
ಆನಂದಪುರ, ಶಿವಮೊಗ್ಗ (ಆ.29): ತನ್ನ ಸಾಕು ನಾಯಿಯನ್ನು ಕಚ್ಚಿತು ಎನ್ನುವ ಕಾರಣಕ್ಕೆ ಬೀದಿ ನಾಯಿಯೊಂದನ್ನು ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದ ಘಟನೆ ಗುರುವಾರ ಶಿವಮೊಗ್ಗ ಜಿಲ್ಲೆಯ ನಾಡವಳ್ಳಿ ಗ್ರಾಮದಲ್ಲಿ ನಡೆದಿದೆ. ರಸ್ತೆಯಲ್ಲಿ ಸಾಕು ನಾಯಿಯೊಂದಿಗೆ ತೆರಳುತ್ತಿದ್ದಾಗ ಅದಕ್ಕೆ ಬೀದಿ ನಾಯಿ ಕಚ್ಚಿದೆ. ಇದನ್ನು ಗಮನಿಸಿದ ಸಾಕುನಾಯಿ ಮಾಲೀಕ ಲಿಂಗಮೂರ್ತಿ, ತಕ್ಷಣವೇ ತನ್ನಲ್ಲಿದ್ದ ಬಂದೂಕಿನಿಂದ ಬೀದಿ ನಾಯಿಗೆ ಹೊಡೆದ ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿದೆ.
ಆಪಾದಿತ ಲಿಂಗಮೂರ್ತಿ ಪರವಾನಗಿ ಇಲ್ಲದೆ ಬಂದೂಕು ಬಳಸಿದ ಬಗ್ಗೆ ಹಾಗೂ ಬೀದಿ ನಾಯಿಯನ್ನು ಬಂದೂಕಿನಿಂದ ಕೊಂದ ಪ್ರಕರಣವನ್ನು ಆನಂದಪುರ ಠಾಣೆ ಪೊಲೀಸರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಗ್ರಾಮದ ಬೋರಪ್ಪ ಎಂಬವರು ಪ್ರತಿನಿತ್ಯ ದನ ಮೇಯಿಸಲು ತೆರಳುತ್ತಿದ್ದ ವೇಳೆ ಅವರೊಂದಿಗೆ ಬೀದಿ ನಾಯಿಯೊಂದು ಹಿಂಬಾಲಿಸಿ ಬರುತ್ತಿತ್ತು. ಅದೇ ನಾಯಿ ಗ್ರಾಮದ ಲಿಂಗಮೂರ್ತಿಯ ಮನೆ ಬಳಿ ಬಂದಾಗ ಅಲ್ಲಿದ್ದ ಸಾಕು ನಾಯಿಗಳನ್ನು ಕಚ್ಚಿತ್ತು. ಇದರಿಂದ ಕೋಪಗೊಂಡಿದ್ದ ಆರೋಪಿ ನಾಯಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಆರೋಪಿ ವಿರುದ್ಧ ಬಿಎನ್‌ಎಸ್ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಆನಂದಪುರ (Anandapura) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.