
ಕಾಗವಾಡ/ಅಥಣಿ(ಆ.02): ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ನಡೆದ ಸಕ್ಕರೆ ಕಾರ್ಖಾನೆಯ ಕಾರ್ಯಕ್ರಮವೊಂದರಲ್ಲಿ ಜವಳಿ ಸಚಿವ ಶ್ರೀಮಂತ ಪಾಟೀಲ್ ಮರಾಠಿಯಲ್ಲಿ ಮಾತನಾಡಿರುವ ವಿಚಾರ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ವಿವಾದದ ಸ್ವರೂಪ ತಳೆಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಶ್ರೀಮಂತ ಪಾಟೀಲ್, ತಮ್ಮ ನಡೆಗೆ ಕ್ಷಮೆಯಾಚಿಸಿದ್ದಾರೆ.
ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಹೊರವಲಯದಲ್ಲಿ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಮಹಾರಾಷ್ಟ್ರದ ಕೃಷಿ ಮಂತ್ರಿ ವಿಶ್ವಜೀತ ಕದಂ, ಅಲ್ಲಿನ ವಿಧಾನ ಪರಿಷತ್ ಸದಸ್ಯ ಮೋಹನರಾವ್ ಕದಂ, ಜತ್ತ ಶಾಸಕ ವಿಕ್ರಮ ಸಾವಂತ್, ಸಚಿವ ಶ್ರೀಮಂತ ಪಾಟೀಲ, ಕಾರ್ಖಾನೆ ಯುನಿಟ್ ಚೇರ್ಮನ್ ರಘುನಾಥ್ ಸೇರಿ ಹಲವರು ಉಪಸ್ಥಿತರಿದ್ದರು. ಇದು ಮಹಾರಾಷ್ಟ್ರ ಸಚಿವರ ಕಾರ್ಖಾನೆಯಾಗಿದ್ದರಿಂದ ಕಾರ್ಯಕ್ರಮದಲ್ಲಿ ಮರಾಠಿ ನಾಮಫಲಕವನ್ನೇ ಅಳವಡಿಸಲಾಗಿತ್ತು. ಕನ್ನಡ ನೆಲದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಕ್ಷರಶಃ ಕನ್ನಡವೇ ಮಾಯವಾಗಿತ್ತು.
ಸಿಗದ ರಿಲೀವಿಂಗ್ ಆರ್ಡರ್: ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ ಯತ್ನ
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮಂತ ಪಾಟೀಲ, ಆರಂಭದಲ್ಲಿ ಮರಾಠಿಯಲ್ಲಿ ತಮ್ಮ ಭಾಷಣ ಪ್ರಾರಂಭಿಸಿ ಬಳಿಕ ಕನ್ನಡದಲ್ಲಿ ಮಾತು ಮುಂದುವರೆಸಿದ್ದರು. ಪಾಟೀಲರು ಮರಾಠಿಯಲ್ಲಿ ಮಾತನಾಡಿರುವುದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ.
ಸಚಿವರ ಸ್ಪಷ್ಟನೆ: ತಮ್ಮ ನಡೆ ತೀವ್ರ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಶ್ರೀಮಂತ ಪಾಟೀಲ ಅವರು, ಅದೊಂದು ಖಾಸಗಿ ಕಾರ್ಯಕ್ರಮವಾಗಿದ್ದು ಅಲ್ಲಿದ್ದ ಮಹಾರಾಷ್ಟ್ರ ಸಚಿವರಿಗೆ ಕನ್ನಡ ಬರುವುದಿಲ್ಲ. ಹಾಗಾಗಿ ಬಳ್ಳಿಗೇರಿಯಲ್ಲಿ ಸದ್ಯ ಆರಂಭ ಆಗುತ್ತಿರುವ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಿ ಎಂದು ಮರಾಠಿಯಲ್ಲಿ ಮನವರಿಕೆ ಮಾಡಿದ್ದೇನೆ. ಯಾರೂ ತಪ್ಪಾಗಿ ಭಾವಿಸಬಾರದು. ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.