ರಾಜ್ಯದಲ್ಲಿರುವ ಆಲಿಬಾಬ ಮತ್ತು ನಲವತ್ತು ಕಳ್ಳರ ಸರ್ಕಾರ ಕಿತ್ತೊಗೆದು ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಬಿಜೆಪಿ ಸರ್ಕಾರ ನಿಲ್ಲಿಸಿರುವ ಎಲ್ಲಾ ಯೋಜನೆಗಳನ್ನು ಮುಂದುವರೆಸಿ, ಹಲವು ವಿನೂತನ ಯೋಜನೆಯನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.
ಮೈಸೂರು : ರಾಜ್ಯದಲ್ಲಿರುವ ಆಲಿಬಾಬ ಮತ್ತು ನಲವತ್ತು ಕಳ್ಳರ ಸರ್ಕಾರ ಕಿತ್ತೊಗೆದು ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಬಿಜೆಪಿ ಸರ್ಕಾರ ನಿಲ್ಲಿಸಿರುವ ಎಲ್ಲಾ ಯೋಜನೆಗಳನ್ನು ಮುಂದುವರೆಸಿ, ಹಲವು ವಿನೂತನ ಯೋಜನೆಯನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ಜೆ.ಕೆ. ಮೈದಾನದಲ್ಲಿ ಗುರುವಾರ ಸಂಜೆ ಮೈಸೂರು ನಗರ ಮತ್ತು ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾರ್ಯಕರ್ತರ ರಣೋತ್ಸಾಹ ನೋಡಿದರೆ ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟುಸತ್ಯವೋ ನಾವು ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಹೇಳಿದರು.
undefined
200 ಯೂನಿಟ್ ಉಚಿತಮನೆಯ ಯಜಮಾನಿಗೆ 2 ಸಾವಿರ, ತಲಾ 10 ಕೆಜಿ ಉಚಿತ ಅಕ್ಕಿ, ಶಾದಿ ಭಾಗ್ಯ, ಶೂ ಭಾಗ್ಯ ಮುಂತಾದ ಅನೇಕ ಯೋಜನೆಗಳನ್ನು ನೀಡುತ್ತೇವೆ. ಆದ್ದರಿಂದ ಕಾರ್ಯಕರ್ತರು ಮತ್ತು ಮತದಾರ ಬಂಧುಗಳು ಯಾವುದೇ ಸಿದ್ಧಾಂತ ಇಲ್ಲದ ಜೆಡಿಎಸ್‌ಗೆ ಮತ ಹಾಕುವ ಬದಲು ಮತ್ತು ಭ್ರಷ್ಟತೆಯಿಂದ ಕೂಡಿದ ಬಿಜೆಪಿ ಸರ್ಕಾರವನ್ನು ಬೆಂಬಲಿಸುವ ಬದಲು ನಮಗೆ ಮತ ಹಾಕಿ ಎಂದು ಅವರು ಕೋರಿದರು.
ಹೊಟೇಲ್‌ಗಳಲ್ಲಿ ಊಟ, ತಿಂಡಿಗೆ ದರಪಟ್ಟಿಹಾಕಿದಂತೆ, ರಾಜ್ಯದ ಬಿಜೆಪಿ ಸರ್ಕಾರವು ವಿವಿಧ ಹುದ್ದೆಗಳಿಗೆ ಮತ್ತು ವರ್ಗಾವಣೆಗೆ ದರ ನಿಗದಿಪಡಿಸಿದೆ. ಇದೊಂದು ಆಲಿಬಾಬ ಮತ್ತು ನಲವತ್ತು ಮಂದಿ ಕಳ್ಳರ ಕೂಟ. ಆದ್ದರಿಂದ ನಿಮಗೆ ಕೆಲಸ ಮಾಡುವ ಸರ್ಕಾರ ಬೇಕೋ, ಬೇಡವೋ ನಿರ್ಧರಿಸಿ. ಒಂದು ವೇಳೆ ನಾವು ಕೊಟ್ಟಭರವಸೆ ಈಡೇರಿಸದಿದ್ದರೆ ಸನ್ಯಾಸಾಶ್ರಮ ಸ್ವೀಕರಿಸುವುದಾಗಿ ಪುನರುಚ್ಚರಿಸಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ 15 ಸ್ಥಾನಗಳಲ್ಲಿ 15 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ನಮ್ಮ ಮೊದಲ ಅವಧಿಯಲ್ಲಿ 15 ಸ್ಥಾನಕ್ಕೆ 12 ಸ್ಥಾನ ಗೆದ್ದಿದ್ದೆವು. ದುರಾಡಳಿತ, ಭ್ರಷ್ಟಾಚಾರ, ಜನವಿರೋಧಿ ಕ್ರಮದಿಂದ ಜನ ಬೇಸತ್ತಿದ್ದಾರೆ. ಈ ಸರ್ಕಾರ ಬೇಗ ತೊಲಗಿದಷ್ಟುಒಳ್ಳೆಯದಾಗುತ್ತದೆ ಎಂದು ಕೊಂಡಿದ್ದಾರೆ. ಜನರ ಆಶೀರ್ವಾದ ಇಲ್ಲದಿದ್ದರು ಬಿಜೆಪಿ ಮುಖಂಡರು ಆಪರೆಷನ್ ಕಮಲದ ಮೂಲಕ ಹಿಂಬಾಗಿಲ ಮೂಲಕ ಬಂದಿದ್ದಾರೆ. 2018ರಲ್ಲಿ ಹೆಚ್ಚು ಮತ ನಮಗೆ ಇತ್ತು ಎಂದರು.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ 37 ಸ್ಥಾನಗಳಿಸಿದ್ದ ಜೆಡಿಎಸ್‌ನ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೂ ಶಾಸಕರು, ಸಚಿವರು, ನಮ್ಮ ಕಾಂಗ್ರೆಸ್ ಮುಖಂಡರನ್ನು ಹಾಗೂ ಸಮನ್ವಯ ಸಮಿತಿ ಅಧ್ಯಕ್ಷನಾದ ನನ್ನನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಅಧಿಕಾರದಲ್ಲಿ ಇದ್ದಷ್ಟುದಿನ ಹೊಟೇಲ್‌ನಲ್ಲಿಯೇ ಕಾಲ ಕಳೆದರು. ಈಗ ನೋಡಿದರೆ ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ಅವರೇ ಕಳುಹಿಸಿದ್ದಾಗಿ ಗೂಬೆ ಕೂರಿಸುತ್ತಿದ್ದಾರೆ. ಹಾಗಾದರೆ ಜೆಡಿಎಸ್‌ನ ನಾಲ್ವರು ಶಾಸಕರನ್ನು ಕುಮಾರಸ್ವಾಮಿ ಕಳುಹಿಸಿದರೆ? ನಮ್ಮ ಮೇಲೆ ಗೂಬೆ ಕೂರಿಸಲು ಇವರಿಗೆ ಮಾನ, ಮರ್ಯಾದೆ, ನಾಚಿಗೆ, ಹೇಸಿಗೆ ಇದೆಯಾ ಎಂದು ಪ್ರಶ್ನಿಸಿದರು.
ಸರ್ಕಾರ ಮಾಡಪ್ಪ ಎಂದು ಅಧಿಕಾರ ಕೊಟ್ಟರೆ ಅಧಿಕಾರ ಕಳೆದುಕೊಂಡ. ಈಗ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಪಂಚರತ್ನ ಯಾತ್ರೆ ನೆನಪಾಗಲಿಲ್ಲವೇ? ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಕಾರಣ. ಕೋಮುವಾದಿಗಳ ಜತೆ ಸೇರಿ ಅಧಿಕಾರ ನಡೆಸಿ, ತಾವು ಜಾತ್ಯಾತೀತರು ಎಂದು ಹೇಳಿಕೊಳ್ಳುತ್ತಾರೆ. ಅದು ಹೇಗೆ ಸಾಧ್ಯ? ಆದ್ದರಿಂದ ಅವರನ್ನ ನಂಬಬೇಡಿ. ನಾವಂತು ಅವರನ್ನು ಮತ್ತೆ ಸೇರಿಸುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕಳೆದ ಬಾರಿ ಜೆಡಿಎಸ್‌ಗೆ ಅಧಿಕಾರ ಕೊಡುವಾಗ ನಮ್ಮ ಪಕ್ಷದ ಹೈಕಮಾಂಡ್‌ಗೆ ಜೆಡಿಎಸ್ ಅಪನಂಬಿಕೆಯ ಪಕ್ಷ, ಹೊಂದಾಣಿಕೆ ಬೇಡ ಎಂದು ಹೇಳಿದ್ದೆ. ಆದರೆ ಹೈಕಮಾಂಡ್ ಮಾತು ಕೇಳಲಿಲ್ಲ. ಪರಿಣಾಮ ಜನರು ತೊಂದರೆ ಅನುಭವಿಸುವಂತಾಯಿತು. ಈಗ ಜೆಡಿಎಸ್ 20 ರಿಂದ 22 ಸ್ಥಾನ ಗೆದ್ದರೆ ಹೆಚ್ಚು ಎಂದು ಅವರು ಟೀಕಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ… ಮಾತನಾಡಿ, ಭವ್ಯ ಭಾರತದ ನಿರ್ಮಾಣಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಮರಳು ಗಾಡಿನಂತೆ ಇದ್ದ ದೇಶವನ್ನು ಸಮೃದ್ಧಗೊಳಿಸಿದ್ದು ಕಾಂಗ್ರೆಸ್ ಸರ್ಕಾರ. ಅಂತೆಯೇ ಕರ್ನಾಟಕದ ಪ್ರಗತಿಗೆ ಕಾಂಗ್ರೆಸ್ ಕಾರಣ. ಧೀರ್ಘಕಾಲದ ಮುಖ್ಯಮಂತ್ರಿ ಆಗಿದ್ದ ದೇವರಾಜ ಅರಸು ಅವರು ಹಾವನೂರು ವರದಿ, ಉಳುವವನೆ ಭೂಮಿಯ ಒಡೆಯ ಮುಂತಾದ ಕಾರ್ಯಕ್ರಮ ನೀಡಿದ್ದಾರೆ. ಬಳಿಕ ಸಿದ್ದರಾಮಯ್ಯ ಅವರು ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈಗ ಕಾಂಗ್ರೆಸ್‌ಗೆ ಪೂರಕ ವಾತಾವರಣ ಇದೆ. ಉಪ ಚುನಾವಣೆಯಲ್ಲಿ ಹೆಚ್ಚು ಮತವನ್ನು ಕಾಂಗ್ರೆಸ್ ಗೆದ್ದಿದೆ. ಕಣ್ಣ ಮುಂದೆ ಬಿಜೆಪಿಯ ವೈಫಲ್ಯದ ಸರಮಾಲೆ ಇದೆ. ದೇಶದಲ್ಲಿ ಅತ್ಯಂತ ಭ್ರಷ್ಟಸರ್ಕಾರ ಇದ್ದರೆ ಅದು ರಾಜ್ಯದ ಬಿಜೆಪಿ ಸರ್ಕಾರ ಎಂದು ಟೀಕಿಸಿದರು.
ಚುನಾವಣೆ ಬಂದಾಗ ಮಾತ್ರ ಬಿಜೆಪಿಗೆ ಜನ ಸಂಕಲ್ಪ ಯಾತ್ರೆ ನೆನಪಾಗುತ್ತದೆ. ಚುನಾವಣೆ ಮುಗಿದು ಅಧಿಕಾರಕ್ಕೆ ಬಂದ ಮೇಲೆ ಧನ ಸಂಕಲ್ಪ ಯಾತ್ರೆ ಮಾಡುತ್ತಾರೆ. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಪ. ಜಾತಿ, ಪ.ಪಂಗಡದವರಿಗೆ ಅನೇಕಾರು ಕಾರ್ಯಕ್ರಮ ನೀಡಿದರು. ಈಗ ನಾವು ನಮ್ಮ ಸರ್ಕಾರದ ಅವಧಿಯಲ್ಲಿನ ಕಾರ್ಯಕ್ರಮವನ್ನು ಮನೆ ಮನೆಗೆ ತಲುಪಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ತನ್ವೀರ್‌ಸೇಠ್ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಇದೆ. ಮತ ಚಲಾಯಿಸುವ ತನಕ ಇದೇ ಉತ್ಸಾಹ ಇರಬೇಕು. ಈ ಹಿಂದೆ ಅಲ್ಪಸಂಖ್ಯಾತರ ಅಭಿವರದ್ಧಿಗೆ .456 ಕೋಟಿ ನೀಡಲಾಗುತ್ತಿತ್ತು. ಅದನ್ನು ಸಿದ್ದರಾಮಯ್ಯ ಅವರು .3000 ಕೋಟಿಗೆ ಹೆಚ್ಚಿಸಿದರು. ಆದರೆ ಈ ಬಿಜೆಪಿ ಸರ್ಕಾರದ ಯಾವುದೇ ಯೋಜನೆ ನೇರವಾಗಿ ಜನರಿಗೆ ಮುಟ್ಟುತ್ತಿಲ್ಲ. ಬದಲಿಗೆ ಜಾತಿ, ಜಾತಿ ಮಧ್ಯೆ ಎತ್ತಿಕಟ್ಟಲಾಗುತ್ತಿದೆ. ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಕೈ ಚಾಚುವ ಪರಿಸ್ಥಿತಿ ಬಂದಿದೆ. ಈಗ ಹುದ್ದೆಗಳ ಮಾರಾಟ ಆಗುತ್ತಿದ್ದು, ಇಂತ ಸರ್ಕಾರ ಬೇಕಾ ಎಂದು ಜನ ಪ್ರಶ್ನಿಸುತ್ತಿದ್ದು, ಬದಲಾಯಿಸುವ ಚಿಂತನೆಯಲ್ಲಿದ್ದಾರೆ ಎಂದರು.
ರಾಜ್ಯ ಸರ್ಕಾರವು ಬಟ್ಟೆ, ಪೂಜೆ, ಆಚರಣೆ ಮುಂತಾದ ವಿಷಯವನ್ನು ಗುರಿಯಾಗಿಸಿಕೊಂಡಿದೆ. ಇಂತಹ ಸರ್ಕಾರ ಕಿತ್ತು ಎಸೆದು ರಾಮರಾಜ್ಯವಾಗಿಸಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮೈಸೂರು ಉಸ್ತುವಾರಿ ರೋಸಿ ಜಾನ್, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಶಾಸಕರಾದ ಎಚ್.ಪಿ. ಮಂಜುನಾಥ್, ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಡಾ.ಡಿ. ತಿಮ್ಮಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಳಪಾಡ್, ಮಾಜಿ ಶಾಸಕರಾದ ವಾಸು, ಕಳಲೆ ಕೇಶವಮೂರ್ತಿ, ಎಂ.ಕೆ. ಸೋಮಶೇಖರ್, ಮಾಜಿ ಸಂಸದ ಶಿವಣ್ಣ, ಕೆಪಿಸಿಸಿ ಎಸ್ಸಿ ವಿಭಾಗದ ಅಧ್ಯಕ್ಷ ಧರ್ಮಸೇನ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಜಿಪಂ ಮಾಜಿ ಸದಸ್ಯ ಡಿ. ರವಿಶಂಕರ್ ಮೊದಲಾದವರು ಇದ್ದರು.