
ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ಪಟ್ಟಣದ ಪ್ರಸಿದ್ಧ ಹುಚ್ಚರಾಯಸ್ವಾಮಿ ಕೆರೆಯಲ್ಲಿ ಬಿಸಿಎ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಪತ್ತೆಯಾಗಿದೆ. ಆಕೆ ಸಾವನ್ನಪ್ಪಿದ್ದು ಯಾಕೆ? ಕಾರಣವೇನು? ಸಮವಸ್ತ್ರದಲ್ಲೇ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿತ್ತು ಯಾಕೆ? ಈ ಕುರಿತು ಒಂದು ವರದಿ ಇಲ್ಲಿದೆ.
ನೂರಾರು ಕನಸುಗಳನ್ನು ಹೊತ್ತು ಇನ್ನು ಬಾಳಿ ಬದುಕಬೇಕಾಗಿದ್ದ ಕುಸುಮಬಾಲೆಯ ಬಳು ತನ್ನದೇ ದುಡುಕಿನ ನಿರ್ಧಾರಕ್ಕೆ ಬಲಿಯಾಗಿದ್ದಾಳೆ. ಪುಸ್ತಕದ ಪರೀಕ್ಷೆ ಎದುರಿಸಲಾಗದೆ ಜೀವನದ ಪರೀಕ್ಷೆಯನ್ನು ಗೆಲ್ಲಲಾಗದೆ ಬಾರದ ಲೋಕ ಸೇರಿದ್ದಾಳೆ.
ಹೌದು, ಸೆಮಿಸ್ಟರ್ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನನೊಂದು ಶಿಕಾರಿಪುರ ಪಟ್ಟಣದ ಐತಿಹಾಸಿಕ ಹುಚ್ಚರಾಯಸ್ವಾಮಿ ಕೆರೆಗೆ ಹಾರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಶಿಕಾರಿಪುರ ಪಟ್ಟಣದ ನಿವಾಸಿ ನಮಿತಾ ಅಲಿಯಾಸ್ ರಮ್ಯಾ (21) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು. ಎಂದಿನಂತೆ ಬೆಳಗ್ಗೆ ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದಳು. ಬಳಿಕ ಹುಚ್ಚರಾಯಸ್ವಾಮಿ ದೇವಸ್ಥಾನದ ಮುಂಭಾಗ ತನ್ನ ದ್ವಿಚಕ್ರ ವಾಹನ ನಿಲ್ಲಿಸಿ, ಕೆರೆಯ ದಡದ ಬಳಿ ಚಪ್ಪಲಿ ಬಿಟ್ಟು ನೀರಿಗೆ ಹಾರಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಯುವತಿಯ ಮೃತದೇಹ ವನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ಮಂಗಳವಾರ ಪ್ರಕಟವಾದ ಸೆಮಿಸ್ಟರ್ ಪರೀಕ್ಷಾ ಫಲಿತಾಂಶದಲ್ಲಿ ತಾನು ಒಂದು ವಿಷಯದಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿರುವುದಾಗಿ ಹಾಗೂ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಆಕೆ ಬರೆದಿದ್ದ ಡೆತ್‌ನೋಟ್ ಕಾಲೇಜು ಬ್ಯಾಗ್‌ನಲ್ಲಿ ಪತ್ತೆಯಾಗಿದೆ ಎಂದು ಮೃತಳ ಸಂಬಂಧಿಕರು ಪಟ್ಟಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಆತ್ಮಹತ್ಯೆಯ ಸಂಬಂಧ ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಇನ್ನು ಬದುಕಿನಲ್ಲಿ ಸಾಧಿಸಬೇಕಾದದ್ದು ಬಹಳ ಇತ್ತು ಕೇವಲ ಒಂದು ಪರೀಕ್ಷೆಯನ್ನೇ ಮಾನದಂಡವನ್ನಾಗಿಸಿ, ಮನಸ್ಸನ್ನು ದುರ್ಬಲಗೊಳಿಸಿಕೊಂಡ ವಿದ್ಯಾರ್ಥಿನಿಯ ಸಾವು ಪೋಷಕರಿಗೂ ಮತ್ತು ಸಮಾಜಕ್ಕೂ ಪಾಠವಾಗಿದೆ. (ವರದಿ: ರಾಜೇಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ)