ಸಿದ್ದರಾಮಯ್ಯ ಹಿಂದುತ್ವದ ಕಟ್ಟಾ ವಿರೋಧಿ: ಮುತಾಲಿಕ್ ವಾಗ್ದಾಳಿ

By Kannadaprabha NewsFirst Published Jan 6, 2024, 10:08 PM IST
Highlights

ಸಿದ್ದರಾಮಯ್ಯ ತಮ್ಮನ್ನು ತಾವು ಕಟ್ಟಾ ಹಿಂದುತ್ವದ ವಿರೋಧಿಯೆಂಬಂತೆ ತೋರಿಸಿಕೊಳ್ಳುತ್ತಿದ್ದಾರೆ. ಕೇಸರಿ ಪೇಟ, ತಿಲಕ ಇಟ್ಟುಕೊಳ್ಳುವುದಿಲ್ಲ. ಹಿಂದೂಗಳ ಆಚರಣೆಯನ್ನೇ ಸಿಎಂ ಸಿದ್ದರಾಮಯ್ಯ ವಿರೋಧ ಮಾಡುತ್ತಾರೆ. ವಿಜಯಪುರದಲ್ಲಿ ದೇವಸ್ಥಾನದ ಉದ್ಘಾಟನೆಗೆಂದು ಹೋಗಿ, ದೇವಸ್ಥಾನದ ಒಳಗೂ ಹೋಗಿಲ್ಲ ಎಂದು ಹರಿಹಾಯ್ದ ಪ್ರಮೋದ ಮುತಾಲಿಕ್ 

ದಾವಣಗೆರೆ(ಜ.06):  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಇದೀಗ ರೌಡಿ ಶೀಟರ್‌, ಗೂಂಡಾ ಕಾಯ್ದೆ, ಗಡಿಪಾರು ಕೆಲಸಗಳು ಶುರುವಾಗಿವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿಯಲ್ಲಿ 31 ವರ್ಷ ಹಿಂದಿನ ಕರ ಸೇವಕರ ಹಳೆ ಕೇಸ್‌ಗಳಿಗೆ ಮರುಜೀವ ನೀಡುವ ಕೆಲಸ ಮಾಡುತ್ತಿದೆ ಎಂದರು. ಕಾಂಗ್ರೆಸ್ ಯಾವಾಗಲೂ ಹಿಂದುತ್ವ ವಿರೋಧ ಮಾಡುತ್ತಾ ಬಂದಿದೆ. ಆದರೆ, ಸಿದ್ದರಾಮಯ್ಯ ತಮ್ಮನ್ನು ತಾವು ಕಟ್ಟಾ ಹಿಂದುತ್ವದ ವಿರೋಧಿಯೆಂಬಂತೆ ತೋರಿಸಿಕೊಳ್ಳುತ್ತಿದ್ದಾರೆ. ಕೇಸರಿ ಪೇಟ, ತಿಲಕ ಇಟ್ಟುಕೊಳ್ಳುವುದಿಲ್ಲ. ಹಿಂದೂಗಳ ಆಚರಣೆಯನ್ನೇ ಸಿಎಂ ಸಿದ್ದರಾಮಯ್ಯ ವಿರೋಧ ಮಾಡುತ್ತಾರೆ. ವಿಜಯಪುರದಲ್ಲಿ ದೇವಸ್ಥಾನದ ಉದ್ಘಾಟನೆಗೆಂದು ಹೋಗಿ, ದೇವಸ್ಥಾನದ ಒಳಗೂ ಹೋಗಿಲ್ಲ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ದೇಶಭಕ್ತರ ಪರವೋ, ಭಯೋತ್ಪಾದಕರ ಪರವೋ ಸ್ಪಷ್ಟಪಡಿಸಲಿ: ರೇಣುಕಾಚಾರ್ಯ

ಬಿ.ಕೆ.ಹರಿಪ್ರಸಾದ, ಸಿದ್ದರಾಮಯ್ಯ ಪುತ್ರ ಯತೀಂದ್ರ ಮಾತನಾಡಿದ್ದನ್ನೂ ನಾನು ನೋಡಿದ್ದೇನೆ. ಗೋದ್ರಾ ರೀತಿ ಆಗುತ್ತದೆಂಬ ಹೇಳಿಕೆ ನೀಡಿರುವ ಬಿ.ಕೆ.ಹರಿಪ್ರಸಾದ್ ಬಳಿ ಮಾಹಿತಿ ಇದ್ದರೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ನೀಡಬೇಕಿತ್ತು. ಈ ರೀತಿ ಸಾಮಾನ್ಯ ಜನರು ಹೇಳಿದರೆ, ನೀವು ಸುಮ್ಮನೆ ಬಿಡುತ್ತಿದ್ದಿರಾ? ಎಂದು ಕಿಡಿಕಾರಿದರು.

ಯತೀಂದ್ರ ಇದೇ ಮಾತನ್ನು ಮುಸ್ಲಿಂ ರಾಷ್ಟ್ರ ಪಾಕಿಸ್ಥಾನದಲ್ಲಿ ಹೇಳಿದ್ದರೆ ಅಲ್ಲೇ ಗುಂಡು ಹೊಡೆದಿರುತ್ತಿದ್ದರು. ಪಾಕಿಸ್ಥಾನದಲ್ಲಿ ಗಲಭೆ, ಕೊಲೆ ನಡೆಯುತ್ತವೆಂಬುದು ಒಪ್ಪಿಕೊಂಡಂತಾಯಿತು. ಮುಸ್ಲಿಂ ಓಟುಗಳಿಗಾಗಿ ಹಿಂದೂಗಳನ್ನು ಅವಹೇಳನ ಮಾಡುವ ನೀಚ ಬುದ್ಧಿಯ ಕಾಂಗ್ರೆಸ್ಸಿಗರು ಬಿಡಬೇಕು. ಅಪಘಾನಿಸ್ಥಾನ, ಪಾಕಿಸ್ಥಾನ ಹುಟ್ಟುವ ಮುನ್ನವೇ ಭಾರತ ಹಿಂದು ರಾಷ್ಟ್ರವಾಗಿತ್ತು. ಇಲ್ಲಿ ಜಾತ್ಯತೀತತೆ, ಸಮಾನತೆ, ಏಕತೆ ಇದೆ. ಎಲ್ಲಾ ಭಾರತೀಯ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಒಟ್ಟಾಗಿರುವ ಹಿಂದು ರಾಷ್ಟವನ್ನು ಕಟ್ಟುತ್ತೇವೆ. ತಾಕತ್ತಿದ್ದರೆ ಸಿದ್ದರಾಮಯ್ಯ, ಯತೀಂದ್ರ, ಕಾಂಗ್ರೆಸ್ಸಿನವರು ತಡೆಯಲಿ ನೋಡೋಣ ಎಂದು ಸವಾಲು ಹಾಕಿದರು.

click me!