ಆಪ್ತ ಮಹದೇವಪ್ಪ‌ ಮೇಲೆ ಸಿಟ್ಟು ಇನ್ನೂ ಕರಗಿಲ್ವಾ? ಜಮೀರ್ ಮಾತು ಕೇಳಿಯೂ ಕೇಳಿಸದ ರೀತಿ ನಟಿಸಿದ ಸಿದ್ದರಾಮಯ್ಯ!

Published : Nov 26, 2026, 01:33 PM IST
Siddaramaiah HC mahadevappa

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ನಡುವಿನ ಸಂಬಂಧದಲ್ಲಿ ಎಲ್ಲವೂ ಸರಿಹೋಗಿದೆಯೇ ಎಂಬ ಪ್ರಶ್ನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ತಮ್ಮೊಂದಿಗೆ ಉಪಾಹಾರಕ್ಕೆ ಬಂದ ನಾಯಕರ ಪಟ್ಟಿಯಲ್ಲಿ ಮಹದೇವಪ್ಪ ಅವರ ಹೆಸರನ್ನು ಉಲ್ಲೇಖಿಸದಿರುವುದು ಕುತೂಹಲ ಮೂಡಿಸಿದೆ.

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಪ್ತ, ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ನಡುವಿನ ಸಂಬಂಧದಲ್ಲಿನ ಬಿರುಕಿನ ಕುರಿತು ಹರಿದಾಡುತ್ತಿರುವ ಊಹಾಪೋಹಗಳಿಗೆ ಮತ್ತಷ್ಟು ಬಲ ಸಿಕ್ಕಿದೆ. ಮೈಸೂರಿನಲ್ಲಿ ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಡಾ. ಮಹದೇವಪ್ಪ ಅವರ ಹೆಸರನ್ನು ಪ್ರಸ್ತಾಪಿಸಲು ಸ್ಪಷ್ಟವಾಗಿ ನಿರಾಕರಿಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಉಪಾಹಾರ ಕೂಟದ ವಿವರಣೆ ನೀಡುವಾಗಲೂ ಮೌನ

ಸಂವಿಧಾನ ದಿನಾಚರಣೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ತಮ್ಮ ಮನೆಯಲ್ಲಿ ನಡೆದ ಉಪಾಹಾರ ಕೂಟದ ಕುರಿತು ಮಾಹಿತಿ ನೀಡಿದರು. ಈ ಉಪಾಹಾರ ಕೂಟದಲ್ಲಿ ಹರಿಪ್ರಸಾದ್, ನರೇಂದ್ರ ಸ್ವಾಮಿ, ಜಮೀರ್ ಅಹಮದ್ ಮತ್ತು ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು ಎಂದು ಅವರು ಪಟ್ಟಿ ಮಾಡಿದರು. ಆದರೆ, ಈ ಪಟ್ಟಿಯಲ್ಲಿ ಡಾ. ಎಚ್.ಸಿ. ಮಹದೇವಪ್ಪ ಅವರ ಹೆಸರನ್ನು ಉದ್ದೇಶಪೂರ್ವಕವಾಗಿಯೇ ಕೈಬಿಟ್ಟರು.

ಜಮೀರ್ ಸೂಚನೆಗೂ ಕ್ಯಾರೇ ಎನ್ನದ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಮಹದೇವಪ್ಪ ಅವರ ಹೆಸರನ್ನು ಹೇಳದೇ ಮುಂದುವರಿಯುತ್ತಿದ್ದಾಗ, ಪಕ್ಕದಲ್ಲೇ ಇದ್ದ ಶಾಸಕ ಜಮೀರ್ ಅಹಮದ್ ಖಾನ್, "ಮಹದೇವಪ್ಪ ಅವರ ಹೆಸರು ಹೇಳಿ" ಎಂದು ಪರೋಕ್ಷವಾಗಿ ಸೂಚನೆ ನೀಡಿದರು. ಆದರೆ, ಜಮೀರ್ ಅಹಮದ್ ಅವರ ಮಾತನ್ನು ಕೇಳಿಯೂ ಕೇಳದಂತೆ ನಟಿಸಿದ ಸಿದ್ದರಾಮಯ್ಯ, ತಮ್ಮ ಮಾತನ್ನು ಮುಂದುವರಿಸಿದರು. ಮಾಧ್ಯಮದವರು ಮತ್ತೆ ಮತ್ತೆ ಪ್ರಶ್ನಿಸಿದರೂ, "ಅವರು ಮೈಸೂರು ಜಿಲ್ಲೆಯ ಶಾಸಕರು ತಾನೇ, ಅದಕ್ಕೆ ಬಂದಿದ್ದರು" ಎಂದು ಮಾತ್ರ ಹೇಳಿ, ಮಹದೇವಪ್ಪ ಅವರ ಹೆಸರನ್ನು ಉಚ್ಚರಿಸದೆ ಜಾರಿಕೊಂಡರು. ಸಿದ್ದರಾಮಯ್ಯ ಅವರ ಈ ವರ್ತನೆ, ಇಬ್ಬರ ನಡುವಿನ ಮುನಿಸು ಇನ್ನೂ ಶಮನವಾಗಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದೆ. ಇನ್ನು ಬುಧವಾರವಾದ ನಿನ್ನೆ ಮಹದೇವಪ್ಪ ಅವರು ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದ್ದರು. ಮಾತುಕತೆ ನಡೆಸಿದ್ರೂ ಮುನಿಸು ಮುಗಿದಿಲ್ವ?

ಈ ವೇಳೆ ಪರಸ್ಪರ ಕೈ ಕುಲುಕಲು ಸಿದ್ದರಾಮಯ್ಯ, ಮಹದೇವಪ್ಪ ಹಿಂದೇಟು ಹಾಕಿದ್ದರು. ಸಿದ್ದರಾಮಯ್ಯ ಭೇಟಿ ಬಳಿಕ ಕೈ ಹಿಡಿದು ಥ್ಯಾಂಕ್ಸ್ ಹೇಳುವಂತೆ ಮಹದೇವಪ್ಪ‌ಗೆ ಸಚಿವ ಜಮೀರ್ ಹೇಳಿದರು. ಈ ವೇಳೆ ನಮ್ಮಲ್ಲಿ ಆ ತರಹದ ಯಾವ ಫಾರ್ಮಲಿಟಿಸ್ ಇಲ್ಲ. ನಾವು ಯಾವತ್ತು ಫಾರ್ಮಲಿಟಿಸಿ ಮಾಡಿಕೊಂಡೇ ಇಲ್ಲ ಎಂದು ಮಹದೇವಪ್ಪ ಹೇಳಿದರು. ಈ ವೇಳೆ ಮಹದೇವಪ್ಪ‌ನ ಆಪ್ತ ಸಹಾಯಕನ ಬಗ್ಗೆ ಸಿದ್ದರಾಮಯ್ಯ ಹಾಸ್ಯ ಮಾಡಿದರು. ಇವನು ನಮ್ಮ ಕ್ಷೇತ್ರದವನು. ಆದರೆ ಇರೊದು ಮಾತ್ರ ಮಹದೇವಪ್ಪನ ಜೊತೆ ಎಂದು ಸಿದ್ದರಾಮಯ್ಯ ನಕ್ಕರು. ಈ ಹಾಸ್ಯದ ಮಾತಿನ ನಡುವೆ ಕೈ ಕುಲುಕುವ ವಿಚಾರವನ್ನೇ ಉಭಯ ನಾಯಕರು ಮರೆಸಿದರು.

ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ

ಇನ್ನು ಸಂವಿಧಾನ ದಿನದ ಅಂಗವಾಗಿ ಮೈಸೂರಿನ ಗನ್ ಹೌಸ್ ವೃತ್ತದ ಬಳಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧಿ ಪ್ರತಿಮೆಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್, ನರೇಂದ್ರ ಸ್ವಾಮಿ, ಶಾಸಕ ತನ್ವೀರ್ ಸೇಠ್ ಮತ್ತು ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಬಿಜೆಪಿಗೆ ಸಂವಿಧಾನದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಸಂವಿಧಾನ ದಿನವನ್ನು ಹೇಗೆ ಆಚರಿಸಬೇಕು ಎಂದು ಬಿಜೆಪಿಯವರಿಂದ ಪಾಠ ಕಲಿಯುವ ಅಗತ್ಯ ನಮಗಿಲ್ಲ. ಸಂವಿಧಾನ ವಿರೋಧಿಗಳೇ ಬಿಜೆಪಿಗರು, ಎಂದು ಅವರು ಕಿಡಿಕಾರಿದರು. ಅಲ್ಲದೆ, ಆರ್‌ಎಸ್‌ಎಸ್ ಯಾವಾಗಲೂ ಸಂವಿಧಾನಕ್ಕೆ ವಿರುದ್ಧವಾಗಿತ್ತು. ಆರ್‌ಎಸ್‌ಎಸ್‌ನ ಮೊದಲ ಅಧ್ಯಕ್ಷನೇ ಸಂವಿಧಾನವನ್ನು ಮೊದಲು ವಿರೋಧಿಸಿದ್ದು. ಇಂತಹವರು ನಮಗೆ ಪಾಠ ಹೇಳುತ್ತಾರೆಯೇ? ಎಂದು ಪ್ರಶ್ನಿಸಿದರು. ಕಾರ್ಯಕ್ರಮದ ಭಾಗವಾಗಿ, ಗನ್ ಹೌಸ್ ವೃತ್ತದಿಂದ ಮಹಾರಾಜ ಗ್ರೌಂಡ್ ವರೆಗೆ ಸಂವಿಧಾನ ಪೀಠಿಕೆ, ಸ್ತಬ್ಧಚಿತ್ರಗಳು ಮತ್ತು ಕಲಾ ತಂಡಗಳ ಭವ್ಯ ಮೆರವಣಿಗೆ ನಡೆಯಿತು.

PREV
Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿನ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಸಚಿವ ಈಶ್ವರ್ ಖಂಡ್ರೆ!
ಮಂತ್ರ ಮಾಂಗಲ್ಯದಲ್ಲೇ ಮಂಡ್ಯ ಹುಡುಗಿ ಡಾ. ಶ್ರೀನಿಧಿ ವರಿಸಿದ ಶಾಸಕ ದರ್ಶನ್ ಧ್ರುವನಾರಾಯಣ! ಡಿಸಿಎಂ ಹಾಜರು