ಸ್ವತಂತ್ರ ಪಕ್ಷ ಕಟ್ಟಿ ಎಂದಿದ್ದಕ್ಕೆ ಸಿದ್ದು ಕೆಂಡಾಮಂಡಲ| ಸಿದ್ದು, ಕಾರಜೋಳ ಮಧ್ಯೆ ಹಾಸ್ಯ ಚಟಾಕಿ| ಗೋವಿಂದ ಕಾರಜೋಳ ಅವರನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ| ಬಾದಾಮಿ ಬನಶಂಕರಿ ದೇಗುಲ ಬಳಿ ಮುಖಾಮುಖಿಯಾದ ಸಿದ್ದರಾಮಯ್ಯ ಮತ್ತು ಕಾರಜೋಳ|
ಬಾಗಲಕೋಟೆ(ಫೆ.13): ‘ನಾನೇಕೆ ಕಾಂಗ್ರೆಸ್ ಪಕ್ಷ ಬಿಟ್ಟು ಪ್ರತ್ಯೇಕ ಪಕ್ಷ ಮಾಡೋಕೆ ಹೋಗಲಿ? ಅವರಿಗೆ ಬುದ್ಧಿ ಇಲ್ಲಾ ಅಂತ ನನಗೂ ಇಲ್ವಾ?’ ಇದು ಸಿದ್ದರಾಮಯ್ಯ ಸ್ವತಂತ್ರ ಪಕ್ಷ ಕಟ್ಟಿ ತಮ್ಮನ್ನು ಸೇರಿದಂತೆ ಐದು ಸ್ಥಾನ ಗೆದ್ದು ತೋರಿಸಲಿ ನೋಡೋಣ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ ರೀತಿ.
ಬಾದಾಮಿಯಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಆಗಿದ್ದಾರೆ ಎಂಬ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ ಹೇಳಿಕೆಗೆ ಮಾತ್ರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರ ಉದ್ಯಮಿ ಅದಾನಿಯಿಂದ ವಿದ್ಯುತ್ ಖರೀದಿಸುವ ಬದಲು ರಾಜ್ಯದಲ್ಲಿಯೇ ಸಾಕಷ್ಟುವಿದ್ಯುತ್ ಉತ್ಪಾದನೆ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟರು. ರಾಯಚೂರಿನ ಶಕ್ತಿನಗರದಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆಗೆ ಕೇಂದ್ರ ಗಮನಹರಿಸಬಹುದಿತ್ತು. ಈ ಮೂಲಕ ವಿದ್ಯುತ್ ಅನ್ನು ಅನ್ಯ ರಾಜ್ಯಗಳಿಗೂ ಇಲ್ಲಿಂದಲೇ ಪೂರೈಕೆ ಮಾಡಬಹುದಿತ್ತು. ಹೀಗೆ ಮಾಡಿದ್ದಲ್ಲಿ ಕೇಂದ್ರ ಸರ್ಕಾರವು ಉದ್ಯಮಿ ಅದಾನಿ ಅವರಿಂದ ವಿದ್ಯುತ್ ಖರೀದಿಸುವುದು ತಪ್ಪುತ್ತಿತ್ತು ಎಂದು ಹೇಳಿದರು.
ಜೆಡಿಎಸ್ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ
ಡಿಸಿಎಂರನ್ನು ಹೊಗಳಿದ ಸಿದ್ದು
ಬಾದಾಮಿ ಪಟ್ಟಣದ ಪಿಡಬ್ಲ್ಯುಡಿ ಅವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಹಾಡಿ ಹೊಗಳಿದ ಘಟನೆ ನಡೆಯಿತು. ನಾನು ಹೇಳಿದರೆ ಕಾರಜೋಳ ಅನುದಾನ ಇಲ್ಲ ಅನ್ನೋದಿಲ್ಲ. ಕೇಳಿದಾಗ ಅನುದಾನ ಕೊಟ್ಟಿದ್ದಾನೆ. ಕಾರಜೋಳ ಜನತಾ ಪರಿವಾರದಲ್ಲಿ ನನ್ನೊಂದಿಗಿದ್ದರು, ನನ್ನ ಮತ್ತು ಕಾರಜೋಳರ ಮಧ್ಯೆ ಇನ್ನೂ ಬಾಂಧವ್ಯ ಇದೆ. ಮಾಚ್‌ರ್ ಒಳಗಾಗಿ ಇನ್ನಷ್ಟುಅನುದಾನ ಕೊಡಿ ಎಂದು ಕೇಳಿದ ಸಿದ್ದರಾಮಯ್ಯ, ಇಷ್ಟುಸಚಿವರಲ್ಲಿ ಕಾರಜೋಳ ಮಾತ್ರ ನಾನು ಕೇಳಿದಾಗ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಅವರಿಗೆ ವಿಶೇಷ ಅಭಿನಂದನೆಗಳು ಎಂದ ಸಿದ್ದರಾಮಯ್ಯ ತಿಳಿಸಿದರು.
ಸಿದ್ದು, ಕಾರಜೋಳ ಮಧ್ಯೆ ಹಾಸ್ಯ ಚಟಾಕಿ
ಬಾದಾಮಿ ಬನಶಂಕರಿ ದೇಗುಲ ಬಳಿ ಮುಖಾಮುಖಿಯಾದ ಸಿದ್ದರಾಮಯ್ಯ ಮತ್ತು ಕಾರಜೋಳ ಅವರ ಮಧ್ಯೆ ಹಾಸ್ಯ ಚಟಾಕಿ ನಡೆಯಿತು. ನೀವು, ಈಶ್ವರಪ್ಪ ಬಂದರೆ ಸಕ್ಕರೆಗೆ ಇರುವೆ ಮುಕ್ಕಿದ ಹಾಗೆ ಮಾಧ್ಯಮದವರು ಮುಗಿಬೀಳುತ್ತಾರೆ ಎಂದು ಕಾರಜೋಳ ಹೇಳಿದರು. ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ಈಶ್ವರಪ್ಪ ನನಗೆ ಯಾವಾಗಲೂ ಕೀಟಲೆ ಮಾಡುತ್ತಿರುತ್ತಾರೆ. ಅದಕ್ಕೆ ಮಾಧ್ಯಮದವರು ಮುಗಿಬೀಳುತ್ತಾರೆ ಎಂದು ಹೇಳಿದರು.