
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಕುಂಸಿ, ಯಡೇಹಳ್ಳಿ ಸಮೀಪದಲ್ಲಿ ತಲಾ ₹60 ಕೋಟಿಗಳ ಅಂದಾಜು ವೆಚ್ಚದಲ್ಲಿ, ಹೊಸೂರು, ತಾಳಗುಪ್ಪ ಮತ್ತು ನಗರದ ಬೊಮ್ಮನಕಟ್ಟೆ ಪ್ರದೇಶಗಳಲ್ಲಿ ತಲಾ ₹70 ಕೋಟಿ ಅಂದಾಜು ವೆಚ್ಚದಲ್ಲಿ ಹಾಗೂ ಗುಂಡಪ್ಪ ಶೆಡ್‌ನಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳನ್ನು ಪ್ರಾರಂಭಿಸಲು ₹300 ಕೋಟಿ ವೆಚ್ಚದ ಒಟ್ಟು 7 ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಅಗತ್ಯವಿರುವ ಅನುದಾನವನ್ನು ಈಗಾಗಲೇ ಬಿಡುಗಡೆಗೊಳಿಸಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಲ್ಲಿಯ ವಿದ್ಯಾನಗರದ ಮೇಲ್ಸೇತುವೆಗೆ ಹೊಂದಿಕೊಂಡಂತಿರುವ ರೈಲ್ವೆ ಇಲಾಖೆಯ ಜಾಗದಲ್ಲಿ ವಿದ್ಯಾನಗರ, ಚಿಕ್ಕಲ್, ಶಾಂತಮ್ಮ ಲೇಔಟ್, ಅರಕೇಶ್ವರ ದೇವಸ್ತಾನ ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಗಂಧದ ಕಾರ್ಖಾನೆಗಳಿಗೆ ಸಂಚರಿಸಲು ಲಘುವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಂದಾಜು ₹3 ಕೋಟಿ ವೆಚ್ಚದಲ್ಲಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇದೇ ಸ್ಥಳದಲ್ಲಿ ಈಗಾಗಲೇ ₹43.90 ಕೋಟಿ ವೆಚ್ಚದ ಟ್ರಂಪೆಟ್‌ಕರ್ವ್ ಮೇಲ್ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆಡಳಿತಾರೂಢ ಕೇಂದ್ರ ಸರ್ಕಾರದ ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವ ನಿತಿನ್ ಗಡ್ಕರಿ ಸಹಕಾರದೊಂದಿಗೆ ರಾಷ್ಟ್ರದ ಹೆದ್ದಾರಿಗಳು ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಹೊಸ ರೈಲು ಸಂಪರ್ಕಗಳ ಅಭಿವೃದ್ಧಿಯ ಪರ್ವವೇ ಆರಂಭಗೊಂಡಿದೆ. ಅನೇಕ ವಿಶೇಷ ಪ್ರಯತ್ನಗಳ ಫಲವಾಗಿ ಈವರೆಗೆ ಸುಮಾರು ₹20 ಸಾವಿರ ಕೋಟಿಗೂ ಅಧಿಕ ವೆಚ್ಚದ ಹೆದ್ದಾರಿ ಮತ್ತು ರೈಲ್ವೆ ಕಾಮಗಾರಿಗಳಿಗೆ ಅನುದಾನ ದೊರಕಿದ್ದು, ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದರು.
ಕ್ಷೇತ್ರದ ಹೆದ್ದಾರಿಗಳಲ್ಲಿರುವ ಎಲ್ಲ ರೈಲ್ವೆ ಗೇಟ್ ಲೆವೆಲ್ ಕ್ರಾಸಿಂಗ್‌ಗಳ ಬದಲಾಗಿ ಮೇಲ್ಸೇತುವೆ ಮತ್ತು ಅಂಡರ್ ಪಾಸ್‌ಗಳನ್ನು ನಿರ್ಮಿಸಿ ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ವಿಶೇಷ ಗಮನಹರಿಸಲಾಗಿದೆ. ಈಗಾಗಲೇ ಆರಂಭಿಸಲಾಗಿದ್ದ ವಿದ್ಯಾನಗರದ ವೃತ್ತಾಕಾರದ ಮೇಲ್ಸೇತುವೆ, ಸವಳಂಗ ರಸ್ತೆಯ ಮೇಲ್ಸೇತುವೆ ಮತ್ತು ಅಂಡರ್‌ಪಾಸ್, ಸೋಮಿನಕೊಪ್ಪ ರಸ್ತೆಯಲ್ಲಿ ಮೇಲ್ಸೇತುವೆ, ಪಿ ಅಂಡ್ ಟಿ ಕಾಲೋನಿಯಲ್ಲಿ ಅಂಡರ್ ಪಾಸ್ ಮತ್ತು ಭದ್ರಾವತಿ ಸಮೀಪದ ಕಡದಕಟ್ಟೆ ಬಳಿ ಮೇಲ್ಸೇತುವೆ ನಿರ್ಮೀಸಿ ಲೋಕಾರ್ಪಣೆಗೊಳಿಸಿದ್ದು ಅತ್ಯಂತ ಹರ್ಷದ ಸಂಗತಿ ಎಂದರು.
ಅಂತೆಯೇ ಎಂ.ಆರ್.ಎಸ್. ಸರ್ಕಲ್‌ನಿಂದ ರಿಂಗ್ ರೋಡ್‌ನವರೆಗೆ ಒಂದು ಬಾರಿ ಅಭಿವೃಧ್ಧಿಗೊಳಿಸಿ ನಿರ್ವಹಿಸಲು ಹಾಗೂ ಎಂ.ಆರ್.ಎಸ್‌ನಿಂದ ಬಸ್ ನಿಲ್ದಾಣದವರೆಗೆ ಹಾಗೂ ನಗರದ ವಿವಿಧ 4 ಪ್ರಮುಖ ವೃತ್ತಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಭಾರೀ ಮೊತ್ತದ ಬಿಡುಗಡೆಗೊಳಿಸಿ, ಅಭಿವೃದ್ದಿ ಕಾರ್ಯಕ್ಕೆ ಸಹಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದೀಜಿ, ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಭಿನಂದನಾರ್ಹರು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಶಿವಮೊಗ್ಗ ನಗರದ ವಿಕಾಸಕ್ಕೆ ಹಲವು ಮಹತ್ವದ ಯೋಜನೆಗಳನ್ನು ರೂಪಿಸಿ, ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದರಿಂದಾಗಿ ಶಿವಮೊಗ್ಗ ಬೃಹತ್ ನಗರವಾಗಿ ಅಭಿವೃದ್ಧಿಗೊಂಡಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಕೈಗೊಳ್ಳುತ್ತಿರುವ ರೈಲ್ವೆ ಅಂಡರ್ ಪಾಸ್ ಕಾಮಗಾರಿಯು ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗದಂತೆ ಹಾಗೂ ಮಳೆಗಾಲದಲ್ಲಿ ನೀರು ನಿಲ್ಲದಂತೆ ವಿನ್ಯಾಸಗೊಳಿಸಿ, ಲಘುವಾಹನಗಳು ಮತ್ತು ಪಾದಚಾರಿಗಳಿಗೆ ಅನುಕೂಲ ಆಗುವಂತೆ ಕೆಳಸೇತುವೆ ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಈ ಭಾಗದ ನಿವಾಸಿಗಳಲ್ಲಿ ಸಂತಸ ಮನೆ ಮಾಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡ ಜಗದೀಶ್, ಯಮುನಾ ರಂಗೇಗೌಡ, ಜ್ಞಾನೇಶ್ವರ್, ಸುರೇಖಾ ಮುರಳೀಧರ್, ಮೋಹನ ರೆಡ್ಡಿ ಸೇರಿದಂತೆ ಹಲವು ಗಣ್ಯರು ಹಾಗೂ ರೈಲ್ವೇ ಇಲಾಖಾ ಅಧಿಕಾರಿ-ಸಿಬ್ಬಂದಿ, ಗುತ್ತಿಗೆದಾರರು ಉಪಸ್ಥಿತರಿದ್ದರು.
ಬಿ.ಎಸ್.ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿಯೇ ಸಂಸದ ಬಿ.ವೈ.ರಾಘವೇಂದ್ರ ಅವರು ಮುಂದುವರೆದು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುತ್ತಿರುವುದು ಪಕ್ಷಾತೀತವಾಗಿ ಎಲ್ಲರೂ ಸ್ವಾಗತಿಸುವಂತಹದ್ದು. ಅದಕ್ಕಾಗಿ ನಾನು ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಅಭಿನಂದಿಸುತ್ತೇನೆ. ನಿರೀಕ್ಷಿತ ಕೆಲಸ- ಕಾರ್ಯಗಳನ್ನು ನಿಗದಿಪಡಿಸಿದ ಕಾಲಮಿತಿಯಲ್ಲಿ ನಡೆಸಿ, ಲೋಕಾರ್ಪಣೆಗೊಳಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿರುವುದು ಅತ್ಯಂತ ಸಂತಸ ತಂದಿದೆ ಎಂದು ವಿಪ ಸದಸ್ಯೆ ಬಲ್ಕೀಶ್ ಬಾನು ಹೇಳಿದ್ದಾರೆ.