ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಾವು ನಿರುದ್ಯೋಗಿಗಳಾಗಿದ್ದೇವೆ ಎಂಬ ಡಿಕೆಶಿಗೆ ಹೇಳಿಕೆಗೆ ಕಟೀಲ್ ಟಾಂಗ್| ಸಿದ್ದರಾಮಯ್ಯ ಆಡಳಿತದಲ್ಲಿ ಅಕ್ರಮ ಗಣಿಗಾರಿಕೆ ಪ್ರಾರಂಭ| ಯತ್ನಾಳ ವಿರುದ್ಧ ಶೀಘ್ರ ಕ್ರಮ: ನಳಿನ್ ಕುಮಾರ್ ಕಟೀಲ್|
ಕೊಪ್ಪಳ(ಜ.25): ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಾವು (ವಿರೋಧ ಪಕ್ಷದವರು) ನಿರುದ್ಯೋಗಿಗಗಳಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿಕೆಗೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಳ್ಳಕಾಕರು, ಭ್ರಷ್ಟರು ನಿರುದ್ಯೋಗಿಗಳಾಗಿರುವುದು ನಿಜ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಹೇಳಿಕೆಯನ್ನೇ ಬಳಸಿಕೊಂಡು ಸರಿಯಾಗಿಯೇ ತಿವಿದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇಂಥ ಕಳ್ಳಕಾಕರಿಗೆ ಉದ್ಯೋಗ ಇಲ್ಲದಂತಾಗಿರುವುದು ನಿಜ. ಶಿವಕುಮಾರ ಅವರು ಕಳ್ಳರು ಎನ್ನುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅವರೆಲ್ಲಾ ಏನಾಗಿದ್ದಾರೆ ಎನ್ನುವುದು ಗೊತ್ತಿದೆ. ಜೈಲಿಗೆ ಹೋಗಿ ಬಂದಿಲ್ಲವೇ? ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಅಕ್ರಮ ಗಣಿಗಾರಿಕೆ ಪ್ರಾರಂಭವಾಗಿದೆ. ಇದನ್ನು ಈಗ ಯಡಿಯೂರಪ್ಪ ತಡೆ ಹಿಡಿಯುತ್ತಿದ್ದಾರೆ. ಅಷ್ಟಕ್ಕೂ ಯಡಿಯೂರಪ್ಪ ಹೇಳಿರುವುದು ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡುತ್ತೇನೆ ಎಂದಲ್ಲ, ಕಾನೂನುಬದ್ಧವಾಗಿರುವ ಗಣಿಗಾರಿಕೆಯನ್ನು ಸಕ್ರಮ ಮಾಡುತ್ತೇನೆ ಎಂದಿದ್ದಾರೆ. ಅಂದರೆ ಕೆಲವೊಂದು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿವೆ. ಅಲ್ಲಿ ಪರವಾನಗಿ ನೀಡಲು ಬರುವುದಿಲ್ಲ. ಆದರೆ, ಪರವಾನಗಿ ಕೊಡಬಹುದಾದ ಸ್ಥಳದಲ್ಲಿದ್ದರೆ ಅಂತಹವುಗಳಿಗೆ ಪರವಾನಗಿ ನೀಡುವ ಕುರಿತು ಮಾತನಾಡಿದ್ದಾರೆ. ಸಿದ್ದರಾಮಯ್ಯ ಬಾಯಿಗೆ ಬಂದಂತೆ ಹೇಳುವುದಲ್ಲ. ಅವರು ಇದ್ದ ಕಾಲದಲ್ಲಿಯೇ ಆಗಿರುವ ಅಕ್ರಮ ಗಣಿಗಾರಿಕೆ ಇವು ಎಂದು ಕುಟುಕಿದರು.
ಮತ್ತೆ ರೆಸಾರ್ಟ್ ರಾಜಕಾರಣ ಶುರು: ಕಾದುನೋಡುವ ತಂತ್ರಕ್ಕೆ ಮೊರೆ..!
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿ, ಈಗ ಏನು ಹೇಳಿಲಿಕ್ಕೆ ಉಳಿದಿಲ್ಲ. ಅವರು ಪಕ್ಷದ ಇತಿಮಿತಿಯಲ್ಲಿಯೇ ವರ್ತನೆ ಮಾಡಬೇಕು. ಹಾಗೆ ಮಾಡದೆ ಇರುವುದರಿಂದ ಈಗಾಗಲೇ ರಾಜ್ಯ ಸಮಿತಿ ಅವರ ಕುರಿತು ಸಮಗ್ರ ವರದಿಯನ್ನು ಕೇಂದ್ರಕ್ಕೆ ನೀಡಿದ್ದು, ಕೇಂದ್ರ ಹೈಕಮಾಂಡ್ ಶೀಘ್ರದಲ್ಲಿಯೇ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತದೆ ಎಂದರು.
ಅವರು ಪದೇ ಪದೇ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೇ ಬಹಿರಂಗವಾಗಿಯೇ ಮಾತನಾಡುತ್ತಾರೆ. ಇದರಿಂದ ಪಕ್ಷಕ್ಕೆ ಮುಜುಗರವಾಗುತ್ತಿದ್ದರೂ ಕ್ರಮಕೈಗೊಳ್ಳಲು ಯಾಕೆ ಹಿಂದೇಟು ಹಾಕಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲದಕ್ಕೂ ಸಮಯವಕಾಶ ಎನ್ನುವುದು ಇರುತ್ತದೆ. ಈಗಾಗಲೇ ಅವರಿಗೆ ನೋಟಿಸ್ ಜಾರಿ ಮಾಡಿ, ತಿದ್ದುಕೊಳ್ಳುತ್ತಾರೆ ಎಂದು ಕಾದು ನೋಡಿದೆವು. ಆದರೂ, ಅವರು ತಿದ್ದಿಕೊಳ್ಳದೆ ಇರುವುದರಿಂದ ಈಗ ಕ್ರಮ ಅನಿವಾರ್ಯವಾಗಿದ್ದು, ಕೇಂದ್ರ ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತದೆ ಎಂದರು. ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಇದ್ದರು.