ಸಿಎಂ ಭೇಟಿ ನೀಡದ ಸ್ಥಳಕ್ಕೆ ಸಿದ್ದು!| ಕೊಡಗಿನ ಕರಡಿಗೋಡು, ತೋರ, ಕೊಂಡಂಗೇರಿಯಲ್ಲಿ ನೆರೆ ಪರಿಶೀಲನೆ| ಸಂತ್ರಸ್ತರ ಸಮಸ್ಯೆ ಆಲಿಕೆ
ಮಡಿಕೇರಿ[ಆ.31]: ರಾಜ್ಯದ ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ಮುಂದುವರೆಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮೈಸೂರು ಹಾಗೂ ಕೊಡಗು ಜಿಲ್ಲೆಗಳಿಗೆ ಭೇಟಿ ನೀಡಿದರು. ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಡಗು ಜಿಲ್ಲೆಯಲ್ಲಿ ಭೇಟಿ ನೀಡದ ಪ್ರದೇಶಗಳಿಗೆ ತೆರಳಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
ಶುಕ್ರವಾರ ಮಧ್ಯಾಹ್ನದ ವೇಳೆಗೆ ಮಡಿಕೇರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಹುಣಸೂರಿನ ತಾಲೂಕಿನ ಹನಗೋಡು ಹಾಗೂ ಪಿರಿಯಾಪಟ್ಟಣದ ಕೆಲವೆಡೆ ನೆರೆಯಿಂದ ಹಾನಿಗೊಳಗಾದ ಸ್ಥಳಗಳ ಪರಿಶೀಲನೆ ನಡೆಸಿದರು. ಬಳಿಕ ಮಡಿಕೇರಿಗೆ ಪ್ರಯಾಣ ಬೆಳೆಸಿದ ಸಿದ್ದರಾಮಯ್ಯ, ಪ್ರವಾಹಕ್ಕೆ ತುತ್ತಾದ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ಭೋಜನದ ಬಳಿಕ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಭೂಕುಸಿತವಾಗಿರುವ ವಿರಾಜಪೇಟೆ ತಾಲೂಕಿನ ತೋರ ಹಾಗೂ ಕೊಂಡಂಗೇರಿಗೆ ತೆರಳಿ ಪರಿಶೀಲಿಸಿ ನಂತರ ಮೈಸೂರಿಗೆ ತೆರಳಿದರು.
ಪ್ರವಾಹದ ಪರಿಣಾಮ ಕೆಲ ದಿನಗಳ ಹಿಂದೆ ತೋರ ಗ್ರಾಮದಲ್ಲಿ ಮಣ್ಣು ಕುಸಿದು ಮನೆಯಲ್ಲಿದ್ದ ತಾಯಿ ಮತ್ತು ಮಗ ಮೃತಪಟ್ಟಿದ್ದರು. ಇಂದು ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ ಹಾಗೂ ಇದೇ ಸಂದರ್ಭದಲ್ಲಿ ಹಾನಿಗೀಡಾದ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವೀಕ್ಷಿಸಿದೆ. pic.twitter.com/OJgA7B4ETc
— Siddaramaiah (@siddaramaiah)ಸಿಎಂ ಪರಿಶೀಲಿಸದ ಸ್ಥಳದಲ್ಲಿ ಪರಿಶೀಲನೆ:
ಗುರುವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ, ಕರಡಿಗೋಡು, ತೋರ ಹಾಗೂ ಕೊಂಡಂಗೇರಿಗೆ ತೆರಳಿರಲಿಲ್ಲ. ಇದರಿಂದ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಶುಕ್ರವಾರ ಈ ಎಲ್ಲಾ ಪ್ರದೇಶಗಳಿಗೆ ತೆರಳಿದ ಸಿದ್ದರಾಮಯ್ಯ, ಸಮಾಧಾನದಿಂದ ಸಂತ್ರಸ್ತರ ಸಂಕಷ್ಟಗಳ ಆಲಿಸಿದರು.
ಬೀದಿಗೆ ಇಳಿದು ಪ್ರತಿಭಟನೆ
ನೆರೆ ಪರಿಶೀಲನೆ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ನೆರೆಗೆ ಪರಿಹಾರ ಬಿಡುಗಡೆ ಮಾಡಿಲ್ಲ. ಹೀಗಾಗಿ, ಸಾಂಕೇತಿಕವಾಗಿ ಪ್ರತಿಭಟಿಸಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರದಿಂದ ಪ್ರವಾಹ ಪರಿಹಾರ ಕೆಲಸವಾಗಿಲ್ಲ, ಅವರು ರಾಜಕೀಯದಲ್ಲಿ ಮುಳುಗಿದ್ದಾರೆ. ಸರ್ಕಾರಕ್ಕೆ ಎಚ್ಚರಿಕೆ ನೀಡಲು ಪ್ರತಿಭಟನೆ ಮಾಡಿದ್ದೇವೆ. ಮುಂದಿನ ದಿನದಲ್ಲಿ ಬೀದಿಗೆ ಇಳಿದು ಪ್ರತಿಭಭಟಿಸುತ್ತೇವೆ ಎಂದು ಎಚ್ಚರಿಸಿದರು.