ದಸರಾ ವೈಭವಕ್ಕೆ ಆನೆ-ಅಂಬಾರಿ ಅವಘಡದ ಕಪ್ಪುಚುಕ್ಕೆ..! ಈ ಘಟನೆ ಅಪಶಕುನ?

Kannadaprabha News   | Kannada Prabha
Published : Oct 23, 2026, 09:53 AM IST
Shivamogga Dasara Mishap

ಸಾರಾಂಶ

ಶಿವಮೊಗ್ಗದ ವಿಜಯದಶಮಿ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿ ಓಡಿದ ಪರಿಣಾಮ ಚಾಮುಂಡೇಶ್ವರಿ ವಿಗ್ರಹ ನೆಲಕ್ಕುರುಳಿ ಹಾನಿಯಾಗಿದೆ. ಕಡೇ ಕ್ಷಣದಲ್ಲಿ ಆನೆಗಳ ಸರತಿ ಸಾಲಿನಲ್ಲಿ ಮಾಡಿದ ಬದಲಾವಣೆ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಈ ದೊಡ್ಡ ಅನಾಹುತಕ್ಕೆ ಕಾರಣ ಎಂದು ಹೇಳಲಾಗಿದೆ.

ಕನ್ನಡಪ್ರಭ ವಾರ್ತೆ, ವಿಶೇಷ ವರದಿ

ಶಿವಮೊಗ್ಗ: ಶಿವಮೊಗ್ಗದಲ್ಲಿ ವಿಜಯದಶಮಿ ದಿನ ಅಂಬಾರಿ ಹೊತ್ತಿದ್ದ ಸೋಮಣ್ಣ ಹೆಸರಿನ ಆನೆಯಿಂದ ಆದ ಅವಘಡ ಅರಣ್ಯ ಇಲಾಖೆಯ ಅಧಿಕಾರಿಗಳು, ಕಾವಾಡಿಗಳು ಹಾಗೂ ಮಾವುತರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಬಿಚ್ಚಿಟ್ಟುರುವುದು ಒಂದೆಡೆಯಾದರೆ, ಶಿವಮೊಗ್ಗ ಜಂಬೂಸವಾರಿ ಇತಿಹಾಸದಲ್ಲೇ ಈ ಘಟನೆ ದೊಡ್ಡ ಕಪ್ಪುಚುಕ್ಕೆಯಾಗಿ ಉಳಿಯುವಂತಾಗಿದೆ.

ಶಿವಮೊಗ್ಗ ನಗರದಲ್ಲಿ ಬುಧವಾರ ವಿಜಯದಶಮಿ ಅಂಗವಾಗಿ ಚಾಮುಂಡೇಶ್ವರಿ ಬೆಳ್ಳಿಯ ವಿಗ್ರಹ ಹೊತ್ತಿದ್ದ ಸೋಮಣ್ಣ ಆನೆ ಸ್ವಲ್ಪ ದೂರ ಸಾಗಿದ ಬಳಿಕ ಹಿಂತಿರುಗಿ ಮಾಡಿದ ಅವಾಂತರದಿಂದ ಅಂಬಾರಿ ಮೆರವಣಿಗೆಯನ್ನೇ ರದ್ದು ಮಾಡಲಾಯಿತು.

ಹಾಗೆ ನೋಡಿದರೆ ಅಂಬಾರಿ ಮೆರವಣಿಗೆ ಅರ್ಧಕ್ಕೆ ಮೊಟಕುಕೊಂಡಿದ್ದು ಇದೇ ಮೊದಲೇನಲ್ಲ. 2019 ರಲ್ಲಿ ಅಂಬಾರಿ ಹೊತ್ತಿದ್ದ ಸಾಗರ ಆನೆ ಅಸ್ವಸ್ಥಗೊಂಡಿತ್ತು. ಹೀಗಾಗಿ ಅಂದು ಲಾರಿಯಲ್ಲಿ ಅಂಬಾರಿ ಮೆರವಣಿಗೆಯನ್ನು ಮುಂದುವರಿಸಲಾಯಿತು. 2021 ರಲ್ಲಿ ಕೊರೋನಾ ಕಾರಣದಿಂದಾಗಿ ಅಂಬಾರಿ ಮೆರವಣಿಗೆ ಇರಲಿಲ್ಲ. 2023 ರಲ್ಲಿ ಅಂಬಾರಿ ಮೆರವಣಿಗೆ ಹಿನ್ನೆಲೆಯಲ್ಲಿ ತಯಾರಿಯೊಂದಿಗೆ ಆಗಮಿಸಿದ್ದ ಹೆಣ್ಣಾನೆ ನೇತ್ರಾವತಿ ವಿಜಯದಶಮಿ ಹಿಂದಿನ ದಿನ ಮರಿ ಹಾಕಿದ ಪರಿಣಾಮ ಅಂಬಾರಿ ಮೆರವಣಿಗೆ ಇರಲಿಲ್ಲ.

ಈ ವರ್ಷ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಮಾಡಿದ ಅವಾಂತರದಿಂದ ಬೆಳ್ಳಿಯ ಮಂಟಪ ಸಹಿತ ದೇವಿಯ ವಿಗ್ರಹ ನೆಲಕ್ಕುರುಳಿ ಹಾನಿಗೀಡಾಗಿದೆ. ಕಾರು, ಬೈಕು, ಮನೆಯೊಂದರ ಮೇಲ್ಛಾವಣಿಗೂ ಹಾನಿಯಾಗಿದೆ. ಈ ರೀತಿಯ ಘಟನೆ ಹಿಂದೆಂದೂ ನಡೆದಿಲ್ಲ. ಹೀಗಾಗಿ ಈ ಘಟನೆ ಶಿವಮೊಗ್ಗ ಜಂಬೂಸವಾರಿ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕಿಯಾಗಿ ಉಳಿಯುವುದರಲ್ಲಿ ಯಾವ ಅನುಮಾನವೂ ಇಲ್ಲ.

ಅವಘಡದ ಹಿಂದೆ ನಿರ್ಲಕ್ಷ್ಯದ ಹುತ್ತ!:

ವಿಜಯದಶಮಿ ದಿನ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆಯಿಂದ ಆದ ಅವಘಡ ಈಗ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈ ದುರ್ಘಟನೆಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿರುವ ಆರೋಪವಾಗಿದೆ. ಇದಕ್ಕೆ ಕಾರಣ 6 ಬಾರಿ ಅಂಬಾರಿ ಹೊತ್ತಿದ್ದ ಅನುಭವ ಇರುವ ಸಾಗರ್ ಆನೆ ಬದಲಿಗೆ ಕೊನೆ ಘಳಿಗೆಯಲ್ಲಿ ಅಂಬಾರಿ ಹೋರುವ ಜವಾಬ್ದಾರಿಯನ್ನು ಸೋಮಣ್ಣನಿಗೆ ನೀಡಿದ್ದು. ಮೊದಲ ಬಾರಿ ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸೋಮಣ್ಣ ಆನೆಗೆ ಅಂಬಾರಿ ಜವಾಬ್ದಾರಿ ಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಇನ್ನೂ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ.

ಗಮನಿಸಬೇಕಿತ್ತು:

ಅಲ್ಲದೆ ಮೆರವಣಿಗೆ ಆರಂಭಕ್ಕೂ ಮುನ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ವೇಳೆ ಮಂಗಳವಾದ್ಯಗಳ ಸದ್ದಿಗೆ ಸೋಮಣ್ಣ ಆನೆ ಹೆದರಿ ಹಿಂತಿರುಗಿ ನಿಂತಿತ್ತು. ಈ ವೇಳೆ ಮಂಗಳವಾದ್ಯಗಳನ್ನು ನಿಲ್ಲಿಸಿ ನಂದಿ ಧ್ವಜ ಪೂಜೆಯನ್ನು ನೆರವೇರಿಸಲಾಗಿದೆ. ಈ ಬೆಳೆವಣಿಗೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ.

ಸಣ್ಣ ತಪ್ಪು, ದೊಡ್ಡ ಅನಾಹುತ!

ಕಡೇ ಕ್ಷಣದಲ್ಲಿ ಸರತಿ ಸಾಲಿನಲ್ಲಿ ಆದ ಬದಲಾವಣೆಯೇ ಸೋಮಣ್ಣ ಆನೆ ಗಲಿಬಿಲಿಗೊಂಡು ಓಡಲು ಕಾರಣ ಎಂದು ಹೇಳಲಾಗುತ್ತಿದೆ. ಅಂಬಾರಿ ಮೆರವಣಿಗೆ ಹಿನ್ನೆಲೆ ನಡೆದ ತಾಲೀಮು ವೇಳೆ ಸಾಗರ್‌ ಆನೆ ಮೊದಲು, ನಂತರ ಸೋಮಣ್ಣ ಮತ್ತು ಅದರ ಹಿಂಬದಿ ಬಹದ್ದೂರ್‌ ಆನೆ ಸರತಿಯಲ್ಲಿ ಸಾಗುತ್ತಿದ್ದವು. ಆದರೆ, ಜಂಬೂ ಸವಾರಿ ವೇಳೆ ಈ ಸರತಿ ಸಾಲಿನಲ್ಲಿ ಬದಲಾವಣೆ ಆಯಿತು.

ಸಾಗರ್‌ ಆನೆಗೆ ದಸರಾ ಮೆರವಣಿಗೆ ಹೊಸತಲ್ಲ. ಆದ್ದರಿಂದ ಸಾಗರ್‌ ಆನೆಯನ್ನು ಸರತಿಯಲ್ಲಿ ಮೊದಲಿಗೆ ಕಳುಹಿಸಲಾಗುತ್ತಿತ್ತು. ಸಾಗರ್‌ ಆನೆ ಮುಂದೆ ಸಾಗುತ್ತಿದ್ದಾಗ ಸೋಮಣ್ಣ ಆನೆ ಅದನ್ನು ಹಿಂಬಾಲಿಸುತ್ತಿತ್ತು. ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಪುಷ್ಪ ನಮನ ಸಲ್ಲಿಸುವಾಗಲು ಅರಣ್ಯ ಇಲಾಖೆ ನಿಗದಿಪಡಿಸಿದ ರೀತಿಯಲ್ಲೇ ಸಾಗರ್‌, ಅಂಬಾರಿ ಹೊತ್ತ ಸೋಮಣ್ಣ, ಬಹದ್ದೂರ್‌ ಆನೆಗಳು ಸರತಿಯಲ್ಲಿ ಸಾಗುತ್ತಿದ್ದವು. ಇದಾದ ಬಳಿಕ ಸ್ವಲ್ಪ ದೂರ ಹೋದ ನಂತರ ಈ ಸರತಿಯಲ್ಲಿ ಬದಲಾವಣೆ ಆಯಿತು. ಸಾಗರ್‌ ಆನೆಯನ್ನು ಹಿಂದಕ್ಕೆ ಕಳುಹಿಸಲಾಯಿತು. ಅಂಬಾರಿ ಹೊತ್ತ ಆನೆ ಮೊದಲಿಗೆ ಇರಬೇಕು ಎಂದು ಸೋಮಣ್ಣ ಆನೆಯನ್ನು ಮುಂದಕ್ಕೆ ಬಿಡಲಾಯಿತು. ಮೆರವಣಿಗೆ ಅರಂಭದಲ್ಲಿಯೆ ವಾದ್ಯಗಳ ಶಬ್ದಕ್ಕೆ ಬೆದರಿದ್ದ ಸೋಮಣ್ಣ, ತನ್ನ ಮುಂದಿದ್ದ ಸಾಗರ್‌ ಆನೆ ಕಾಣದೆ ಹೋದಾಗ ಸಹಜವಾಗಿಯೇ ಹಿಂತಿರುಗಿದೆ. ಆಗ ನೆರೆದಿದ್ದ ಸಾರ್ವಜನಿಕರು ಆತಂಕದಿಂದ ಗಲಾಟೆ ಮಾಡಿದರು. ಇದರಿಂದ ಏಕಾಏಕಿ ಬೆದರಿದ ಅಂಬಾರಿ ಹೊತ್ತ ಸೋಮಣ್ಣ ಆನೆ ಹಿಂದಕ್ಕೆ ತಿರುಗಿದ ರೀತಿಯಲ್ಲಿಯೇ ಹಾಗೆಯೇ ಹಿಮ್ಮುಖವಾಗಿ ಓಡಲು ಆರಂಭಿಸಿತು. ಆಗ ಜನ ಮತ್ತೆ ಹೋ.. ಎಂದು ಕೂಗುತ್ತಾ ಹಿಂದಕ್ಕೆ ಬರುತ್ತಿದ್ದಂತೆ ಆನೆ ಮತ್ತೆ ಮತ್ತೆ ಮುಂದಕ್ಕೆ ಸಾಗಿತು. ಬಳಿಕ ನಡೆದಿದ್ದೆಲ್ಲಾ ಇತಿಹಾಸ..

ಒಟ್ಟಿನಲ್ಲಿ ಜಂಬೂ ಸವಾರಿ ಮೆರವಣಿಗೆ ವೇಳೆ ಬೆಳ್ಳಿಯ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ಬೆದರಿ ಹಿಂದಕ್ಕೆ ಓಡಿ ಹೋದ ಪ್ರಕರಣವು ದೇಶಾದ್ಯಂತ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವಿಡಿಯೋ ತುಣುಕು, ಪೋಟೋಗಳು ವೈರಲ್ ಆಗಿವೆ.

ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅರಣ್ಯ ಇಲಾಖೆಯು ಘಟನೆಯ ಸಮಗ್ರ ವರದಿ ನೀಡುವಂತೆ, ಶಿವಮೊಗ್ಗದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆಯೂ ಇದೆ. ಜೊತೆಗೆ ಆಡಳಿತಕ್ಕೂ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ಒಟ್ಟಾರೆ ಶಿವಮೊಗ್ಗದ ಜಂಬೂ ಸವಾರಿ ವೇಳೆ ನಡೆದ ಕಹಿ ಘಟನೆಯೂ ನಾಗರಿಕ ವಲಯದಲ್ಲಿ ನಾನಾ ರೀತಿಯ ಚರ್ಚೆಗೆಡೆ ಮಾಡಿಕೊಟ್ಟಿದೆ.

ಮೂಢ ನಂಬಿಕೆಯ ತಳಕು:

ಆನೆ ಮೇಲಿದ್ದ ಅಂಬಾರಿ ಮತ್ತು ಚಾಮುಂಡೇಶ್ವರಿಯ ವಿಗ್ರಹ ಕೆಳಗೆ ಬಿದ್ದು ತೀವ್ರ ಸ್ವರೂಪವಾಗಿರುವುದು ಆಸ್ತಿಕರಲ್ಲಿ ಆತಂಕ ಮೂಡಿದೆ. ಇದೊಂದು ಅಪಶಕುನ ಎಂದು ಒಂದು ವರ್ಗ ಹೇಳುತ್ತಿದೆ. ಆದರೆ ಇದನ್ನೆಲ್ಲಾ ಅಪಶಕುನ ಎಂದು ನಂಬಬಾರದು. ಇದು ಅನಗತ್ಯವಾಗಿ ಜನರಲ್ಲಿ ಆತಂಕ ಮತ್ತು ಭಯದ ವಾತಾವರಣ ಮೂಡುವಂತಾಗುತ್ತದೆ. ಇದೊಂದು ಆಕಸ್ಮಿಕ ಘಟನೆ. ಅದನ್ನು ಹಾಗಷ್ಟೇ ಭಾವಿಸಬೇಕು. ಬದಲಿ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಷ್ಟೇ ಎನ್ನುತ್ತಾರೆ ತಜ್ಞರು ಮಾತ್ರವಲ್ಲ ಅನುಭವಿಗಳು ಕೂಡ ಇದನ್ನೇ ಹೇಳುತ್ತಾರೆ.

ಆದರೆ ಆಗಮ ಶಾಸ್ತ್ರದ ಪ್ರಕಾರ ವಿಗ್ರಹಕ್ಕೆ ಹಾನಿಯಾದಾಗ ಪರ್ಯಾಯವಾಗಿ ಏನು ಮಾಡಬೇಕೋ ಅದನ್ನೇ ಅಷ್ಟೇ ನಂಬಿಕೆಯಿಂದ ಮಾಡಿದರೆ ಸಾಕು. ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಭರವಸೆಯ ಮಾತನ್ನು ಆಡುತ್ತಾರೆ.

PREV
Read more Articles on
click me!

Recommended Stories

ಅಮೆಜಾನ್‌ನಲ್ಲಿ ತರಿಸಿದ ಪ್ರೋಟೀನ್ ಬಾರ್ ಚಾಕೋಲೇಟ್‌ನಲ್ಲಿ ಜೀವಂತ ಹುಳು; ಈಗಾಗಲೆ 6 ತಿಂದಿದ್ದ ಟೆಕ್ಕಿ!
ಬಾಕಿ ಬಿಲ್ ಕೊಟ್ಟಿಲ್ಲವೆಂದು ಮೃತದೇಹ ತಡೆಹಿಡಿಯುವಂತಿಲ್ಲ; ಖಾಸಗಿ ಆಸ್ಪತ್ರೆಗಳಿಗೆ ಸಚಿವ ಖಾದರ್ ಖಡಕ್ ಎಚ್ಚರಿಕೆ!