ದೇಶದ ಅಡಕೆ GSTಯಲ್ಲಿ ಕರ್ನಾಟಕದ ಸಿಂಹಪಾಲು; ಶಿವಮೊಗ್ಗ ಸಂಸದ ರಾಘವೇಂದ್ರ ಪ್ರಶ್ನೆಗೆ ಕೇಂದ್ರದ ಮಾಹಿತಿ

Naveen Kodase   | Kannada Prabha
Published : Aug 11, 2026, 11:27 AM IST
Arecanut BY Raghavendra

ಸಾರಾಂಶ

ದೇಶದ ಒಟ್ಟು ಅಡಕೆ ಆಧಾರಿತ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ಶೇ.76ಕ್ಕಿಂತ ಅಧಿಕ ಪಾಲು ಹೊಂದಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮಾಹಿತಿ ಬಹಿರಂಗಪಡಿಸಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದ ಕೊಡುಗೆಯು ಶೇ.120ರಷ್ಟು ಹೆಚ್ಚಾಗಿದ್ದು, ಇದು ಮಲೆನಾಡು ಮತ್ತು ಕರಾವಳಿ ಪ್ರದೇಶಗಳ ಆರ್ಥಿಕತೆಗೆ ಅಡಕೆ ಬೆಳೆಯ ಮಹತ್ವವನ್ನು ತೋರಿಸುತ್ತದೆ.

ಶಿವಮೊಗ್ಗ: ದೇಶದ ಅಡಕೆ ಆಧಾರಿತ ಆರ್ಥಿಕತೆಯಲ್ಲಿ ಕರ್ನಾಟಕ ಪ್ರಬಲ ಪಾತ್ರವನ್ನು ವಹಿಸುತ್ತಲೇ ಇದ್ದು, ದೇಶದ ಒಟ್ಟು ಅಡಕೆ ಮತ್ತು ಅಡಿಕೆ ಆಧಾರಿತ ಉತ್ಪನ್ನಗಳ ಜಿಎಸ್‌ಟಿ ಸಂಗ್ರಹದಲ್ಲಿ ಶೇ.76 ಕ್ಕಿಂತ ಅಧಿಕ ಪಾಲು ಹೊಂದಿದೆ. ಪ್ರಸಕ್ತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ರಾಜ್ಯವಾರು ಜಿಎಸ್‌ಟಿ ಸಂಗ್ರಹ ವಿವರಗಳ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವಾಲಯ ನೀಡಿರುವ ಮಾಹಿತಿಯಿಂದ ಇದು ಬಹಿರಂಗವಾಗಿದೆ.

ಅಡಿಕೆ ಜಿಎಸ್‌ಟಿಯಲ್ಲಿ ನಮ್ಮ ರಾಜ್ಯದ್ದೇ ಸಿಂಹಪಾಲು

ಕೇಂದ್ರ ವಿತ್ತ ಸಚಿವಾಲಯ ನೀಡಿರುವ ರಾಜ್ಯವಾರು ದತ್ತಾಂಶದ ಪ್ರಕಾರ, ಭಾರತ 2025–26ನೇ ಹಣಕಾಸು ವರ್ಷದಲ್ಲಿ ಅಡಿಕೆ ಮತ್ತು ಅಡಿಕೆ ಆಧಾರಿತ ಉತ್ಪನ್ನಗಳಿಂದ 496.34 ಕೋಟಿ ರು. ಜಿಎಸ್‌ಟಿ ಸಂಗ್ರಹಿಸಿದ್ದು, ಇದರಲ್ಲಿ ಕರ್ನಾಟಕವೇ 379.34 ಕೋಟಿ ರು.ಗಳಷ್ಟು - ಅಂದರೆ ಶೇ. 76.42 ರಷ್ಟು ಕೊಡುಗೆ ನೀಡಿದೆ. ಹಾಗೆಯೇ, ವರ್ಷದಿಂದ ವರ್ಷಕ್ಕೆ ಕರ್ನಾಟಕದ ಪಾಲು ಕೂಡ ಏರಿಕೆಯಾಗುತ್ತಲೇ ಇದ್ದು, ಈ ಅಂಕಿ ಅಂಶಗಳು, ಇಡೀ ಅಡಕೆ, ಒಡೆದ ಅಡಕೆ ಸೇರಿದಂತೆ ಎಲ್ಲ ಅಡಕೆಗಳಿಂದ ಎಚ್‌ಎಸ್‌ಎನ್‌ (ಹಾರ್ಮೋನೈಸ್ಡ್ ಸಿಸ್ಟಮ್ ಆಫ್ ನಾಮನ್ಕ್ಲೆಚರ್) ಕೋಡ್‌ಗಳ ಅಡಿಯ ಜಿಎಸ್‌ಟಿ ಸಂಗ್ರಹವನ್ನು ಒಳಗೊಂಡಿದೆ.

ರಾಜ್ಯದ ಜಿಎಸ್‌ಟಿ ಸಂಗ್ರಹ 2021–22ನೇ ಹಣಕಾಸು ವರ್ಷದಲ್ಲಿ 172.62 ಕೋಟಿ ರು. ನಿಂದ 2025–26ನೇ ಹಣಕಾಸು ವರ್ಷದಲ್ಲಿ 379.34 ಕೋಟಿ ರು.ಗೆ ಏರಿಕೆಯಾಗಿದೆ. ಅಂದರೆ, ಕಳೆದ ಐದು ವರ್ಷಗಳಲ್ಲಿ ಸುಮಾರು ಶೇ.120 ಹೆಚ್ಚಳವಾಗಿದೆ. ಇದೇ ಪ್ರವೃತ್ತಿ ಪ್ರಸಕ್ತ ಹಣಕಾಸು ವರ್ಷದಲ್ಲೂ ಮುಂದುವರೆದಿದ್ದು, 2026–27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಕರ್ನಾಟಕ ಈ ವಲಯದಿಂದ 90.02 ಕೋಟಿ ರು. ಜಿಎಸ್‌ಟಿ ಸಂಗ್ರಹಿಸಿದೆ. ಇದೇ ಅವಧಿಯಲ್ಲೂ ರಾಷ್ಟ್ರೀಯ ಜಿಎಸ್‌ಟಿ ಸಂಗ್ರಹ 117.99 ಕೋಟಿ ರು.ಗಳಾಗಿದ್ದು, ಇದರಲ್ಲಿ ರಾಜ್ಯದ ಕೊಡುಗೆ ಸರಿಸುಮಾರು ಶೇ.76.3 ರಷ್ಟಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ವೈ.ರಾಘವೇಂದ್ರ, ಈ ಅಂಕಿ-ಅಂಶಗಳು ಕರ್ನಾಟಕದಲ್ಲಿ ಅಡಕೆ ಬೆಳೆಯ ಅಪಾರ ಆರ್ಥಿಕ ಪ್ರಾಮುಖ್ಯತೆಯನ್ನು ಮತ್ತು ನಮ್ಮ ರೈತರು ರಾಷ್ಟ್ರೀಯ ಆರ್ಥಿಕತೆಗೆ ನೀಡುತ್ತಿರುವ ಕೊಡುಗೆಯ ಪ್ರಾಮುಖ್ಯತೆಯನ್ನು ತಿಳಿಸಿಕೊಡುತ್ತಿವೆ. ನಮ್ಮ ಮಲೆನಾಡು ಮತ್ತು ಕರಾವಳಿ ಪ್ರದೇಶಗಳು ಲಕ್ಷಾಂತರ ಅಡಕೆ ಬೆಳೆಗಾರರ ಕುಟುಂಬಗಳಿಗೆ ನೆಲೆಯಾಗಿದ್ದು, ಅವರ ಜೀವನೋಪಾಯವೇ ಅಡಕೆ ಕೃಷಿಯನ್ನು ಅವಲಂಬಿಸಿದೆ. ಅವರೆಲ್ಲರ ಪರವಾಗಿ ಸಂಸತ್ತಿನಲ್ಲಿ ನಿರಂತರ ಧ್ವನಿಯೆತ್ತುವ ಜೊತೆಗೆ ಸದೃಢ ನೀತಿಗಳು, ವೈಜ್ಞಾನಿಕ ಸಂಶೋಧನೆ, ರೋಗ ನಿರ್ವಹಣೆ, ಮಾರುಕಟ್ಟೆ ಸ್ಥಿರತೆ ಮತ್ತು ನಮ್ಮ ಬೆಳೆಗಾರರ ​​ದೀರ್ಘಕಾಲೀನ ಹಿತಾಸಕ್ತಿಗಳನ್ನು ರಕ್ಷಿಸುವಂತಹ ಎಲ್ಲ ಅಗತ್ಯ ಕ್ರಮಗಳಿಗೆ ನನ್ನ ಪ್ರಾಮಾಣಿಕ ಪ್ರಯತ್ನಗಳು ಮುಂದುವರಿಯಲಿವೆ ಎಂದು ಅವರು ಹೇಳಿದರು.

PREV
Read more Articles on
click me!

Recommended Stories

ಬೆಂಗಳೂರು: ಆ.15ರ ಒಳಗೆ ಖಾಲಿ ನಿವೇಶನ ಸ್ವಚ್ಛ ಮಾಡದಿದ್ರೆ ಮಾಲೀಕರಿಗೆ ಸೈಟ್‌ ಗಾತ್ರದಂತೆ ದುಪ್ಪಟ್ಟು ದಂಡ
ಹುಬ್ಬಳ್ಳಿ ಆಂಕೋಲಾ ನಡುವೆ ₹18,424 ಕೋಟಿ ವೆಚ್ಚದ ಹೊಸ ರೈಲ್ವೆ ಯೋಜನೆ; ಬರೋಬ್ಬರಿ 57 ಸುರಂಗ ನಿರ್ಮಾಣ