
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ದೇಜಪ್ಪ ಮೂಲ್ಯ ಎಂಬವರ ದನದ ಹಟ್ಟಿಯಿಂದ ಗಬ್ಬದ ದನವನ್ನು ಕದ್ದೊಯ್ದ ಹಂತಕರು, ಅವರ ಜಮೀನಿನಲ್ಲೇ ಹತ್ಯೆ ಮಾಡಿ ಮಾಂಸವನ್ನು ಸಾಗಿಸಿದ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ. ಈ ಬಗ್ಗೆ ಗೀತೇಶ್ ಕೆ. ಎಂಬವರು ಪೊಲೀಸರಿಗೆ ದೂರು ನೀಡಿದ್ದು, ತನ್ನ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಹಸು ಮುಂಜಾನೆ ೬.೩೦ರ ಸಮಯಕ್ಕೆ ಹಟ್ಟಿಗೆ ಹೋಗಿ ನೋಡಿದಾಗ ನಾಪತ್ತೆಯಾಗಿತ್ತು. ಹುಡುಕಾಟ ನಡೆಸಿದಾಗ ತಮ್ಮ ಜಮೀನಿನಲ್ಲಿಯೇ ಹಸುವಿನ ಚರ್ಮ, ಮತ್ತದರ ಅಂಗಾಂಗಗಳು ಬಿದ್ದಿರುವುದು ಕಂಡು ಬಂದಿದೆ. ಹಂತಕರು ಹಟ್ಟಿಯಿಂದ ದನವನ್ನು ಕದ್ದೊಯ್ದು, ತಮ್ಮ ಜಮೀನಿನಲ್ಲಿಯೇ ಹತ್ಯೆ ಮಾಡಿ ಅದರ ಮಾಂಸವನ್ನು ಸಾಗಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ನಾಯಕರಾದ ಅರುಣ್ ಕುಮಾರ್ ಪುತ್ತಿಲ, ನರಸಿಂಹ ಮಾಣಿ, ರಾಜ್‌ಪೂತ್ ಕಲ್ಲಡ್ಕ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಸಮಾಜದ ಶಾಂತಿ ಕದಡುವ ಇಂತಹ ಕೃತ್ಯಗಳ ವಿರುದ್ಧ ಪೊಲೀಸರು ನಿಷ್ಪಕ್ಷಪಾತಿಯಾಗಿ ವರ್ತಿಸಬೇಕೆಂದು ಆಗ್ರಹಿಸಿದ್ದಾರೆ.
ಪುತ್ತೂರು: ಮದುವೆಯಾಗುವ ಭರವಸೆ ನೀಡಿ ಅಪ್ರಾಪ್ತ ಬಾಲಕಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿಸಿದ ಆರೋಪದಡಿ ಬಂಧಿತನಾಗಿದ್ದ ಪುತ್ತೂರು ತಾಲೂಕಿನ ಕೆಯ್ಯೂರು ಎಂಬಲ್ಲಿನ ನಿವಾಸಿಗೆ ಪುತ್ತೂರಿನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕೆಯ್ಯೂರು ಗ್ರಾಮದ ಸಂತೋಷಗರ ಎಂಬಲ್ಲಿನ ನಿವಾಸಿ ಯತೀಂದ್ರ ಕುಮಾರ್ ಎಂಬಾತ ಪ್ರಕರಣದ ಆರೋಪಿಯಾಗಿದ್ದು, ವಿದ್ಯಾರ್ಥಿನಿ, ಅಪ್ರಾಪ್ತ ಬಾಲಕಿಯು ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಸಂತ್ರಸ್ತೆಯ ದೂರಿನಂತೆ ತಾನು ಶಾಲೆಯಲ್ಲಿ ಕಲಿಯುವಾಗ ಆರೋಪಿಯ ಪರಿಚಯವಾಗಿತ್ತು. ಶಾಲೆಗೆ ರಜೆ ಇದ್ದ ಸಂದರ್ಭ ಆರೋಪಿಯು ಕರೆ ಮಾಡಿ ಮಾತನಾಡಲು ಕರೆಸಿಕೊಂಡಿದ್ದ. ಬಳಿಕ ಗುಡ್ಡೆಗೆ ಕರೆದೊಯ್ದು, ಮದುವೆಯಾಗುವ ಭರವಸೆ ನೀಡಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ಈ ರೀತಿ ಒಂದೆರಡು ಬಾರಿ ನಡೆದಿದ್ದರಿಂದ ಸಂತ್ರಸ್ತೆ ಗರ್ಭಿಣಿಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಆಧಾರದ ಮೇಲೆ ಯತೀಂದ್ರ ಕುಮಾರ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿತ್ತು. ಇದೀಗ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ನೀಡಿದ್ದಾರೆ.