ಶಿವಮೊಗ್ಗದಲ್ಲಿ ಸಕಾಲಕ್ಕೆ ಸಿಗದ ಆಂಬುಲೆನ್ಸ್; ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಣಂತಿ ದುರಂತ ಅಂತ್ಯ!

Published : Jan 27, 2026, 07:39 PM IST
Shivamogga Kavya death

ಸಾರಾಂಶ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ, ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಕಾಲದಲ್ಲಿ ಆಂಬುಲೆನ್ಸ್ ಸಂಪರ್ಕಿಸಲು ಸಾಧ್ಯವಾಗದೆ, ತೀವ್ರ ಕಾಲುನೋವಿನಿಂದ ಬಳಲುತ್ತಿದ್ದ ಬಾಣಂತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮಗು ಕಳೆದುಕೊಂಡಿದ್ದ ತಾಯಿಯೂ ಸಾವು ಕಂಡಿದ್ದಾರೆ.

ಶಿವಮೊಗ್ಗ (ಜ.27): ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ದೆಮ್ಲಾಪುರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದ ಬಾಣಂತಿಯೊಬ್ಬರು ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಆಂಬುಲೆನ್ಸ್ ಸಂಪರ್ಕಿಸಲು ಸಾಧ್ಯವಾಗದ ಕಾರಣ ಈ ಅಕಾಲಿಕ ಸಾವು ಸಂಭವಿಸಿದೆ ಎಂಬ ಕಹಿ ಸತ್ಯ ಹೊರಬಂದಿದೆ.

ಘಟನೆಯ ವಿವರ

ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮದ ಪೋಸ್ಟ್ ಮಾಸ್ಟರ್ ಮಂಜುನಾಥ್ ಅವರ ಪತ್ನಿ ಕಾವ್ಯ (29) ಮೃತಪಟ್ಟ ದುರ್ದೈವಿ. ಹೆರಿಗೆಯ ನಂತರ ಕಾವ್ಯ ಅವರು ಕೋಣಂದೂರು ಸಮೀಪದ ದೆಮ್ಲಾಪುರದಲ್ಲಿರುವ ತವರು ಮನೆಯಲ್ಲಿದ್ದರು. ಆದರೆ, ಜನವರಿ 1ರಂದು ಅವರಿಗೆ ಜನಿಸಿದ ಮಗು ಕೂಡ ಸಾವನ್ನಪ್ಪಿತ್ತು. ಮಗುವಿನ ಸಾವಿನಿಂದ ಕಾವ್ಯ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ತೀವ್ರ ಕುಗ್ಗಿದ್ದರು ಎಂದು ಹೇಳಲಾಗಿದೆ.

ನೆಟ್‌ವರ್ಕ್ ಸಮಸ್ಯೆಯೇ ಮುಳುವಾಯಿತೇ?

ಕಾವ್ಯ ಅವರಿಗೆ ತೀವ್ರ ಕಾಲು ನೋವು ಕಾಣಿಸಿಕೊಂಡ ತಕ್ಷಣ, ಕುಟುಂಬಸ್ಥರು ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್‌ಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ದೆಮ್ಲಾಪುರ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಇದ್ದ ಕಾರಣ ಆಂಬುಲೆನ್ಸ್ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಸಮಯ ವ್ಯರ್ಥವಾಗಬಾರದೆಂದು ಕುಟುಂಬದವರು ತಕ್ಷಣವೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಆದರೆ ದುರದೃಷ್ಟವಶಾತ್ ಆಸ್ಪತ್ರೆ ತಲುಪುವ ಮೊದಲೇ ಕಾವ್ಯ ಸಾವನ್ನಪ್ಪಿದ್ದಾರೆ.

ತಹಶೀಲ್ದಾರ್ ಭೇಟಿ ಮತ್ತು ತನಿಖೆ

ವಿಷಯ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ತಹಶೀಲ್ದಾರ್ ರಂಜಿತ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. 'ಮದುವೆಯಾದ 7 ವರ್ಷದೊಳಗೆ ಮಹಿಳೆಯರು ಮೃತಪಟ್ಟರೆ ನಿಯಮದಂತೆ ಮರಣೋತ್ತರ ಪರೀಕ್ಷೆ ಮತ್ತು ಕೂಲಂಕಷ ತನಿಖೆ ನಡೆಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ಆಯಾಮಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ' ಎಂದು ತಿಳಿಸಿದ್ದಾರೆ. ಪ್ರಸ್ತುತ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಮಗುವಿನ ಬೆನ್ನಲ್ಲೇ ತಾಯಿಯೂ ಮೃತಪಟ್ಟಿರುವುದು ಇಡೀ ಮೇಳಿಗೆ ಮತ್ತು ದೆಮ್ಲಾಪುರ ಗ್ರಾಮಗಳಲ್ಲಿ ಮೌನ ಆವರಿಸುವಂತೆ ಮಾಡಿದೆ.

PREV
Read more Articles on
click me!

Recommended Stories

ಬೆಂಗಳೂರಿನ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಪಾರ್ಕಿಂಗ್; ನಿಮ್ಮ ಹತ್ತಿರದ ನಿಲ್ದಾಣ ಯಾವುದಿದೆ ಚೆಕ್ ಮಾಡಿ
Dharwad: 15ಕ್ಕೂ ಹೆಚ್ಚು ಜನರ ಮೇಲೆ ದಾಳಿಗೈದು ಕಚ್ಚಿದ ನಾಯಿಯನ್ನು ಕೊಂದ ಗ್ರಾಮಸ್ಥರು