'ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಲಿ'

By Kannadaprabha NewsFirst Published Jul 9, 2021, 2:54 PM IST
Highlights

* ಈ ಬಾರಿ ಹೆಚ್ಚಿನ ಅಂತರದಲ್ಲಿ ಬಾದಾಮಿ ಜನ ಗೆಲ್ಲಿಸುತ್ತಾರೆ: ತಿಮ್ಮಾಪುರ
* ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ
* ಕೊರೋನಾಗೆ ಹೆಚ್ಚಿನ ಸಂಖ್ಯೆಗೆ ಬಲಿಯಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ 
 

ಲೋಕಾಪುರ(ಜು.09): ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಅವರು ಈ ನಾಡಿನ ಸಾಮಾಜಿಕ, ನ್ಯಾಯ ಸಿದ್ಧಾಂತ ಧೀಮಂತ ನಾಯಕರಾಗಿದ್ದಾರೆ. ಅವರು ಎಲ್ಲೇ ನಿಂತರು ಜಯ ಸಾಧಿಸಲಿದ್ದಾರೆ. ಮತ್ತೊಮ್ಮೆ ಬಾದಾಮಿ ಮತಕ್ಷೇತ್ರದಲ್ಲಿಯೇ ನಿಲ್ಲಬೇಕೆಂದು ಈ ಭಾಗದ ನಾಯಕರ ಒತ್ತಾಯವಾಗಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಆರ್‌.ಬಿ.ತಿಮ್ಮಾಪುರ ಹೇಳಿದ್ದಾರೆ. 

ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾದಾಮಿ ಮತಕ್ಷೇತ್ರದಾದ್ಯಂತ ಮಾಡಿದ ಅಭಿವೃದ್ಧಿ ಕೆಲಸಗಳಾದ, ನೀರಾವರಿ ಯೋಜನೆಗಳು, ಕುಡಿಯುವ ನೀರಿನ ಯೋಜನೆಗಳು, ರಸ್ತೆಗಳ ಅಭಿವೃದ್ಧಿ ಮುಂತಾದ ಜನಪರ ಕೆಲಸಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಸರ್ವಜನಾಂಗದವರು ಮುಂದಿನ ಬಾರಿ ಹೆಚ್ಚಿನ ಅಂತರದಲ್ಲಿ ಬಾದಾಮಿ ಜನ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಜನರ ಸಾವಿಗೆ ಸರ್ಕಾರವೇ ಕಾರಣ:

ಯಡಿಯೂರಪ್ಪ ಸರ್ಕಾರ ದಿವಾಳಿ ಸರ್ಕಾರವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಕೋವಿಡ್‌ ನಿರ್ವಹಣೆ ಮಾಡಲು ರಾಜ್ಯ ಸರ್ಕಾರ ವಿಫಲವಾಗಿದೆ. ಕೊರೋನಾದಿಂದ ಸಾವಿರಾರು ಜನ ಸಾವಿಗೀಡಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಕೊರೋನಾಗೆ ಹೆಚ್ಚಿನ ಸಂಖ್ಯೆಗೆ ಬಲಿಯಾಗಲು ಜಿಲ್ಲಾಡಳಿತ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಟೀಕಿಸಿದ್ದಾರೆ. 

ಮುಂದಿನ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ಪ್ರಕಟಿಸಿದ ಸಿದ್ದರಾಮಯ್ಯ

ಪ್ರಥಮ ಅಲೆ ಬಂದ ನಂತರ ಎರಡನೇ ಅಲೆ ಬರುತ್ತದೆ ಎಂದು ಗೊತ್ತಿದ್ದರೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಲಿ, ಜಿಲ್ಲಾಧಿಕಾರಿಗಳಾಗಿ ಪೂರ್ವತಯಾರಿ ಸಭೆಗಳನ್ನು ನಡೆಸದೆ ನಿರ್ಲಕ್ಷ್ಯಮಾಡಿದ್ದು ದುರ್ದೈವದ ಸಂಗತಿ. ಆಕ್ಸಿಜನ್‌ ಮತ್ತು ವೆಂಟಿಲೇಟರ್‌ ಸಿಗಲಾರದೆ ಎಷ್ಟು ಜನ ಸಾವಿಗೀಡಾಗಿದ್ದಾರೆ ಇದಕ್ಕೆ ಸರ್ಕಾರವೇ ಹೊಣೆ ಎಂದು ಆರೋಪಿಸಿದ್ದಾರೆ. 

ಬಡತನ ಮತ್ತು ಹಸಿವನ್ನು ತಿಳಿದಂತಹ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಲಿ. ಬಡವರ ಹಸಿವನ್ನು ಇಂಗಿಸಲು ಪ್ರಾರಂಭವಾದ ಇಂದಿರಾ ಕ್ಯಾಂಟಿನ್‌ ಬಗ್ಗೆ ದುರಂಹಕಾರದ ಮತ್ತು ಅಹಂಕಾರದ ಮಾತುಗಳನ್ನು ಆಡುವುದನ್ನು ಬಿಟ್ಟು ಮುಧೋಳದಲ್ಲಿರುವ ಇಂದಿರಾ ಕ್ಯಾಂಟಿನ್‌ ಬೇಗ ಪ್ರಾರಂಭಿಸಲಿ ಎಂದು ಒತ್ತಾಯಿಸಿದರು.

ನಿರೀಕ್ಷೆ ಸುಳ್ಳಾಗಿಸಿದ ಮೋದಿ:

ಕೇಂದ್ರದ ಮೋದಿ ಸರ್ಕಾರ ಬಡವರ, ರೈತರ, ಕೂಲಿಕಾರ್ಮಿಕರ, ಬೀದಿ ವ್ಯಾಪಾರಸ್ಥರ ಜನ ವಿರೋಧಿ ಸರ್ಕಾರವಾಗಿದೆ. ದಿನಂಪ್ರತಿ ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌ಗಳ ಬೆಲೆಯನ್ನು ಏರಿಸಿ ಬಡವರ ಜೀವನ ಜೊತೆ ಆಟವಾಡುತ್ತಿದೆ. ದೇಶದ ಯುವಕರು, ಬಂಡವಾಳ ಹೂಡಿಕೆದಾರರು, ಕೈಗಾರಿಕೆ ಉದ್ಯಮಿಗಳು, ಮೋದಿಯವರ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ನಿರೀಕ್ಷೆ ಸುಳ್ಳಾಗಿದೆ. ಮೋದಿಯವರು ಅದಾನಿ ಮತ್ತು ಅಂಬಾನಿಯವರನ್ನು ಮಾತ್ರ ವಿಶ್ವದಲ್ಲಿಯೇ ಶ್ರೀಮಂತರನ್ನಾಗಿ ಮಾಡಿ ದೇಶವನ್ನು ಬಡತನಕ್ಕೆ ಕೊಂಡೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಲೋಕಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಲೋಕಣ್ಣ ಕೊಪ್ಪದ, ಮಾಜಿ ಜಿಪಂ ಸದಸ್ಯ ಭೀಮಶೆಪ್ಪ ಹಲಕಿ, ಮಾಜಿ ತಾಪಂ ಸದಸ್ಯ ರಫೀಕ ಭೈರಕದಾರ, ಗೋವಿಂದಪ್ಪ ಕೌಲಗಿ, ಪಿಕೆಪಿಎಸ್‌ ಅಧ್ಯಕ್ಷ ಆನಂದ ಹಿರೇಮಠ, ಕೃಷ್ಣಾ ಜಟ್ಟೆನ್ನವರ, ರವಿ ರೊಡ್ಡಪ್ಪನವರ, ಕೃಷ್ಣಾ ಹೂಗಾರ, ನಾಗರಾಜ ಜೀರಗಾಳ ಇತರರು ಇದ್ದರು.
 

click me!