
ಭದ್ರಾವತಿ (ನ.7): ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ ಜೆ.ನಾಗೇಂದ್ರರವರ ಪುತ್ರಿ, ಶ್ರೇಯಾ ಎನ್. ಗೌಡ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆಯುವ ಮೂಲಕ ಉಕ್ಕಿನ ನಗರದ ಕೀರ್ತಿಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ.
ಶ್ರೇಯಾ ಅವರ ತಾಯಿ ಡಾ. ಬಿ.ಎಂ. ಆಶಾ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೇಯಾ ಅವರು ೧ರಿಂದ ೧೦ನೇ ತರಗತಿವರೆಗೆ ಭದ್ರಾವತಿ ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ (ಬಿಜಿಎಸ್) ಶಾಲೆಯಲ್ಲಿ ವ್ಯಾಸಾಂಗ ಮಾಡಿದ್ದು, ನಂತರ ಬೆಂಗಳೂರಿನ ರಾಜಾಜಿನಗರದ ಬೇಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ, ಪ್ರಸ್ತುತ ಮಂಗಳೂರಿನ ಸುರತ್ಕಲ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ಬಾಲ್ಯದಿಂದಲೂ ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಬೇಕೆಂಬ ಕನಸು ಹೊಂದಿದ್ದ ಶ್ರೇಯಾ ಅವರಿಗೆ ೮ನೇ ತರಗತಿಯಲ್ಲಿ ಓದುತ್ತಿದ್ದಾಗ ಎನ್‌ಡಿಎಯಲ್ಲಿ ಮಹಿಳೆಯರಿಗೂ ಅವಕಾಶ ಕಲ್ಪಿಸಿರುವ ವಿಷಯ ತಿಳಿದಿತ್ತು. ಅಂದಿನಿಂದಲೇ ಎನ್‌ಡಿಎ ಸೇರುವ ಗುರಿಯೊಂದಿಗೆ ತಯಾರಿ ನಡೆಸಿದ್ದ ಅವರು, ಮೊದಲ ಪ್ರಯತ್ನದಲ್ಲೇ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.