ತಮ್ಮ ಅಜ್ಜಿಯನ್ನೇ ಕೊಚ್ಚಿ ಕೊಂದ ಮೊಮ್ಮಗನ ಕಾಲಿಗೆ ಶಿವಮೊಗ್ಗ ಪೊಲೀಸರ ಗುಂಡೇಟು! ಎಸ್ಕೇಪ್ ಆಗಲು ಯತ್ನಿಸಿದ್ದ ಕೊಲೆ ಆರೋಪಿ

Kannadaprabha News   | Kannada Prabha
Published : Jul 03, 2026, 10:13 AM IST
Shivamogga Police Shotout

ಸಾರಾಂಶ

ಶಿವಮೊಗ್ಗದಲ್ಲಿ ತನ್ನ ಅಜ್ಜಿಯನ್ನು ಹತ್ಯೆಗೈದಿದ್ದ ಮೊಮ್ಮಗ ಕಿಶೋರ್, ಬಂಧಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ, ಆತನನ್ನು ಬಂಧಿಸಿದ್ದಾರೆ. ಗಾಯಾಳು ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗ: ಬುಧವಾರ ಸಂಜೆ ನಗರದ ಮಿಳಘಟ್ಟದ ಆನಂದರಾವ್ ಬಡಾವಣೆಯಲ್ಲಿ ಮೊಮ್ಮಗನೊಬ್ಬ ತನ್ನ ಅಜ್ಜಿಯನ್ನು ಹತ್ಯೆ ಮಾಡಿರುವ ಘಟನೆ ಸಂಬಂಧ ಗುರುವಾರ ಬೆಳಗ್ಗೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಸುಶೀಲಮ್ಮ (65) ಹತ್ಯೆಯಾದ ದುರ್ದೈವಿ. ಆರೋಪಿ ಮೊಮ್ಮಗ ಕಿಶೋರ್ (26) ಅಜ್ಜಿಯನ್ನೇ ಕೊಲೆಗೈದು ತಲೆಮರೆಸಿಕೊಂಡಿದ್ದ. ಈ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೊಡ್ಡಪೇಟೆ ಠಾಣೆಯ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿ, ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು.

ಖಚಿತ ಮಾಹಿತಿಯ ಮೇರೆಗೆ ಪೊಲೀಸರ ಕಾರ್ಯಚರಣೆ

ಆರೋಪಿಯು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾಜಪೇಯಿ ಬಡಾವಣೆಯಲ್ಲಿ ಇರುವ ಬಗ್ಗೆ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಆತನನ್ನು ಹಿಡಿಯಲು ತೆರಳಿದ್ದ ಪೊಲೀಸರ ಮೇಲೆಯೇ ಆರೋಪಿ ಕಿಶೋರ ಹಲ್ಲೆ ಮಾಡಿದ್ದಾನೆ. ಕಿಶೋರ್ ತನ್ನ ಬಳಿಯಿದ್ದ ಲಾಂಗ್‌ನಿಂದ ಪೊಲೀಸ್ ಸಿಬ್ಬಂದಿ ಗಣೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇನ್‌ಸ್ಪೆಕ್ಟರ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಗಾಯಗೊಂಡ ಸಿಬ್ಬಂದಿ ಗಣೇಶ್ ಹಾಗೂ ಆರೋಪಿ ಕಿಶೋರನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಚಿಕಿತ್ಸೆ ನಡೆಯುತ್ತಿದೆ. ಜಿಲ್ಲಾ ಎಸ್‌ಪಿ ಬಿ.ನಿಖಿಲ್ ಆಸ್ಪತ್ರೆಗೆ ಭೇಟಿಕೊಟ್ಟು ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ.

ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ ಎಸ್ಪಿ. ಬಿ.ನಿಖಿಲ್‌ ಅವರು, ತುಂಗಾನಗರ ವ್ಯಾಪ್ತಿಯಲ್ಲಿ ಪೊಲೀಸ್ ಫೈರಿಂಗ್ ನಡೆದಿದೆ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಮರ್ಡರ್ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಕಿಶೋರ್ ಎಂಬುವನನ್ನು ಅರೆಸ್ಟ್ ಮಾಡಲು ಹೋದಾಗ ಈ ಘಟನೆ ನಡೆದಿದೆ. ಕಾರ್ಯಾಚರಣೆ ವೇಳೆ ಆತ ಒಂದು ಲಾಂಗ್ ತೆಗೆದುಕೊಂಡು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಸಿಬ್ಬಂದಿ ಗಣೇಶ್ ಎಂಬುವವರ ಮೇಲೆ ಈ ಹಲ್ಲೆ ನಡೆದಿದೆ. ಆರೋಪಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಆತ ಶರಣಾಗಿರಲಿಲ್ಲ ಎಂದು ತಿಳಿಸಿದರು.

ಅಲ್ಲದೇ ಹಲ್ಲೆಯನ್ನು ತಡೆಯುವ ನಿಟ್ಟಿನಲ್ಲಿ ಇನ್ಸ್‌ಪೆಕ್ಟರ್ ಸತ್ಯನಾರಾಯಣ ಅವರು ಮೊದಲು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆನಂತರ ಆರೋಪಿ ಕಿಶೋರ್ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಇಬ್ಬರನ್ನೂ ತಕ್ಷಣವೇ ಶಿಫ್ಟ್ ಮಾಡಲಾಗಿದ್ದು, ಪ್ರಸ್ತುತ ಹಲ್ಲೆಗೊಳಗಾದ ಸಿಬ್ಬಂದಿ ಗಣೇಶ್ ಹಾಗೂ ಆರೋಪಿ ಕಿಶೋರ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.

PREV
Read more Articles on
click me!

Recommended Stories

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕೈ ಕೊಟ್ಟ ಮಳೆ: ಬಿತ್ತನೆಗೆ ರೈತರ ಹಿಂದೇಟು
ಬೆಂಗಳೂರು ನಗರದಲ್ಲಿ ಮತ್ತಷ್ಟು ಕಡೆ ಫುಟ್‌ಪಾತ್‌ ಅತಿಕ್ರಮಣ ತೆರವು