ಕಾಂಗ್ರೆಸ್ ಪಕ್ಷದವರು ತಮ್ಮ ರಾಜಕೀಯ ಬಿಡಬೇಕು. ಕೊರೋನಾ ನಿಯಂತ್ರಣ ಆದ ಮೇಲೆ ಚುನಾವಣೆಯ ಸಂದರ್ಭ ರಾಜಕೀಯ ಮಾಡೋಣ ಎಂದು ಶೋಭಾ ಕರಂದ್ಲಾಜೆ ಮಾಜಿಸಚಿವ ಯು. ಟಿ. ಖಾದರ್‌ಗೆ ಟಾಂಗ್ ಕೊಟ್ಟಿದ್ದಾರೆ.
ಉಡುಪಿ(ಮಾ.22): ‘ಭಾನುವಾರ ಒಂದು ದಿನ ಕರ್ಫ್ಯೂ ವಿಧಿಸುವುದಕ್ಕೆ ಆ ದಿನ ಮಾತ್ರ ಕೊರೋನಾ ವೈರಸ್ ಹರಡುತ್ತದೆಯೇ, ಸೋಮವಾರ ಹರಡುವುದಿಲ್ಲವೇ’ ಎಂದು ಮಾಜಿ ಸಚಿವ ಯು.ಟಿ. ಖಾದರ್ ಅವರ ಟೀಕೆಗೆ ಉತ್ತರಿಸಿದ ಸಂಸದೆ ಶೋಭಾ ಕರಂದ್ಲಾಜೆ, ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದವರು ತಮ್ಮ ರಾಜಕೀಯ ಬಿಡಬೇಕು. ಕೊರೋನಾ ನಿಯಂತ್ರಣ ಆದ ಮೇಲೆ ಚುನಾವಣೆಯ ಸಂದರ್ಭ ರಾಜಕೀಯ ಮಾಡೋಣ ಎಂದರು.
ಭಾನುವಾರ ರಜೆಯಾದ್ದರಿಂದ ಹೆಚ್ಚಿನ ಜನರು ಸಿನೆಮಾ, ಮಾಲ್, ಹೊಟೇಲ್‌ಗಳಿಗೆ ಹೋಗುತ್ತಾರೆ. ಇದರಿಂದ ವೈರಸ್ ಸುಲಭವಾಗಿ ಹರಡುತ್ತದೆ. ಆದ್ದರಿಂದ ಅಂದು ವೈರಸ್ ಹರಡುವುದನ್ನು ತಡೆಯುವುದಕ್ಕೆ ಪ್ರಧಾನಿ ಮೋದಿ ಅವರು ಈ ಕರ್ಫ್ಯೂವನ್ನು ಘೋಷಿಸಿದ್ದಾರೆ. ಇದನ್ನು ಖಾದರ್ ಅರ್ಥ ಮಾಡಿಕೊಳ್ಳಬೇಕು ಎಂದರು.
ಕೊರೋನಾ ಎಫೆಕ್ಟ್: SSLC ಪರೀಕ್ಷೆ ಮುಂದೂಡಿಕೆ
ಈ ವೈರಸ್ ಯಾವುದೇ ಪಕ್ಷ ಅಥವಾ ಧರ್ಮ ನೋಡಿ ದಾಳಿ ಮಾಡುವುದಿಲ್ಲ. ಈ ವೈರಸನ್ನು ತಡೆಯುವುದಕ್ಕೆ ಯುದ್ಧದ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ. ಯುದ್ಧದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಬೆಂಬಲ ನೀಡಬೇಕು. ರಾಜಕೀಯ ಮಾಡಬಾರದು ಎಂದರು.