ಆಡಳಿತ-ವಿರೋಧ ಪಕ್ಷದವರಿಗೆಲ್ಲರಿಗೂ ಕಿವಿಮಾತು ಹೇಳಿದರು ನೆರೆ ಪೀಡಿತ ಮಹಿಳೆ ಪ್ರೇಮಾಬಾಯಿ| ನಿಮ್ಮಷ್ಟು ಆಲೋಚನೆ ಈ ಸರ್ಕಾರ ನಡೆಸೋರಿಗೆ ಇಲ್ಲ ನೋಡ್ರಿ ಎಂದು ಸಮಾಧಾನ ಮಾಡಿದ ಸಿದ್ದರಾಮಯ್ಯ|
ಕಲಬುರಗಿ(ಅ.27): ಯಪ್ಪಾ, ನೀವು ಹೊಳಿ ಬಂದು ಹೋದಾಗೊಮ್ಮೆ ಬಂದು ಹೋಗ್ತೀರಿ, ಹಿಂಗ ಮಾಡೋದಕ್ಕಿಂತ ಮಹಾರಾಷ್ಟ್ರದವ್ರು ಬೇಕಾಬಿಟ್ಟಿ ನೀರ ಬಿಡೋದನ್ನ ತುಸು ನಿಲ್ಸಿದ್ರ ವೈನಾಗ್ತೈತಿ, ಹೀಂಗ ಬರೋದಕ್ಕಿಂತ ಮೊದ್ಲು ಆ ಕೆಲ್ಸ ಮಾಡ್ರಿ ಯಪ್ಪಾ’
ಹೀಗೆಂದು ಆಡಳಿತ-ವಿರೋಧ ಪಕ್ಷದವರಿಗೆಲ್ಲರಿಗೂ ಕಿವಿಮಾತು ಹೇಳಿದರು ಸರಡಗಿ (ಬಿ) ಗ್ರಾಮದ ರೈತಾಪಿ, ನೆರೆ ಪೀಡಿತ ಮಹಿಳೆ ಪ್ರೇಮಾಬಾಯಿ. ನೆರೆ ಪೀಡಿತ ಪ್ರದೇಶಗಳ ಪ್ರವಾಸದಲ್ಲಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಹಿಳೆಯ ಮಾತಿಗೆ ದಂದಾದರು. ಆದಾಗ್ಯೂ ಆ ಕ್ಷಣವೇ ಸಾವರಿಸಿಕೊಂಡ ಸಿದ್ದರಾಮಯ್ಯ, ನಿಮ್ಮಷ್ಟು ಆಲೋಚನೆ ಈ ಸರ್ಕಾರ ನಡೆಸೋರಿಗೆ ಇಲ್ಲ ನೋಡ್ರಿ ಎಂದು ಸಮಾಧಾನ ಮಾಡಿದ್ದಾರೆ.
ನಿದ್ದೆಗಣ್ಣಿನಲ್ಲಿರುವ ರೈತ ವಿರೋಧಿ ಸರ್ಕಾರದ ಕಣ್ಣು ತೆರೆಸಬೇಕಾಗಿದೆ: ಸಿದ್ದರಾಮಯ್ಯ
ಸರಡಗಿ (ಬಿ) ಹೊಲಗದ್ದೆ ವೀಕ್ಷಿಸಿಸುತ್ತಿದ್ದಾಗ ಸಿದ್ದರಾಮಯ್ಯಗೆ ಭೇಟಿ ಮಾಡಿದ ಪ್ರೇಮಾಬಾಯಿ, ಹೀಂಗ ಬಂದು ಹೋಗೋದರಿಂದ ಉಪಯೋಗ ಹೆಚ್ಚೇನು ಆಗೋದಿಲ್ರಿ, ಮಹಾರಾಷ್ಟ್ರದವ್ರ ನೀರ ಬಿಡೋದಕ್ಕ ಲೆಕ್ಕಪತ್ರ ಅದ ಇಲ್ಲ, ಇದನ್ನೆಲ್ಲ ವಿಚಾರಿಸಿ ಈ ಸಮಸ್ಯಾಕ್ಕ ಪರಿಹಾರ ಹಿಡಕ್ರಿ, ಮೊದ್ಲು ಆ ಕೆಸ್ಲಾ ಆಗಬೇಕು ಎಂದು ಅಳಲು ತೋಡಿಕೊಂಡರು. ಇವರು ಮಾತು ಸಿದ್ದರಾಮಯ್ಯ ಜೊತೆಗೆ ಅಲ್ಲಿದ್ದ ಮುಖಂಡರೆಲ್ಲರ ಗಮನ ಸೆಳೆಯಿತು. ಏಕೆಂದರೆ ಈಚೆಗಷ್ಟೇ ಭೀಮಾ ಅಬ್ಬರದಲ್ಲೇ ಮಹಾರಾಷ್ಟ್ರದಿಂದ 8.30 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೆ, ಈ ಪರಿ ನೀರೆ ಬಂದಿಲ್ಲ, ಮಹಾರಾಷ್ಟ್ರ ಸುಳ್ಳು ಹೇಳುತ್ತಿದೆ. ಹರಿದು ಬಂದ ನೀರಿನ ಪ್ರಮಾಣ 3.50 ಲಕ್ಷ ಕ್ಯುಸೆಕ್ ಇರಬಹುದು ಎಂದು ಡಿಸಿಎಂ ಲಕ್ಷ್ಮಣ ಸವದಿ ನೀಡಿದ್ದ ಹೇಳಿಕೆ ಸುದ್ದಿಯಾಗಿತ್ತು.
ಇವೆಲ್ಲ ಹೇಳಿಕೆಗಳ ಹಿನ್ನೆಲೆಯಲ್ಲಿ ಸರಡಗಿ (ಬಿ) ಮಹಿಳೆ ಎತ್ತಿದ ಪ್ರಶ್ನೆ ಅಧಿಕಾರಿಗಳು, ಜನನಾಯಕರಿಗೆ ಕಣ್ಣು ತೆರೆಸಿದ್ದು, ಮೊದಲು ಈ ಕೆಲಸವಾಗಲಿ ಎಂಬ ಚರ್ಚೆಗಳಿಗೆ ನಾಂದಿ ಹೇಳಿದಂತಾಗಿದೆ. ಇಲ್ಲಿಂದ ಸಿದ್ದರಾಮಯ್ಯ ಸರಡಗಿ, ಕೋನ ಹಿಪ್ಪರಗಾ ಸೀಮೆಯ ಮೂಲಕ ಸಾಗಿ ಕಟ್ಟಿಸಂಗಾವಿ ಸೇತುವೆ ವೀಕ್ಷಿಸಿದರು. ಇಲ್ಲಿಂದ ಜೇವರ್ಗಿಯ ಕೆಲವು ಹಳ್ಳಿಗಳ ಮೂಲಕ ಸಾಗಿ ಶಹಾಪುರು ಮಾರ್ಗವಾಗಿ ಯಾದಗಿರಿ ಜಿಲ್ಲೆ ಪ್ರವೇಶಿಸಿದರು. ವಿಧಾನ ಸಭೆ ವಿರೋಧ ಪಕ್ಷ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ್, ಬಿಆರ್ ಪಾಟೀಲ್, ಎಂವೈ ಪಾಟೀಲ್, ಅಲ್ಲಂಪ್ರಭು ಪಾಟೀಲ್ ಇದ್ದರು.