
ಶಿವಮೊಗ್ಗ: ಮದುವೆ ಸೇರಿದಂತೆ ಶುಭ, ಸಮಾರಂಭಗಳಲ್ಲಿ ಅದ್ಧೂರಿ ಬೀಗರೂಟದ ಹೆಸರಿನಲ್ಲಿ ನಡೆಯುವ ದುಂದು ವೆಚ್ಚಕ್ಕೆ ಕಡಿವಾಣ ಹಾಕುವಲ್ಲಿ ತಾಲೂಕಿನ ಗೆಂಡ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಗುಪ್ಪ ಗ್ರಾಮಸ್ಥರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ, ಅದ್ಧೂರಿ ಬೀಗರೂಟ ಪದ್ಧತಿಯನ್ನು ನಿಷೇಧಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ಬೀಗರೂಟದ ಹೆಸರಿನಲ್ಲಿ ಅನಗತ್ಯ ಹಣ ವ್ಯಯಿಸುವ ಬದಲಾಗಿ ಅದೇ ಹಣವನ್ನು ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಹಾಗೂ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸಲು ಬಳಸಿಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸಮಾಜದಲ್ಲಿ ಆರ್ಥಿಕ ಶಿಸ್ತು ಬೆಳೆಸುವ ಜೊತೆಗೆ, ಮದುವೆ ಮತ್ತು ಶುಭ ಸಮಾರಂಭಗಳನ್ನು ಸರಳವಾಗಿ ಆಚರಿಸುವ ಮೂಲಕ ಅನಗತ್ಯ ಸಾಲದ ಹೊರೆ ತಪ್ಪಿಸಿಕೊಳ್ಳಬೇಕು ಎಂಬ ಆಶಯವನ್ನು ಸಭೆ ವ್ಯಕ್ತಪಡಿಸಿದೆ.
ಸೊರಬ ತಾಲೂಕಿನಲ್ಲಿ ಆರಂಭಗೊಂಡಿರುವ ಅದ್ಧೂರಿ ಬೀಗರೂಟ ವಿರೋಧಿ ಆಂದೋಲನಕ್ಕೆ ತಾಳಗುಪ್ಪದ ನಿರ್ಧಾರ ಮತ್ತಷ್ಟು ಬಲ ನೀಡಿದೆ. ಈ ಹಿಂದೆ ಚಿಕ್ಕಶಕುನ, ಶೀಗೇಹಳ್ಳಿ, ಕುಂದಗಸವಿ, ಗುಡವಿ, ಶಿಗ್ಗಾ ಅದ್ಧೂರಿ ಬೀಗರೂಟ ನಿಷೇಧದ ನಿರ್ಧಾರ ಕೈಗೊಳ್ಳಲಾಗಿತ್ತು. ನೆರೆಯ ಶಿಕಾರಿಪುರ ತಾಲೂಕಿನ ಹರಗಿ ಗ್ರಾಮದಲ್ಲಿಯೂ ಈ ಪದ್ಧತಿಗೆ ಕಡಿವಾಣ ಹಾಕುವ ನಿರ್ಧಾರ ಕೈಗೊಂಡಿದ್ದು, ಸಾಗರ ತಾಲೂಕಿನ ಹುಣಸೂರು ಗ್ರಾಮದಲ್ಲಿಯೂ ಅದ್ಧೂರಿ ಬೀಗರೂಟ ವಿರೋಧಿ ನಿರ್ಧಾರ ಪ್ರಕಟವಾಗಿತ್ತು.
ಗ್ರಾಮದಿಂದ ಗ್ರಾಮಕ್ಕೆ ವಿಸ್ತರಿಸುತ್ತಿರುವ ಈ ಸಾಮಾಜಿಕ ಜಾಗೃತಿ, ದುಂದು ವೆಚ್ಚದ ಮದುವೆ ಸಂಪ್ರದಾಯಕ್ಕೆ ಪರ್ಯಾಯವಾಗಿ ಸರಳ ವಿವಾಹ ಮತ್ತು ಆರ್ಥಿಕ ಸ್ವಾವಲಂಬನೆಯ ಸಂದೇಶ ಸಾರುತ್ತಿದೆ. ತಾಳಗುಪ್ಪ ಗ್ರಾಮಸ್ಥರ ನಿರ್ಧಾರವು ತಾಲೂಕಿನ ಇನ್ನಷ್ಟು ಗ್ರಾಮಗಳಿಗೆ ಪ್ರೇರಣೆಯಾಗಲಿ. ಬೀಗರೂಟಕ್ಕೆ ಖರ್ಚು ಮಾಡುವ ಹಣ ಮಕ್ಕಳ ಶಿಕ್ಷಣ, ಮನೆ ನಿರ್ಮಾಣ, ಕೃಷಿ ಅಭಿವೃದ್ಧಿ ಹಾಗೂ ಕುಟುಂಬದ ಭವಿಷ್ಯಕ್ಕೆ ನೆರವಾಗಲಿ ಎಂಬುದು ಆಂದೋಲನದ ಆಶಯವಾಗಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳು ಈ ನಿರ್ಧಾರಕ್ಕೆ ಕೈಜೋಡಿಸಿ, ಅದ್ಧೂರಿ ಬೀಗರೂಟ ವಿರೋಧಿ ಆಂದೋಲನವನ್ನು ಜನಪರ ಸಾಮಾಜಿಕ ಚಳವಳಿಯಾಗಿ ರೂಪಿಸಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.
ಈ ಸಂದರ್ಭದಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ನಾಗರಾಜ ಇಡಗೋಡರ್, ಸಮಿತಿ ಸದಸ್ಯರಾದ ನೀಲಪ್ಪ, ಮಂಜಪ್ಪ, ಸಿದ್ದಪ್ಪ, ರಾಮಪ್ಪ, ಗ್ರಾಮದ ಪ್ರಮುಖರಾದ ದೇವರಾಜ್, ಪರಶುರಾಮ್, ಟಿ.ಎನ್. ಕುಮಾರ್, ಟಿ.ಹೆಚ್. ಗಂಗಾಧರ್, ಗುರುರಾಜ, ರೇವಣಪ್ಪ, ಕೆ.ಬಿ. ರಾಮಪ್ಪ, ಎಸ್. ನಾಗಪ್ಪ, ಶಶಿಧರ್ ಎ.ವಿ., ಹರೀಶ್, ಜಿ. ಸುರೇಶ್ ಗುಡಿ, ಟಿ.ಹೆಚ್. ಇಂದೂಧರ್, ಎನ್.ಬಿ. ನಾಗಪ್ಪ ಇದ್ದರು.