
ಶಿವಮೊಗ್ಗ (ಜ.01): ಹಲವು ವರ್ಷಗಳಿಂದ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಕೊಂಡಿದ್ದ ಜೋಡಿ 2025ರ ಹೊಸ ವರ್ಷದಿಂದ ಸುಂದರ ಜೀವನ ಕಟ್ಟಿಕೊಳ್ಳಬೇಕು ಎಂಬ ನೂರೆಂಟು ಕನಸು ಕಟ್ಟಿಕೊಂಡಿದ್ದರು. ಆದರೆ, ಗಂಡ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಇತ್ತ ಹೆಂಡತಿಯೂ ಸಾವಿಗೀಡಾಗಿದ್ದಾಳೆ.
ಈ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮೇಲಿನ ಬೆಸಿಗೆ ಗ್ರಾಮದಲ್ಲಿ ನಡೆದಿದೆ. ಹೊಸ ವರ್ಷದ ಹಿಂದಿನ ದಿನದಂದು ಸಂಜೆ ಮನೆಯಿಂದ ಹೊರಗೆ ಹೋದ ಗಂಡ ಬೈಕ್ ಅಪಘಾತದಲ್ಲಿ ಸಾವನಪ್ಪಿದ್ದಾನೆ ಎಂಬ ಸುದ್ದಿ ತಿಳಿದು ಪತ್ನಿಯು ಸಾವಿಗೆ ಶರಣಾಗಿದ್ದಾಳೆ. ಸುತ್ತ ಗ್ರಾಮದ ಕಿಲ್ಲೆ ಕ್ಯಾತರ ಕ್ಯಾಂಪಿನ 25ರ ಹರೆಯದ ಮಂಜುನಾಥ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಆಗಿದ್ದಾನೆ. ಶಿಕಾರಿಪುರದ ಬಳಿ ಬೈಕ್ ಅಪಘಾತವಾಗಿದ್ದು ಆತನನ್ನು ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ 9:30 ವೇಳೆಗೆ ಮಂಜುನಾಥ ಮೃತಪಟ್ಟಿದ್ದಾನೆ.
ಪ್ರೀತಿಸಿ ಮದುವೆಯಾದ ಗಂಡನಿಗೆ ಅಪಘಾತ ಆಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯವರು ಹೋಗಿದ್ದು, ಆತನಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬರುತ್ತಾರೆ ಎಂದು ಮನೆಯಲ್ಲಿ ದೇವರ ಮೇಲೆ ಭಾರ ಹಾಕಿ ಬಾಗಿಲ ಬಳಿ ಕಾಯುತ್ತಾ ನಿಂತಿದ್ದ ಅಮೃತಾಳಿಗೆ ಬಂದಿದ್ದು ಮಾತ್ರ ಬರಸಿಡಿಲಿನಂತಹ ಸುದ್ದಿ. ನಿನ್ನ ಗಂಡ ಬದುಕಲಿಲ್ಲ, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಗಂಡ ಇಲ್ಲವೆಂಬ ಸುದ್ದಿ ತಿಳಿಯುತ್ತಿದ್ದಂತೆ ತೀವ್ರ ಹತಾಶೆಗೊಳಗಾದ ಹೆಂಡತಿ ಅಮೃತಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ: ಹೊಸ ವರ್ಷದ ದಿನವೇ ಬಯೋಕಾನ್ ಉದ್ಯೋಗಿ ನಿಗೂಢ ಸಾವು
ಈ ಮೂಲಕ ಯುವ ದಂಪತಿಗಳು ದಾರುಣ ಅಂತ್ಯ ಕಂಡಿರುವ ಘಟನೆ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಮೈಸೂರು ನಿವಾಸಿಯಾಗಿದ್ದ ಅಮೃತ ಅವರನ್ನು ಮಂಜುನಾಥ್ ಪ್ರೀತಿಸಿ ಕೊಲ್ಲೂರಿನಲ್ಲಿ ಮದುವೆ ಮಾಡಿಕೊಂಡಿದ್ದನು. ಇಬ್ಬರೂ ಸುಖವಾಗಿ ಸಂಸಾರ ಮಾಡುತ್ತಾ, ಸುಂದರ ಜೀವನದ ಕನಸು ಕಂಡಿದ್ದರು. ಆದರೆ, ವಿಧಿಯಾಟವೇ ಬೇರೆ ಇತ್ತು ಎನಿಸುತ್ತದೆ. ಇದೀಗ ಯುವ ಜೋಡಿ ಇಬ್ಬರೂ ಸಾವಿನಲ್ಲಿ ಒಂದಾಗಿದ್ದಾರೆ. ಇನ್ನು ಅಮೃತ ಎಂಬ ಮಹಿಳೆ ಸಾವಿನ ಸುದ್ದಿ ತಿಳಿದ ಹೊಸನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿದ್ದಾರೆ. ಈ ಘಟನೆಯ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.