರಶ್ರೀ ಆರೋಗ್ಯ ಸ್ಥಿರ: ಆಶ್ರಮದತ್ತ ಭಾರಿ ಜನಸಾಗರ

By Kannadaprabha News  |  First Published Jan 2, 2023, 11:42 AM IST

ಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿರುವ ಉತ್ತರ ಕರ್ನಾಟಕ ಭಾಗದಲ್ಲಿ ನಡೆದಾಡುವ ದೇವರೆಂದೇ ಖ್ಯಾತರಾಗಿರುವ, ಖ್ಯಾತ ಪ್ರವಚನಕಾರ ನಗರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ಮಠದ ಮೂಲಗಳು ಸ್ಪಷ್ಟಪಡಿಸಿವೆ.


ವಿಜಯಪುರ (ಜ.2) : ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿರುವ ಉತ್ತರ ಕರ್ನಾಟಕ ಭಾಗದಲ್ಲಿ ನಡೆದಾಡುವ ದೇವರೆಂದೇ ಖ್ಯಾತರಾಗಿರುವ, ಖ್ಯಾತ ಪ್ರವಚನಕಾರ ನಗರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ಮಠದ ಮೂಲಗಳು ಸ್ಪಷ್ಟಪಡಿಸಿವೆ. ಈ ಮಧ್ಯೆ, ಶ್ರೀಗಳ ಆರೋಗ್ಯದ ಕುರಿತು ಸಾಕಷ್ಟುಊಹಾಪೋಹಗಳು ಹರಿದಾಡುತ್ತಿದ್ದು, ಅವುಗಳಿಗೆ ಕಿವಿಗೊಡಬೇಡಿ ಎಂದು ಜಿಲ್ಲಾಡಳಿತ ಭಕ್ತರಲ್ಲಿ ಮನವಿ ಮಾಡಿದೆ.

ಸದ್ಯ ಶ್ರೀಗಳು(Sidddeshwar shree )ಆಹಾರ ಸೇವನೆ ಮಾಡುತ್ತಿಲ್ಲವಾದರೂ ಅವರ ಬಿಪಿ, ಹೃದಯಬಡಿತ ಎಲ್ಲವೂ ಸಹಜವಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಅವರನ್ನು ಗಮನಿಸುತ್ತಿರುವ ವೈದ್ಯರು(Doctor) ಸ್ಪಷ್ಟಪಡಿಸಿದ್ದಾರೆ. ಶನಿವಾರ ತಡರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj bommai), ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ(pralhad joshi), ಸಚಿವ ಗೋವಿಂದ ಕಾರಜೋಳ)(Govind karjol) ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಕೇಂದ್ರ ಸಚಿವ ಜೋಶಿ ಅವರು ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ್ದರು. ಆಗ ಪ್ರಧಾನಿ ಮೋದಿ ಅವರು ಕೂಡ ಶ್ರೀಗಳ ಆರೋಗ್ಯ ವಿಚಾರಿಸಿ, ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ.

Latest Videos

undefined

ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ, ಜೋಶಿ: ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ಭಕ್ತರ ಪ್ರಾರ್ಥನೆ:

ಕಳೆದ ಕೆಲ ದಿನಗಳಿಂದ ಶ್ರೀಗಳ ಆರೋಗ್ಯದ ಕುರಿತು ಎದ್ದಿದ್ದ ಊಹಾಪೋಹಗಳು ಮತ್ತು ಆಶ್ರಮಕ್ಕೆ ನಾಡಿನ ಹಲವಾರು ಮಠದ ಶ್ರೀಗಳು, ಸಚಿವರು, ಶಾಸಕರು ಸೇರಿ ಪಕ್ಷಾತೀತವಾಗಿ ಎಲ್ಲ ನಾಯಕರು ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಣೆ ನಡೆಸಿದ್ದರಿಂದ ಸಹಜವಾಗಿ ಭಕ್ತರಲ್ಲಿ ಆತಂಕ ಮನೆ ಮಾಡಿತ್ತು. ಇದರಿಂದ ವಿಜಯಪುರ ನಗರದ ಬಿಎಲ್‌ಡಿಇ ಎಂಜಿಯರಿಂಗ್‌ ಕಾಲೇಜು ರಸ್ತೆ ಬಳಿ ಇರುವ ಜ್ಞಾನಯೋಗಾಶ್ರಮಕ್ಕೆ ಹರಿದು ಬರುತ್ತಿರುವ ಭಕ್ತರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದೇಶ್ವರ ಶ್ರೀಗಳ ಆರೋಗ್ಯದ ಕುರಿತು ಪ್ರತಿ ನಾಲ್ಕು ಗಂಟೆಗೊಮ್ಮೆ ಹೆಲ್ತ್‌ ಬುಲೆಟಿನ್‌ ಅನ್ನು ಆಶ್ರಮ ಬಿಡುಗಡೆ ಮಾಡುತ್ತಿದೆ. ಮಾತ್ರವಲ್ಲ, ನೆರೆದ ಭಕ್ತರಿಗಾಗಿ ಸಂಜೆ ವೇಳೆ ಹೊರಗಡೆ ಹಾಕಲಾಗಿದ್ದ ಎಲ್‌ಇಡಿ ಸ್ಕ್ರೀನ್‌ ಮೂಲಕ ಸಿದ್ದೇಶ್ವರ ಶ್ರೀಗಳ ದರ್ಶನವನ್ನೂ ಮಾಡಿಸಲಾಯಿತು. ಈ ಮೂಲಕ ಭಕ್ತರಲ್ಲಿ ಮೂಡಿದ್ದ ತಳಮಳ ಕಡಿಮೆ ಮಾಡುವ ಪ್ರಯತ್ನ ಮಾಡಲಾಯಿತು.

ನಾಡಿನ ಹಲವು ಶ್ರೀಗಳ ಭೇಟಿ:

ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಣೆಗೆ ಮೈಸೂರು ದೇಶಿಕೇಂದ್ರ ಸುತ್ತೂರು ಶ್ರೀಗಳು, ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು, ಇಳಕಲ್ಲ ಚಿತ್ತರಗಿ ಮಠದ ಗುರು ಮಹಾಂತ ಶ್ರೀಗಳು, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಥಣಿ ಶಾಸಕ ಮಹೇಶ ಕುಮಟಳ್ಳಿ ಸೇರಿ ಅನೇಕ ಶ್ರೀಗಳು, ಗಣ್ಯರು ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು.

ಈ ವೇಳೆ ಮೈಸೂರಿನ ಸುತ್ತೂರು ಶ್ರೀಗಳು ಸುದ್ದಿಗಾರರ ಜೊತೆಗೆ ಮಾತನಾಡಿ, ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಆದರೆ ಆಹಾರ ಹೆಚ್ಚಿಗೆ ಸೇವಿಸುತ್ತಿಲ್ಲ. ಶ್ರೀಗಳ ಆರೋಗ್ಯದ ಬಗ್ಗೆ ಯಾವುದೇ ಊಹಾಪೋಹ ಬೇಡ. ಜಿಲ್ಲಾಧಿಕಾರಿ, ಎಸ್ಪಿ ಓಡಾಟದ ಬಗ್ಗೆ ಗಾಬರಿ ಬೇಡ. ಮುಖ್ಯಮಂತ್ರಿ ಅವರ ಆದೇಶದ ಮೇರೆಗೆ ಅಧಿಕಾರಿಗಳು ಓಡಾಟ ನಡೆಸಿದ್ದಾರೆ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಹೆಚ್ಚಿನ ಚಿಕಿತ್ಸೆಗೆ ಅವರು ಒಪ್ಪುತ್ತಿಲ್ಲ. ಆಹಾರ ಸ್ವೀಕರಿಸುತ್ತಿಲ್ಲ. ಪೌಷ್ಟಿಕ ಆಹಾರ ತೆಗೆದುಕೊಂಡಿಲ್ಲ. ಹಾಗಾಗಿ ಅಶಕ್ತರಾಗಿದ್ದಾರೆ. ಎರಡು ಬಾರಿ ಗಂಜಿ ಸೇವಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಶ್ರೀಗಳಿಂದ ಪುಸ್ತಕ ಬಿಡುಗಡೆ

ತಮ್ಮ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಕುರಿತು ಬರೆದ ಜ್ಞಾನ ಸಂಪುಟ ಪುಸ್ತಕವನ್ನು ಶ್ರೀ ಸಿದ್ದೇಶ್ವರ ಶ್ರೀಗಳ ಅಮೃತ ಹಸ್ತದಿಂದಲೇ ಭಾನುವಾರ ಬಿಡುಗಡೆ ಮಾಡಲಾಯಿತು. ಸಿದ್ದೇಶ್ವರ ಶ್ರೀಗಳು ಹಾಸಿಗೆ ಮೇಲೆ ಮಲಗಿಕೊಂಡ ಸ್ಥಿತಿಯಲ್ಲಿಯೇ ಜ್ಞಾನಯೋಗ ಸಂಪುಟ ಪುಸ್ತಕವನ್ನು ಬಿಡುಗಡೆ ಮಾಡಿದ್ದು ವಿಶೇಷ.

ಶ್ರೀಗಳ ಉಸಿರಾಟ ಸಹಜವಾಗಿದೆ: ವೈದ್ಯರ ಸ್ಪಷ್ಟನೆ

ಸಿದ್ದೇಶ್ವರ ಶ್ರೀಗಳನ್ನು ನೋಡಿಕೊಳ್ಳಲು ಬಿಎಲ್‌ಡಿಇಯ ಇಬ್ಬರು ವೈದ್ಯರು ಆಶ್ರಮದಲ್ಲಿಯೇ ಇದ್ದಾರೆ. ಶ್ರೀಗಳ ಆರೋಗ್ಯ ಕುರಿತಾಗಿ ಪ್ರತಿಯೊಂದು ವಿವರಣೆಯನ್ನು ಡಾ.ಮಲ್ಲಣ್ಣ ಮೂಲಿಮನಿ, ಡಾ.ಅರವಿಂದ ಪಾಟೀಲ ವೈದ್ಯರೇ ನೀಡುತ್ತಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಭಯ ವೈದ್ಯರು, ಶ್ರೀ ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಬೆಳಗ್ಗೆಯಿಂದ ನಾರ್ಮಲ್‌ ಇದ್ದಾರೆ. ಪಲ್ಸ್‌, ಬಿಪಿ, ಉಸಿರಾಟ ಸಹಜವಾಗಿದೆ. ಶ್ರೀಗಳು ಗಂಜಿ ಸೇವಿಸಿದ್ದಾರೆ ಎಂದು ಮಾಹಿತಿ ನೀಡಿದರು.

ನಿನ್ನೆ (ಶನಿವಾರ) ಆಕ್ಸಿಜನ್‌ ಕಡಮೆಯಾಗಿತ್ತು. ಇಂದು (ಭಾನುವಾರ) ನಾರ್ಮಲ್‌ ಇದೆ. ಕೆಲ ದಿನಗಳಿಂದ ಊಟ ಸೇವಿಸಿಲ್ಲ. ಹಾಗಾಗಿ ಅಶಕ್ತರಾಗಿದ್ದಾರೆ. ಹೊರಗೆ ಬರಲು ಆಗುತ್ತಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ವಿಜಯಪುರ: 'ಸಿದ್ದೇಶ್ವರ ಶ್ರೀ ಆರೋಗ್ಯ ಬಗ್ಗೆ ವದಂತಿ ಹರಡಬೇಡಿ, ಕೋವಿಡ್‌ ಹಿನ್ನೆಲೆ ದರ್ಶನ ಇಲ್ಲ'

ಭಕ್ತರ ದಂಡು ತಡೆದ ಪೊಲೀಸರು

ಶ್ರೀಗಳ ಅನಾರೋಗ್ಯದಿಂದ ಕಂಗೆಟ್ಟಿರುವ ಕೆಲ ಭಕ್ತರು ಆಶ್ರಮದೊಳಗೆ ನುಗ್ಗಲು ಯತ್ನಿಸಿದ್ದು ಆಗ ಪೊಲೀಸರು ಅವರನ್ನು ತಡೆದರು. ಭಕ್ತರನ್ನು ಆಶ್ರಮದ ಆವರಣದಿಂದ ಹೊರ ಕಳುಹಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಭಕ್ತರನ್ನು ನಿಯಂತ್ರಿಸಲು ಅಲ್ಲಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗುತ್ತಿದೆ. ಆದರೂ ಅಪಾರ ಸಂಖ್ಯೆಯಲ್ಲಿ ಆಶ್ರಮದ ಕಡೆಗೆ ನುಗುತ್ತಿರುವ ಭಕ್ತರನ್ನು ತಡೆಯಲು ಭಾರೀ ಕಸರತ್ತು ನಡೆಸಬೇಕಾಗಿದೆ. ಆಶ್ರಮದ ಸುತ್ತಲೂ ಭಾರೀ ಬಿಗಿ ಪೊಲೀಸ್‌ ಬಂದೋಬಸ್‌್ತ ವ್ಯವಸ್ಥೆ ಮಾಡಲಾಗಿದೆ.

click me!