
ಶಿವಮೊಗ್ಗ (ಮಾ.02): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಈಗ ರಾಜ್ಯದ ಮುಂದಿನ 'ಡಿಜಿಟಲ್ ಪವರ್‌ಹೌಸ್' ಆಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಪ್ರಸ್ತಾವನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಲೆನಾಡಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, 'ನಮಗೆ ಇನ್ನೊಂದು ಬೆಂಗಳೂರು ಬೇಡ' ಎಂಬ ಕೂಗು ಕೇಳಿಬರುತ್ತಿದೆ.
ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (FKCCI) ಪ್ರತಿನಿಧಿಗಳು ಹಾಗೂ ಪ್ರಮುಖ ಉದ್ಯಮಿಗಳು ಶಿವಮೊಗ್ಗದ ಭವಿಷ್ಯದ ಬಗ್ಗೆ ಚರ್ಚಿಸಿದರು. ಶಿವಮೊಗ್ಗದಲ್ಲಿ ಈಗ ಉತ್ತಮ ರಸ್ತೆ ಸಂಪರ್ಕವಿದೆ, ಸುಸಜ್ಜಿತ ವಿಮಾನ ನಿಲ್ದಾಣವಿದೆ ಮತ್ತು ಇಲ್ಲಿನ ಯುವಜನತೆಯಲ್ಲಿ ಅಪಾರ ಪ್ರತಿಭೆಯಿದೆ. ಹೀಗಾಗಿ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಶಿವಮೊಗ್ಗವನ್ನು ಮುಂದಿನ ತಂತ್ರಜ್ಞಾನ ಮತ್ತು ಉದ್ಯಮದ ಕೇಂದ್ರವನ್ನಾಗಿ (Digital Powerhouse) ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉದ್ಯಮಿಗಳ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ ಆರಂಭವಾಗಿದೆ. ಅದರಲ್ಲೂ ವಿಶೇಷವಾಗಿ ಶಿವಮೊಗ್ಗದ ಜನತೆ ಈ ಬೆಳವಣಿಗೆಯನ್ನು ಆತಂಕದಿಂದ ನೋಡುತ್ತಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, 'ಅಣ್ಣಾ, ಇಲ್ಲಿ ನಾವೆಲ್ಲಾ ನೆಮ್ಮದಿಯಾಗಿದ್ದೇವೆ, ಈ ಕಡೆ ಬರಲೇಬೇಡಿ' ಎಂದು ಮನವಿ ಮಾಡಿದ್ದಾರೆ. ಮತ್ತೊಬ್ಬರು, 'ನಮ್ಮ ಕಾಡು, ಪರಿಸರ ಮತ್ತು ಪ್ರಕೃತಿಯನ್ನು ಉಳಿಸಿಕೊಳ್ಳುವುದು ನಮಗೆ ಮುಖ್ಯ. ನಮಗೆ ಬೆಂಗಳೂರಿನಂತಹ ಗದ್ದಲದ ಜೀವನ ಬೇಡ' ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿರುವ ಟ್ರಾಫಿಕ್ ಸಮಸ್ಯೆ, ವಾಯು ಮಾಲಿನ್ಯ ಮತ್ತು ಜನದಟ್ಟಣೆಯನ್ನು ಕಂಡು ಮಲೆನಾಡಿಗರು ಬೆಚ್ಚಿಬಿದ್ದಿದ್ದಾರೆ. 'ನಮ್ಮಲ್ಲಿ ಉತ್ತಮ ಗಾಳಿ ಇದೆ, ಪ್ರೀತಿಯ ಜನರಿದ್ದಾರೆ. ನಮಗೆ ಹಬ್ಬ-ಜಾತ್ರೆಗಳನ್ನು ಮಾಡಿಕೊಂಡು ಆರಾಮವಾಗಿ ಇರಲು ಬಿಡಿ. ಇಲ್ಲಿಗೆ ಹೊರಗಿನ ಸಂಸ್ಕೃತಿ ತಂದು ನಮ್ಮ ಸಂಸ್ಕೃತಿಯನ್ನು ಹಾಳು ಮಾಡಬೇಡಿ' ಎಂಬುದು ಸ್ಥಳೀಯರ ಒಕ್ಕೊರಲ ದನಿಯಾಗಿದೆ.
ಕೆಲವು ನೆಟ್ಟಿಗರು ಅಭಿವೃದ್ಧಿಯ ವಿಷಯದಲ್ಲಿ ಶಿವಮೊಗ್ಗಕ್ಕಿಂತ ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ಅಥವಾ ಬಾಗಲಕೋಟೆ ನಗರಗಳು ಹೆಚ್ಚು ಸೂಕ್ತ ಎಂದು ಸಲಹೆ ನೀಡಿದ್ದಾರೆ. 'ಬಾಗಲಕೋಟೆ ಕರ್ನಾಟಕದ ಏಕೈಕ ಯೋಜಿತ ನಗರ (Planned City), ಅಲ್ಲಿಗೆ ಇಂತಹ ಯೋಜನೆಗಳನ್ನು ಕೊಂಡೊಯ್ಯಿರಿ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ಒಂದು ಜಿಲ್ಲೆ ಅಭಿವೃದ್ಧಿ ಹೊಂದಬೇಕಾದರೆ ಉದ್ಯಮಗಳು ಬರಬೇಕು, ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ನಿಜ. ಆದರೆ, ಮಲೆನಾಡಿನ ಸೂಕ್ಷ್ಮ ಪರಿಸರವನ್ನು ಬಲಿಗೊಟ್ಟು ಮಾಡುವ ಅಭಿವೃದ್ಧಿ ಬೇಕೆ? ಎಂಬ ಪ್ರಶ್ನೆ ಈಗ ಎದ್ದಿದೆ. 'ಬಂಜರು ಭೂಮಿ, ಕೃತಕ ಜೀವನ ಮತ್ತು ಪರಕೀಯ ಸಂಸ್ಕೃತಿ ಇಲ್ಲಿ ಬೇಡ' ಎನ್ನುತ್ತಿರುವ ಜನರ ಕಾಳಜಿ ಕೂಡ ಅಷ್ಟೇ ನ್ಯಾಯಯುತವಾಗಿದೆ.
ಒಟ್ಟಾರೆಯಾಗಿ, ಶಿವಮೊಗ್ಗವನ್ನು ಡಿಜಿಟಲ್ ಹಬ್ ಮಾಡುವ ಉದ್ಯಮಿಗಳ ಆಸೆ ಮತ್ತು ಪರಿಸರವನ್ನು ಉಳಿಸಿಕೊಳ್ಳುವ ಜನರ ಹಠದ ನಡುವೆ ದೊಡ್ಡ ಚರ್ಚೆ ಶುರುವಾಗಿದೆ. ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ.