ಅಸಮಾನತೆ ಹೋಗಲಾಡಿಸಲು ಅಂಬೇಡ್ಕರ್‌ ಅದ್ಬುತ ಕೆಲಸ

By Kannadaprabha NewsFirst Published Jan 27, 2023, 6:36 AM IST
Highlights

ದೇಶದಲ್ಲಿ ತುಂಬಿ ತುಳುಕುತ್ತಿದ್ದ ಅಸಮಾನತೆಯನ್ನು ಹೋಗಲಾಡಿಸಲು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನ ರಚಿಸುವ ಮೂಲಕ ಅದ್ಬುತ ಕೆಲಸ ಮಾಡಿದರು ಎಂದು ವಿಚಾರವಾದಿ ಪ್ರೊ.ಕೆ.ಎಸ್‌.ಭಗವಾನ್‌ ಬಣ್ಣಿಸಿದರು.

  ಮೈಸೂರು :ದೇಶದಲ್ಲಿ ತುಂಬಿ ತುಳುಕುತ್ತಿದ್ದ ಅಸಮಾನತೆಯನ್ನು ಹೋಗಲಾಡಿಸಲು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನ ರಚಿಸುವ ಮೂಲಕ ಅದ್ಬುತ ಕೆಲಸ ಮಾಡಿದರು ಎಂದು ವಿಚಾರವಾದಿ ಪ್ರೊ.ಕೆ.ಎಸ್‌.ಭಗವಾನ್‌ ಬಣ್ಣಿಸಿದರು.

ಅಶೋಕಪುರಂ ಅಭಿಮಾನಿಗಳ ಬಳಗವು ಅಲ್ಲಿನ ಡಾ.ಬಿ.ಆರ್‌. ಉದ್ಯಾನದಲ್ಲಿ ಗುರುವಾರ ಏರ್ಪಡಿಸಿದ್ದ ಸಂವಿಧಾನೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ಇಲ್ಲದಿದ್ದರೆ ತುಂಬಾ ಕಷ್ಟವಾಗುತ್ತಿತ್ತು ಎಂದರು.

ಅಂಬೇಡ್ಕರ್‌ ಅವರು ಸ್ವಾಭಿಮಾನಿ, ಹಟ, ಛಲದಿಂದ ಬೆಳೆದವರು. ಅವರಷ್ಟುದೊಡ್ಡ ವಿದ್ವಾಂಸ ದೇಶದಲ್ಲಿ ಇಲ್ಲ. ಅಮೆರಿಕಾದ ಕೋಲಂಬಿಯ ವಿವಿಯ ಪ್ರಕಾರವೂ ಇಡೀ ವಿಶ್ವದಲ್ಲಿ ಅಂಬೇಡ್ಕರ್‌ ಅವರು ಜ್ಞಾನದಲ್ಲಿ ಮೊದಲ ಸ್ಥಾನದಲ್ಲಿ ಬರುತ್ತಾರೆ. ಜಾತಿ ಕಾರಣಕ್ಕೆ ಇವತ್ತಿಗೂ ಕೂಡ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.

ಪ್ರತಿಯೊಬ್ಬರೂ ಬಾಬಾ ಸಾಹೇಬರ ಬಗ್ಗೆ ಅರಿತುಕೊಳ್ಳಬೇಕು. ಧರ್ಮ, ಅಧರ್ಮದ ವ್ಯತ್ಯಾಸ ತಿಳಿಯಬೇಕು. ಮುಂಬರುವ ಚುನಾವಣೆಯಲ್ಲಿ ಸಂವಿಧಾನ ವಿರೋಧಿಗಳನ್ನು ಸೋಲಿಸಬೇಕು. ಆ ಮೂಲಕ ಸಂವಿಧಾನ ರಕ್ಷಿಸಬೇಕು ಎಂದರು.

ಮಾಜಿ ಮೇಯರ್‌ ಪುರುಷೋತ್ತಮ್‌ ಮಾತನಾಡಿ, ಭಾಷಾವಾರು ಪ್ರಾಂತ್ಯಗಳು ರಚನೆಯಾದ ನ.1 ರಂದು ಗಣರಾಜ್ಯೋತ್ಸವ ದಿನ, ನ.26 ರಂದು ಸಂವಿಧಾನ ಸಮರ್ಪಣಾ ದಿನ, ಜ.26 ರಂದು ಸಂವಿಧಾನ ದಿನ ಆಚರಿಸಿದರೆ ಅರ್ಥಬರುತ್ತದೆ ಎಂದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎರಡೂ ಉಳಿಯಬೇಕು ಎಂದರು.

ಇತಿಹಾಸ ತಜ್ಞ ಪ್ರೊಪಿ.ವಿ.ನಂಜರಾಜ ಅರಸ್‌ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಅವರಾದರೂ ಇತ್ತೀಚಿನ ದಿನಗಳಲ್ಲಿ ಕರಡು ರಚನಾ ಸಮಿತಿಯಲ್ಲಿದ್ದ ಬಿ.ಎನ್‌. ರಾವ್‌ ಅವರ ಹೆಸರನ್ನು ಬಿಜೆಪಿ- ಆರ್‌ಎಸ್‌ಎಸ್‌ ಕಾರ್ಯಸೂಚಿಯಂತೆ ಮುನ್ನಲೆಗೆ ತರಲಾಗುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಹೊಸ ಸಂವಿಧಾನ ರಚಿಸಿ, ಅಂಬೇಡ್ಕರ್‌ ಅವರ ಹೆಸರನ್ನು ಅಳಿಸಿಹಾಕುತ್ತಾರೆ ಎಂದರು.

ವಿನೀತರಾಗಿ ಕೈಮುಗಿಯುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಈ ರೀತಿ ಮಾಡಿಯೇ ಗಾಂಧಿ, ಇಂದಿರಾಗಾಂಧಿ, ರಾಜೀವ್‌ ಗಾಂಧಿ ಅವರನ್ನು ಹತ್ಯೆ ಮಾಡಲಾಯಿತು ಎಂಬುದನ್ನು ಅರ್ಥ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದರು.

ನಗರಪಾಲಿಕೆ ಸದಸ್ಯೆ ಪಲ್ಲವಿ ಬೇಗಂ ಮಾತನಾಡಿ, ಅಂಬೇಡ್ಕರ್‌ ಅವರು ಅರ್ಥಶಾಸ್ತ್ರಜ್ಞರು ಹೌದು. ಹೀಗಾಗಿಯೇ ಅವರ ರಚಿಸಿದ ಸಂವಿಧಾನದ ಬುನಾದಿಯ ಮೇಲೆ ದೇಶದ ಆರ್ಥಿಕತೆ ಭದ್ರವಾಗಿ ನಿಂತಿದೆ. ಅಂಬೇಡ್ಕರ್‌ ಅವರಿಗೆ ಈಗಲಾದರೂ ನೊಬೆಲ್‌ ಪ್ರಶಸ್ತಿ ನೀಡಬೇಕು ಎಂದ ಅವರು, ರಾಜ್ಯ ವಿಧಾನಸಭಾ ಚುನಾವಣೆಯ ಮೇ ತಿಂಗಳಲ್ಲಿ ನಡೆಯಬೇಕಿದ್ದು, ಏ.14ರಂದು ಅಂಬೇಡ್ಕರ್‌ ಅವರ ಜನ್ಮದಿನ ಆಚರಣೆಯ ನಂತರ ನೀತಿ ಸಂಹಿತೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಅಂಕಣಕಾರ ಬನ್ನೂರು ರಾಜು ಮಾತನಾಡಿ, ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನ ದೇಶದ ಆತ್ಮ ಇದ್ದಂತೆ. ಆತ್ಮಸಾಕ್ಷಿಗೆ ವಿರುದ್ಧವಾಗಿ ಸಂವಿಧಾನ ಹಾಳು ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಅಂಬೇಡ್ಕರ್‌ ಅವರು ಕೇವಲ ಸಂವಿಧಾನ ರಚಿಸಲಿಲ್ಲ. ಪತ್ರಿಕೋದ್ಯಮ, ಸಾಮಾಜಿಕ ಚಳವಳಿ, ಹೋರಾಟ, ರಾಜಕೀಯ ಕ್ಷೇತ್ರಗಳ ಮೂಲಕ ಮಹಿಳೆಯರು, ಕಾರ್ಮಿಕರು, ರೈತರು, ದೀನ ದಲಿತರು, ಶೋಷಿತರ ಪರ ಕೆಲಸ ಮಾಡಿದ್ದಾರೆ ಎಂದರು.

ಮುಖಂಡರಾದ ಪದ್ಮರಾಜಣ್ಣ ಮಾತನಾಡಿ, ಮೂಢನಂಬಿಕೆಗಳನ್ನು ಬಿಟ್ಟು ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌. ಶಿವರಾಮ್‌ ಸಂವಿಧಾನ ಪೀಠಿಕೆ ಬೋಧಿಸಿದರು. ಬಳಗದ ಸಿದ್ದಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಅಶೋಕ ಶಾಲೆಯ ಶಿಕ್ಷಕ ರಮೇಶ್‌, ಶ್ರೀನಿವಾಸ ಹಾಗೂ ವಿದ್ಯಾರ್ಥಿಗಳು ಗೀತೆಗಳನ್ನು ಹಾಡಿದರು. ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ಹಾಗೂ ಸಿಹಿ ವಿತರಿಸಲಾಯಿತು.

click me!