
ಬೆಂಗಳೂರು: ವಾತಾವರಣದಲ್ಲಿ ಉಂಟಾದ ಪೂರ್ವದ ಅಲೆಗಳಿಂದಾಗಿ ನಗರದಲ್ಲಿ ಮಂಗಳವಾರ ಸಂಜೆ 4ರಿಂದ ರಾತ್ರಿ 8ರವರೆಗೆ ಮಳೆ ಸುರಿದ ಪರಿಣಾಮ ನಗರದ ಹಲವೆಡೆ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು.
ಬೆಳಗ್ಗೆಯಿಂದ ನಗರದ ಹಲವು ಭಾಗಗಳಲ್ಲಿ ಮೋಡಕವಿದ ವಾತಾವರಣವಿತ್ತು. ಸಂಜೆ 4 ಗಂಟೆಯಾಗುತ್ತಿದ್ದಂತೆ ತಣ್ಣನೆ ಗಾಳಿಯೊಂದಿಗೆ ಆರಂಭವಾದ ತುಂತುರು ಮಳೆ, ನಂತರ ರಭಸವಾಗಿ ಬೀಳಲಾರಂಭಿಸಿತು. ಇದರಿಂದಾಗಿ ನಗರದ ಒಳಚರಂಡಿಯಲ್ಲಿ ನೀರು ತುಂಬಿ ರಸ್ತೆಯಲ್ಲೆಲ್ಲಾ ಹರಿದಾಡಲು ಆರಂಭಿಸಿತು. ಇದ್ದಕ್ಕಿದ್ದಂತೆ ಆರಂಭವಾದ ಮಳೆಯಿಂದಾಗಿ ದ್ವಿಚಕ್ರವಾಹನ ಸವಾರರು ಮರದಡಿ, ಅಂಡರ್ ಪಾಸ್ ಕೆಳಗೆ ಆಶ್ರಯಪಡೆದರು.
ರಸ್ತೆಗಳ ತುಂಬಾ ಗುಂಡಿಗಳೇ ತುಂಬಿದ್ದರಿಂದ ನೀರು ತುಂಬಿ ಬೈಕ್ ಸವಾರರು ಪರದಾಡಿದರು. ಪಾಲಿಕೆ ಅಲ್ಲಲ್ಲಿ ಒಳಚರಂಡಿ ಸೇರಿದಂತೆ ಹಲವು ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯಲು ಸ್ಥಳಾವಕಾಶ ಇಲ್ಲದೆ ಅಸ್ತವ್ಯಸ್ತ ಉಂಟಾಗಿತ್ತು.
ನಗರದ ಕೆಂಪೇಗೌಡ ಬಸ್ ನಿಲ್ದಾಣ, ವಿಜಯನಗರ, ಮಾಗಡಿ ರಸ್ತೆ, ಶ್ರೀರಾಂಪುರ, ರಾಜಾಜಿನಗರ, ಶಿವಾಜಿನಗರ, ವಿಧಾನಸೌಧ, ಫ್ರೀಡಂಪಾರ್ಕ್, ಗಾಂಧಿ ನಗರ, ನೃಪತುಂಗ ರಸ್ತೆ, ಕೆ.ಆರ್.ಮಾರುಕಟ್ಟೆ, ಜಯನಗರ, ಜೆ.ಪಿ.ನಗರ, ಬಸವನಗುಡಿ, ಹನುಮಂತನಗರ ಸೇರಿದಂತೆ ಹಲವೆಡೆ ಮಳೆ ಸುರಿದಿದೆ.
ಅಂತಾರಾರಾಷ್ಟ್ರೀಯ ವಿಮಾನನಿಲ್ದಾಣ 1.6 ಮಿ.ಮೀಟರ್, ಎಚ್.ಎ.ಎಲ್ ಏರ್ ಪೋರ್ಟ್ ಅತಿ ಹೆಚ್ಚು ಅಂದರೆ 15.8 ಮಿ.ಮೀಟರ್, ಬೆಂಗಳೂರು ನಗರದಲ್ಲಿ 4.1 ಮಿ.ಮೀಟರ್ ಮಳೆಯಾಗಿದೆ. ಈಸ್ಟರ್ಲಿ ವೇವ್ಸ್ ಗಳಿಂದಾಗಿ ಬೆಂಗಳೂರೂ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇನ್ನೂ ಮೂರು ದಿನಗಳವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ರಾಜ್ಯ ನಿರ್ದೇಶಕಿ ಡಾ.ಲತಾ ಶ್ರೀಧರ್ ಕನ್ನಡಪ್ರಭಕ್ಕೆ ತಿಳಿಸಿದರು.
ಇವುಗಳ ಪರಿಣಾಮದಿಂದ ಕೇರಳ, ಆಂಧ್ರದ ಕರಾವಳಿ, ರಾಯಲ್ ಸೀಮಾ, ತಮಿಳುನಾಡಿನಲ್ಲಿಯೂ ಒಂದೊಂದು ಬಾರಿ ಗುಡುಗು ಸಹಿತ ಮಳೆಯೂ ಬೀಳಲಿದೆ ಎಂದರು.