ಶಿವರಾಮ ಹೆಬ್ಬಾರ್ ಬಿಜೆಪಿಗೆ ಬಂದಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಇರಿಸುಮುರಿಸು| ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಫೋಟೊ ಹಾಕುವ ಆಸೆ ಇನ್ನೂ ಹೋಗಿಲ್ಲ. ಅವರಿಗೆ ಈಗ ಸಿಕ್ಕ ಸಮಯವನ್ನು ಬಳಸಿಕೊಂಡಿದ್ದಾರೆ: ಹೆಬ್ಬಾರ್|
ಶಿರಸಿ(ಜ.25): ತಾಲೂಕಿನ ಕಲಕರಡಿ ಗ್ರಾಮದ ಏತ ನೀರಾವರಿ ಯೋಜನೆ ಉದ್ಘಾಟನೆಗೆ ಕುರಿತಂತೆ ರಸ್ತೆ ಪಕ್ಕದಲ್ಲಿ ಶನಿವಾರ ಅಳವಡಿಸಲಾಗಿದ್ದ ನಾಮಫಲಕ ಸಾರ್ವಜನಿಕರನ್ನು ಆಕರ್ಷಿಸಿದೆ. ಒಂದೇ ಬ್ಯಾನರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿತ್ರ ಇರುವುದು, ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ನವರೋ ಅಥವಾ ಬಿಜೆಪಿಯವರೋ ಎಂಬ ಸಂಶಯ ಮೂಡಿಸುವಂತಿತ್ತು.
ಕಲಕರಡಿಯ ಏತ ನೀರಾವರಿ ಯೋಜನೆ ಶಿವರಾಮ ಹೆಬ್ಬಾರ್ ಅವರ ಯತ್ನದಿಂದಲೇ ಆಗಿದ್ದಾದರೂ ಅವರು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದ ಅವಧಿಯಲ್ಲಿ ಮಂಜೂರಾಗಿತ್ತು. ಈಗ ಅವರು ಬಿಜೆಪಿಗೆ ಬಂದಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಇರಿಸುಮುರಿಸು ಉಂಟು ಮಾಡಿದೆ. ಬಿಜೆಪಿ ಸರ್ಕಾರದ ಈ ಅವಧಿಯಲ್ಲಿ ಕಾಮಗಾರಿ ಉದ್ಘಾಟನೆ ಬಗ್ಗೆ ಅಸಮಾಧಾನಗೊಂಡಿದ್ದ ಕಲಕರಡಿ ಕಾಂಗ್ರೆಸ್ ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಹಾಗೂ ಶಿವರಾಮ ಹೆಬ್ಬಾರ ಅವರ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಗ್ರಾಮದ ರಸ್ತೆಯುದ್ದಕ್ಕೂ ಅಲ್ಲಲ್ಲಿ ಅಳವಡಿಸಿದ್ದರು.
ಉತ್ತರ ಕನ್ನಡ ಡಿಸಿ ಹರೀಶ್ ಕುಮಾರ್‌ಗೆ ಅತ್ಯುತ್ತಮ ಚುನಾವಣಾಧಿಕಾರಿ ಪ್ರಶಸ್ತಿ
ಏತ ನೀರವರಿ ಯೋಜನೆ ಉದ್ಘಾಟಿಸಿದ ಬಳಿಕ ಟಾಂಗ್ ನೀಡಿದ ಶಿವರಾಮ ಹೆಬ್ಬಾರ್, ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಫೋಟೊ ಹಾಕುವ ಆಸೆ ಇನ್ನೂ ಹೋಗಿಲ್ಲ. ಅವರಿಗೆ ಈಗ ಸಿಕ್ಕ ಸಮಯವನ್ನು ಬಳಸಿಕೊಂಡಿದ್ದಾರೆ. ನಾನು ಈಗ ಬಿಜೆಪಿಯಲ್ಲಿದ್ದೇನೆ. ಯಾವುದೇ ಸರ್ಕಾರವಿರಲಿ, ಕೆಲಸ ಮಾಡುವುದು ನನ್ನ ಗುರಿ ಎಂದರು. ಜಿಲ್ಲೆಯಲ್ಲಿ ಈ ಹಿಂದೆ ಅನೇಕ ಶಾಸಕರು, ಸಚಿವರು ಆಗಿ ಹೋದರು. ಆದರೆ, ಅವರಿಗೆ ಜನರಿಗೆ ಬೇಕಾದ ಕೆಲಸ ಮಾಡಲು ಆಗಿಲ್ಲ. ಅದನ್ನು ಮಾಡಿದ್ದೇನೆ ಎಂದರು.