ವರ್ಷದ ಒಂದು ದಿನ ಈ ಉತ್ಸವಕ್ಕೆ ನಿಗದಿಯಾಗಲಿ: ಶ್ರೀದಯಾನಂದ ಪುರಿ ಮಹಾಸ್ವಾಮೀಜಿ|ಹಂಪಿ ಉತ್ಸವದ ದಿನಾಂಕ ಪದೇ ಪದೇ ಬದಲಾವಣೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸ್ವಾಮೀಜಿ|ವಿಜಯನಗರ ಜಿಲ್ಲೆಯ ರಚನೆಗೆ ಸ್ವಾಗತಾರ್ಹ| ಹೊಸಪೇಟೆ ತಾಲೂಕು ಜಿಲ್ಲೆಯಾಗುವಂತಹ ಎಲ್ಲ ಲಕ್ಷಣಗಳನ್ನು ಹೊಂದಿದೆ|
ಹೊಸಪೇಟೆ[ಜ.03]: ಮೈಸೂರು ದಸರಾ ಉತ್ಸವದಂತೆ ಹಂಪಿ ಉತ್ಸವಕ್ಕೆ ಒಂದು ದಿನ ನಿಗದಿಪಡಿಸಿ, ಹಂಪಿ ಉತ್ಸವವನ್ನು ನಡೆಸಿದರೆ ಉತ್ತಮ. ಸರ್ಕಾರಗಳು ಅವರ ಇಚ್ಚೆಯಂತೆ ಹಂಪಿ ಉತ್ಸವ ದಿನಾಂಕವನ್ನು ಬದಲಾಯಿಸುವುದು ಸರಿಯಲ್ಲ. ಒಂದು ನಿಖರವಾದ ದಿನದಿಂದ ಹಂಪಿ ಉತ್ಸವ ನಡೆಸಲು ಮುಂದಾಗಬೇಕು ಎಂದು ಹಂಪಿ ಹೇಮಕೂಟ ಗಾಯತ್ರಿ ಪೀಠದ ಪೀಠಾಧಿಪತಿ ಶ್ರೀದಯಾನಂದ ಪುರಿ ಮಹಾಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದರು.
ಹಂಪಿ ಗಾಯತ್ರಿ ಪೀಠದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿ ಉತ್ಸವದ ರುವಾರಿ ಎಂ.ಪಿ. ಪ್ರಕಾಶ್ ಅವರು, ಹಂಪಿ ಉತ್ಸವವನ್ನು ಪ್ರಾರಂಭಿಸುವಾಗ ಹಂಪಿಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ದಿನಗಳನ್ನು ಆಯ್ಕೆ ಮಾಡಿಕೊಂಡಿದ್ದರು. ನವೆಂಬರ್ ತಿಂಗಳಲ್ಲಿ ಹಂಪಿಗೆ ಪ್ರವಾಸಿಗರು ಹಾಗೂ ಶಾಲಾ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕಾಗಿ ಬರುತ್ತಾರೆ. ಈ ಹಿಂದೆ ವಿಜಯನಗರ ಸಾಮ್ರಾಜ್ಯದಲ್ಲಿ ದಸರಾ ಹಬ್ಬಕ್ಕೆ ವಿಶೇಷವಾಗಿರುವುದರಿಂದ ಈ ಹಿನ್ನೆಲೆಯಿಂದ ಹಂಪಿ ಉತ್ಸವವನ್ನು ನವೆಂಬರ್ 3, 4 ಮತ್ತು 5ರಂದು ಮೂರು ದಿನಗಳ ಕಾಲ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, ಈಗ ಹಂಪಿ ಉತ್ಸವದ ದಿನಾಂಕ ಪದೇ ಪದೇ ಬದಲಾವಣೆ ಆಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಂದಿನ ದಿನಗಳಲ್ಲಿ ಮೈಸೂರು ದಸರಾ ರೀತಿ ಒಂದು ದಿನಾಂಕ ನಿಗದಿಪಡಿಸಿ ಹಂಪಿ ಉತ್ಸವ ಆಚರಿಸಲು ಮುಂದಾಗಬೇಕು. ಹಂಪಿಗೆ ಮಹತ್ವದ ಇತಿಹಾಸ ಇದೆ. ಹಂಪಿ ಉತ್ಸವದ ದಿನಾಂಕವನ್ನು ಸರ್ಕಾರ ಸರಿಯಾಗಿ ನಿರ್ಧರಿಸಿ ಆಚರಿಸಿದರೆ, ಉತ್ಸವಕ್ಕೆ ಬರುವಂತಹ ಜನರಿಗೂ ಅನುಕೂಲವಾಗಿ ಪರಿಣಮಿಸುತ್ತದೆ. ಬರುವ ದಿನಗಳಲ್ಲಾದರೂ, ಈ ರೀತಿ ಉತ್ಸವ ನಡೆಸಲಿ ಎನ್ನುವುದು ನಮ್ಮ ಕಳಕಳಿಯಾಗಿದೆ ಎಂದು ಅವರು ಹೇಳಿದರು.
ಹೊಸಪೇಟೆ ತಾಲೂಕು ಜಿಲ್ಲೆಯಲ್ಲಿ ಅತ್ಯಂತ ಹಿಂದಳಿದ ಪ್ರದೇಶವಾಗಿದ್ದು, ಹೊಸಪೇಟೆ ತಾಲೂಕುನ್ನು ಕೇಂದ್ರವನ್ನಾಗಿಸಿಕೊಂಡು ವಿಜಯನಗರ ಜಿಲ್ಲೆಯ ರಚನೆಗೆ ಸ್ವಾಗತಾರ್ಹವಾಗಿದೆ. ಹೊಸಪೇಟೆ ತಾಲೂಕು ಜಿಲ್ಲೆಯಾಗುವಂತಹ ಎಲ್ಲ ಲಕ್ಷಣಗಳನ್ನು ಹೊಂದಿದೆ. ಜಿಲ್ಲೆಯಾದರೆ ಹೊಸಪೇಟೆ ಸೇರಿದಂತೆ ಈಗ ಭಾಗದ ತಾಲೂಕುಗಳು ಅಭಿವೃದ್ದಿ ಹೊಂದಲಿವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಜಯನಗರ ಜಿಲ್ಲೆಯನ್ನಾಗಿ ಘೋಷಣೆ ಮಾಡಿದರೆ ಅನುಕೂಲವಾಗುತ್ತದೆ ಎಂದರು.
ಹಂಪಿಗೆ ವಿಶ್ವದ ಬೇರೆ ಬೇರೆ ದೇಶಗಳಿಂದ ಮತ್ತು ದೇಶದ ಇತರೆ ರಾಜ್ಯಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಆದರೆ ಹಂಪಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಹಂಪಿಗೆ ಬರುವ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಂಪಿಯಲ್ಲಿ ಶುದ್ಧವಾದ ಕುಡಿಯುವ ನೀರು, ವಸತಿ ಸೌಲಭ್ಯ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ರೂಪಿಸಬೇಕು. ಆಗ ಹಂಪಿಗೆ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರಲು ಅನುಕೂಲವಾಗುತ್ತದೆ ಎಂದರು.