ಇನ್ಮುಂದೆ ಪೇಪರ್‌ಲೆಸ್‌ ಆಡಳಿತ: ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ

By Kannadaprabha News  |  First Published Jan 25, 2021, 10:28 AM IST

ಡಿಸಿ ಆಫೀಸ್‌, ವಾರ್ತಾ ಇಲಾಖೆ ಬಳಿಕ ಈಗ ಎಲ್ಲ ಇಲಾಖೆಗಳು| ಪೇಪರ್‌ ಉಳಿಸಲು, ಆಡಳಿತ ಚುರುಕುಗೊಳಿಸಲು ಕ್ರಮ| ಪೇಪರ್‌ ಆಡಳಿತದಲ್ಲಿ ಹೆಚ್ಚು, ಹೆಚ್ಚು ಸಿಬ್ಬಂದಿ ಬೇಕಾಗುವುದರಿಂದ ಇ-ಆಡಳಿತ ಜಾರಿ| 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಜ.25):  ಕಾಗದ ರಹಿತ ಆಡಳಿತ (ಇ-ಆಡಳಿತ)ವನ್ನು ರಾಜ್ಯಾದ್ಯಂತ ತರಲು 2019ರಿಂದ ಪ್ರಯತ್ನ ಮಾಡುತ್ತಿದ್ದರೂ ಅದಿನ್ನೂ ನಿಗದಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಲೇ ಇಲ್ಲ. ಆದ್ದರಿಂದ ಸರ್ಕಾರ ಈ ಬಾರಿ ಕಟ್ಟುನಿಟ್ಟಿನ ಕ್ರಮದೊಂದಿಗೆ ಕಾಗದ ರಹಿತ ಆಡಳಿತ ತರಲು ಮುಂದಾಗಿದೆ. ಈ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸುವುದು ಹಾಗೂ ಕಾಗದ ಬಳಕೆಯನ್ನು ನಿಗ್ರಹ ಮಾಡಲು ಸರ್ಕಾ​ರ ಮುಂದಾಗಿದೆ.

Tap to resize

Latest Videos

ಮಾರ್ಚ್‌ 31ರೊಳಗಾಗಿ ಜಿಲ್ಲಾಮಟ್ಟದ ಎಲ್ಲ ಇಲಾಖೆಯಲ್ಲಿಯೂ ಇ-ತಂತ್ರಾಂಶದ ಕಚೇರಿಯನ್ನು ಪೂರ್ಣಪ್ರಮಾಣದಲ್ಲಿ ಜಾರಿ ಮಾಡಿ, ಏ. 1ರಿಂದಲೇ ಇ-ಆಫೀಸ್‌ ಅಥವಾ ಪೇಪರ್‌ಲೆಸ್‌ ಆಡಳಿತವನ್ನು ಜಾರಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರಿ ಅಪರ ಕಾರ್ಯದರ್ಶಿ ಎಂ.ಬಿ. ವಿಜಯಕುಮಾರ ಆದೇಶ ಹೊರಡಿಸಿ, ಸುದೀರ್ಘ ಪತ್ರ ಬರೆದಿದ್ದಾರೆ. ಅನುಷ್ಠಾನ ಮಾಡುವುದಕ್ಕೆ ಈ ಹಿಂದೆ 2019ರಲ್ಲಿನ ಸೂಚನೆಗಳ ಅನ್ವಯ ಅನುಷ್ಠಾನ ಮಾಡಲೇಬೇಕು ಎಂದು ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಳ್ಳಕಾಕರು ನಿರುದ್ಯೋಗಿಗಳು: ಕಟೀಲ್‌

ನನೆಗುದಿಗೆ:

ರಾಜ್ಯದಲ್ಲಿ ಇ-ಆಫೀಸ್‌ ಅಥವಾ ಪೇಪರ್‌ಲೆಸ್‌ ಆಡಳಿತವನ್ನು ಜಾರಿ ಮಾಡಲು 2019 ಏಪ್ರಿಲ್‌ 12ರಂದು ಸಚಿವಾಲಯದಲ್ಲಿ ಜಾರಿಗೆ ತರಲು ಮುಂದಾಯಿತು. 2019ರ ಮಾರ್ಚ್‌ 23ರಂದು ರಾಜ್ಯದ ಎಲ್ಲ ಜಿಲ್ಲಾಮಟ್ಟದ ಇಲಾಖೆ ಮತ್ತು ತಾಲೂಕು ಮಟ್ಟದ ಇಲಾಖೆಯಲ್ಲಿ ಜಾರಿ ಮಾಡಲು ನಿರ್ದೇಶನ ನೀಡಲಾಯಿತು. 2019 ಮೇ 1ರಿಂದ ಕಟ್ಟುನಿಟ್ಟಿನ ಜಾರಿಗೂ ಆದೇಶ ಮಾಡಲಾಯಿತು.

ಇಷ್ಟಾದರೂ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಹೊರತುಪಡಿಸಿ ಉಳಿದೆಡೆ ಇ-ಆಫೀಸ್‌ ಅನುಷ್ಠಾನಗೊಳ್ಳಲೇ ಇಲ್ಲ. 23 ಉಪವಿಭಾಗಾಧಿಕಾರಿ ಕಚೇರಿಯಲ್ಲಿ, 27 ತಹಸೀಲ್ದಾರ್‌ ಕಚೇರಿಯಲ್ಲಿ ಮಾತ್ರ ಅನುಷ್ಠಾನಗೊಂಡಿದೆ. ಜಿಪಂ ವ್ಯಾಪ್ತಿಯಲ್ಲಿ 226 ತಾಲೂಕು ಪಂಚಾಯಿತಿಗಳಿದ್ದು, ಇದರಲ್ಲಿ ಕೇವಲ 176 ತಾಪಂನಲ್ಲಿ ಮಾತ್ರ ಇ-ಆಫೀಸ್‌ ಯೋಜನೆ ಕಾರ್ಯಗತವಾಗುವ ದಿಸೆಯಲ್ಲಿದೆಯೇ ಹೊರತು ಚಾಲ್ತಿ ಆಗಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಯಲ್ಲಿ ಕೇವಲ 4 ಕಚೇರಿಯಲ್ಲಿ ಮಾತ್ರ ಜಾರಿಯಾಗಿದೆ. ಇನ್ನು 40 ಇಲಾಖೆಗಳಲ್ಲಿ ಇದು ಕಾರ್ಯಗತವಾಗಿಯೇ ಇಲ್ಲ.

ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಮಟ್ಟದ ಇಲಾಖೆಯಲ್ಲಿ ಮಾ. 31ರೊಳಗಾಗಿ ಇ-ಆಫೀಸ್‌ ಅನುಷ್ಠಾನಗೊಳಿಸಿ, ಏ. 1ರಿಂದಲೇ ರಾಜ್ಯಾದ್ಯಂತ ಇ-ಆಡಳಿತ ಪ್ರಾರಂಭಿಸಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಅಧಿಕಾರಿ ಹಾಗೂ ತಾಲೂಕು ಮಟ್ಟದಲ್ಲಿ ಸ್ಥಳೀಯ ಆಡಳಿತಾಧಿಕಾರಿ ನೇಮಿಸಿಕೊಂಡು, ಕೂಡಲೇ ಇ-ಆಡಳಿತವನ್ನು ಪ್ರಾರಂಭಿಸುವಂತೆ ಸೂಚಿಸಲಾಗಿದೆ.

ಸಿಬ್ಬಂದಿಗೆ ಕತ್ತರಿ:

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಶಿಫಾರಸಿನ ಮೇರೆಗೆ ರಾಜ್ಯಾದ್ಯಂತ ಈಗ ಸರ್ಕಾರ ಸಿಬ್ಬಂದಿ ಕಡಿತ ಮಾಡಲಾಗುತ್ತದೆ. ಹೀಗಾಗಿ, ಪೇಪರ್‌ ಆಡಳಿತದಲ್ಲಿ ಹೆಚ್ಚು, ಹೆಚ್ಚು ಸಿಬ್ಬಂದಿ ಬೇಕಾಗುವುದರಿಂದ ಇ-ಆಡಳಿತ ಜಾರಿ ಮಾಡಲಾಗುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ ಸರ್ಕಾರದ ಆಡಳಿತಕ್ಕೆ ಚುರುಕು ನೀಡಬೇಕಾಗಿದೆ. ಇ ಆಡಳಿತ ಇದ್ದರೆ ಕಡತಗಳನ್ನು ವಿಲೇವಾರಿ ಮಾಡದೆ ಹಾಗೆ ಇಡುವುದಕ್ಕೆ ಅವಕಾಶ ಇಲ್ಲ. ಆದರೆ, ಪೇಪರ್‌ ಆಡಳಿತದಲ್ಲಿ ಕಡತಗಳನ್ನು ವರ್ಷಗಟ್ಟಲೇ ಹಾಗೆ ಇಟ್ಟುಕೊಂಡಿರುತ್ತಾರೆ. ಇದನ್ನು ತಪ್ಪಿಸುವುದಕ್ಕಾಗಿಯೇ ಸರ್ಕಾರ ಈಗ ಇ ಆಡಳಿತ ಅನುಷ್ಠಾನಕ್ಕೆ ಡೆಡ್‌ಲೈನ್‌ ಹಾಕಿದ್ದು, ಈ ಬಾರಿಯಾದರೂ ಇದು ಜಾರಿಯಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
 

click me!