ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕೈ ಕೊಟ್ಟ ಮಳೆ: ಬಿತ್ತನೆಗೆ ರೈತರ ಹಿಂದೇಟು

Kannadaprabha News   | Kannada Prabha
Published : Jul 03, 2026, 09:59 AM IST
Farmer and Monsoon

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದೆ, ಶೇ.59ರಷ್ಟು ಕೊರತೆ ಉಂಟಾಗಿದೆ. ಇದರಿಂದಾಗಿ ಭತ್ತ, ಮೆಕ್ಕೆಜೋಳದಂತಹ ಪ್ರಮುಖ ಬೆಳೆಗಳ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಕೃಷಿ ಚಟುವಟಿಕೆಗಳು ಸಂಕಷ್ಟದಲ್ಲಿವೆ.

ಗಣೇಶ್‌ ತಮ್ಮಡಿಹಳ್ಳಿ, ಕನ್ನಡಪ್ರಭ ವಾರ್ತೆ

ಶಿವಮೊಗ್ಗ: ಮುಂಗಾರು ಆರಂಭವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಶಿವಮೊಗ್ಗ ಜಿಲ್ಲೆಯ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದರಿಂದ ಭತ್ತ, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರು ಮೊದಲ ಮಳೆಯ ನಿರೀಕ್ಷೆಯಲ್ಲೇ ಜಮೀನು ಸಿದ್ಧಪಡಿಸಿದ್ದರು. ಆದರೆ, ಕೆಲ ದಿನಗಳ ಅಲ್ಪಮಳೆಯ ನಂತರ ಮಳೆ ಕೈ ಕೊಟ್ಟಿದ್ದು, ಹೊಲಗಳಲ್ಲಿ ಅಗತ್ಯ ಪ್ರಮಾಣದ ತೇವಾಂಶ ಇಲ್ಲದ ಕಾರಣ ಬಿತ್ತನೆ ಕಾರ್ಯವನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆ ಕೊರತೆಯಿಂದ ಕೆರೆ, ಕಾಲುವೆ ಹಾಗೂ ಸಣ್ಣ ಜಲಾಶಯಗಳಲ್ಲಿ ನೀರಿನ ಸಂಗ್ರಹವೂ ಸಮರ್ಪಕವಾಗಿ ಆಗಿಲ್ಲ. ಇದರಿಂದ ನೀರಾವರಿ ಅವಲಂಬಿತ ಪ್ರದೇಶಗಳಲ್ಲೂ ಸಮಸ್ಯೆ ಹೆಚ್ಚಾಗಿದೆ. ಈಗಾಗಲೇ ಮಳೆ ಆರಂಭವಾಗದಿದ್ದರೆ ಕೃಷಿ ವೆಚ್ಚ ಹೆಚ್ಚಾಗುವುದರ ಜೊತೆಗೆ ಇಳುವರಿಯ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೈತರು ಹೇಳುತ್ತಿದ್ದಾರೆ.

ಮೆಕ್ಕೆಜೋಳ ಹಾಗೂ ಇತರ ವಾಣಿಜ್ಯ ಬೆಳೆಗಳನ್ನ ಬೆಳೆಯುವ ರೈತರೂ ಸಹ ಸಂಕಷ್ಟದಲ್ಲಿದ್ದಾರೆ. ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡದಿದ್ದರೆ ಬೆಳೆಯ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಳೆ ಕೊರತೆ ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಜೂನ್‌ನಲ್ಲಿ 59% ಮಳೆ ಕೊರತೆ

ಜಿಲ್ಲೆಯಲ್ಲಿ ಜೂನ್‌ನಲ್ಲಿ ಶೇ.59ರಷ್ಟು ಮಳೆ ಕೊರತೆಯಾಗಿದ್ದು, ಬಿತ್ತನೆಯೂ ಅಷ್ಟಾಗಿ ಆಗಿಲ್ಲ. ಕಳೆದ ವರ್ಷ ಜೂನ್‌ ಅಂತ್ಯಕ್ಕೆ 30200 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ಈ ಬಾರಿ ಮಳೆ ಕೊರತೆ ಕಾರಣ 11400 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಮೆಕ್ಕೆಜೋಳ ಬಿತ್ತನೆಯಾಗಿದೆ.

ಮುಂಗಾರಿನಲ್ಲಿ ಜಿಲ್ಲೆಯಲ್ಲಿ 1,13,458 ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿದೆ. ಈವರೆಗೆ 14806 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಮೆಕ್ಕೆಜೋಳ ಬಿತ್ತನೆ ಹೆಚ್ಚಿದೆ. ಜೂನ್‌ ಅಂತ್ಯಕ್ಕೆ 11480 ಹೆಕ್ಟೇರ್ ಪ್ರದೇಶದಲ್ಲಿ ಪೂರ್ಣಗೊಂಡಿದೆ. ಇನ್ನೂ 66200 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆಯ ಗುರಿ ಹೊಂದಲಾಗಿದೆ. ಈ ಪೈಕಿ ಈವರೆಗೆ 3130 ಹೆಕ್ಟೇರಲ್ಲಿ ಮಾತ್ರ ಬಿತ್ತನೆ ಕಾರ್ಯ ಆಗಿದೆ.

ಮುಂಗಾರು ಹಂಗಾಮಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಭತ್ತ, ಹೈಬ್ರಿಡ್ ಜೋಳ, ರಾಗಿ, ಮೆಕ್ಕೆಜೋಳ, ತೊಗರಿ, ಅಲಸಂದೆ, ಹೆಸರು, ಉದ್ದು, ಅವರೆ, ಹುರುಳಿ, ಶೇಂಗಾ, ಗುರೆಳ್ಳು, ಎಳ್ಳು, ಸೂರ್ಯಕಾಂತಿ, ಸಾಸಿವೆ, ಹರಳು, ಸೋಯಾ ಅವರೆ, ಹತ್ತಿ, ತಂಬಾಕು, ಕಬ್ಬು ಬಿತ್ತನೆ ಮಾಡುತ್ತಾರೆ. ಇಲ್ಲಿಯವರೆಗೆ ಮೆಕ್ಕೆಜೋಳ, ಭತ್ತ ಬಿತ್ತನೆಯಲ್ಲಿ ಒಂದಷ್ಟು ಪ್ರಗತಿಯಾಗಿದೆ.

ಜೂನ್‌ನಲ್ಲೇ ಮಳೆ ಕೊರತೆ

ಮೋಡ ಕಟ್ಟಿದರೂ ಜೋರು ಗಾಳಿ ಅದನ್ನು ಹನಿಯಲು ಬಿಡುತ್ತಿಲ್ಲ. ಜೂನ್ 1ರಿಂದ 30ರವರೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ. ಇದು ಬಿತ್ತನೆ ಕಾರ್ಯಕ್ಕೆ ಅಡ್ಡಿಯಾಗಿದೆ. ಜೂನ್‌ನಲ್ಲಿ ಭದ್ರಾವತಿ ತಾಲೂಕಿನಲ್ಲಿ ವಾಡಿಕೆಯಂತೆ 107.20 ಮಿ.ಮೀ ಮಳೆ ಆಗಬೇಕಿತ್ತು, 40.80 ಮಿ.ಮೀ.ನಷ್ಟು ಮಾತ್ರ ಆಗಿದೆ. ತೀರ್ಥಹಳ್ಳಿಯಲ್ಲಿ 564.80 ಮಿ.ಮೀ ಪೈಕಿ 189.60 ಮಿ.ಮೀ ಮಳೆಯಾಗಿದೆ. ಸಾಗರದಲ್ಲಿ 490.90 ಮಿ.ಮೀ ಪೈಕಿ 341.30 ಮಿ.ಮೀ. ಮಳೆಯಾಗಿದೆ. ಶಿವಮೊಗ್ಗದಲ್ಲಿ 111.20 ಮಿ.ಮೀ. ಪೈಕಿ 75.20 ಮಿ.ಮೀ, ಶಿಕಾರಿಪುರದಲ್ಲಿ 145.80 ಮಿ.ಮೀ. ಪೈಕಿ 76.80 ಮಿ.ಮೀ, ಸೊರಬದಲ್ಲಿ 275.50 ಮಿ.ಮೀ. 124.70 ಮಿ.ಮೀ, ಹೊಸನಗರದಲ್ಲಿ 661 ಮಿ.ಮೀ. ಪೈಕಿ 254.70 ಮಿ.ಮೀ. ಮಳೆಯಾಗಿದೆ.

ಮಳೆ ಕೊರತೆಯಿಂದ ಮೆಕ್ಕೆಜೋಳ ಬಿತ್ತನೆಗೆ ಹಿನ್ನಡೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 45807 ಹೆಕ್ಟೆರ್ ಬಿತ್ತನೆಯ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಬರೀ 11480 ಹೆಕ್ಟೇರ್ ಮಾತ್ರ ಬಿತ್ತನೆ ಆಗಿದೆ. ಭತ್ತ ಬಿತ್ತನೆಗೆ ಆಗಸ್ಟ್‌ವರೆಗೆ ಸಮಯವಿದೆ. ಜುಲೈನಲ್ಲಿ ಉತ್ತಮ ಮಳೆ ನಿರೀಕ್ಷೆ ಇದ್ದು, ಬಿತ್ತನೆಯೂ ಹೆಚ್ಚಾಗುವ ನಿರೀಕ್ಷೆ ಇದೆ.

- ಕಿರಣ್ ಕುಮಾರ್‌, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಶಿವಮೊಗ್ಗ.

PREV
Read more Articles on
click me!

Recommended Stories

ಬೆಂಗಳೂರು ನಗರದಲ್ಲಿ ಮತ್ತಷ್ಟು ಕಡೆ ಫುಟ್‌ಪಾತ್‌ ಅತಿಕ್ರಮಣ ತೆರವು
ಮಂಡ್ಯ: ನಡುರಸ್ತೆಯಲ್ಲೇ ಲಾರಿ ಚಾಲಕನ ಮೇಲೆ ಪ್ರಭಾವಿಯ ಪುತ್ರ ಮತ್ತು ಗ್ಯಾಂಗ್‌ನಿಂದ ಗುಂಡಿನ ದಾಳಿ, ದರೋಡೆ ಯತ್ನ!